ರಾಜ್ಯದಲ್ಲಿ ಹಲವು ಸ್ವಾಮೀಜಿಗಳು ಖಾವಿ ಧರಿಸಿ ಮಾಡಬಾರದ ಕೆಲಸ ಮಾಡಿ ಅತ್ತ ಮಠಗಳ ಮರ್ಯಾದೆಯನ್ನೂ, ಇತ್ತ ಅನುಯಾಯಿಗಳ, ಭಕ್ತರ ಮರ್ಯಾದೆಯನ್ನೂ ಮೂರಾಬಟ್ಟೆ ಮಾಡುತ್ತಿದ್ದಾರೆ. ಈ ಲಿಸ್ಟಿಗೆ ಹೊಸ ಸೇರ್ಪಡೆ ಮೂಡಲಗಿ ತಾಲೂಕಿನ ಶಿವಾಪುರ(ಹ) ಗ್ರಾಮದ ಅಡವಿ ಸಿದ್ದೇಶ್ವರ ಮಠದ ಅಡವಿ ಸಿದ್ದರಾಮ ಸ್ವಾಮೀಜಿ. ಈಗ ಆ ಸ್ವಾಮೀಜಿಯನ್ನು ಮಠದಿಂದ, ಗ್ರಾಮದಿಂದ ಹೊರಹಾಕಲಾಗಿದೆ.
ಆಗಿದ್ದೇನು..?
ವಿಜಯಪುರ ಜಿಲ್ಲೆಯ ಮಹಿಳೆಯೊಬ್ಬರು ಶನಿವಾರ ತನ್ನ ಮಗಳೊಂದಿಗೆ ಅಡವಿ ಸಿದ್ದೇಶ್ವರ ಮಠಕ್ಕೆ ಆಗಮಿಸಿದ್ದರು. ರಾತ್ರಿ 10 ಗಂಟೆಗೆ ಸುಮಾರಿಗೆ ಸ್ಥಳೀಯ ಯುವಕರು ಸ್ವಾಮೀಜಿಯ ಕೊಠಡಿಯೊಳಗೆ ಆ ಮಹಿಳೆ ಇರುವುದನ್ನು ನೋಡಿದ್ದಾರೆ. ಅದನ್ನು ಊರಿನವರಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು, ಸ್ವಾಮೀಜಿ ಹಾಗೂ ಮಹಿಳೆಯನ್ನು ಹೊರಗೆ ಎಳೆದು ತಂದಿದ್ದಾರೆ. ಸ್ವಾಮೀಜಿ, ಆ ಮಹಿಳೆ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಂದಹಾಗೆ ಮಠದಲ್ಲಿಯೇ ಉಳಿದುಕೊಂಡಿದ್ದ ಮಹಿಳೆಗೆ 15 ವರ್ಷದ ಮಗಳೂ ಇದ್ದಾರೆ.
‘ರಾತ್ರಿ ವೇಳೆ ಮಠದಲ್ಲಿ ಯಾರೂ ಇಲ್ಲದ ವೇಳೆ ಆ ಮಹಿಳೆ ನಿಮ್ಮ ಕೊಠಡಿಯೊಳಗೆ ಇರುವುದು ಯಾಕೆ.. ಇದು ಗ್ರಾಮಸ್ಥರ ಪ್ರಶ್ನೆ. ರಾತ್ರಿ ತಡವಾಗಿದ್ದರಿಂದ ಇಲ್ಲೇ ಉಳಿದುಕೊಂಡಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ.. ಇದು ಸ್ವಾಮೀಜಿ ನೀಡಿರುವ ಸಮುಜಾಯಿಷಿ. ಆದರೆ ಗ್ರಾಮಸ್ಥರು ಸಮಾಧಾನಗೊಂಡಿಲ್ಲ. ಪರಸ್ಥಿತಿ ಗಂಭೀರವಾಗುವ ಹೊತ್ತಿಗೆ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು, ತಡರಾತ್ರಿ ಮಹಿಳೆ ಮತ್ತು ಮಗಳನ್ನು ಸಾಂತ್ವನ ಕೇಂದ್ರಕ್ಕೆ ಕರೆದೊಯ್ದು ಬಿಟ್ಟಿದ್ದಾರೆ.
ಗ್ರಾಮಸ್ಥರ ವಾದವೇನು..?
ಮಠದಲ್ಲಿ ಪೊಲೀಸ್ ಅಧಿಕಾರಿಗಳಾದ ಸಿಪಿಐ ಶ್ರೀಶೈಲ್ ಬ್ಯಾಕೋಡ, ಪಿಎಸ್‌ಐ ರಾಜು ಪೂಜಾರಿ ಗ್ರಾಮಸ್ಥರನ್ನೂ ಕರೆದು ಸಭೆ ಮಾಡಿದ್ದಾರೆ. ಆದರೆ ಗ್ರಾಮಸ್ಥರು ಮಾತ್ರ ಹಠ ಬಿಟ್ಟಿಲ್ಲ. ಯಾವುದೇ ಕಾರಣಕ್ಕೂ ಸ್ವಾಮೀಜಿ ಮಠದಲ್ಲಿ ಇರಲು ಅವಕಾಶ ಕೊಡುವುದಿಲ್ಲ ಎಂದಿದ್ದಾರೆ.
ಅಡವಿ ಸಿದ್ದರಾಮ ಸ್ವಾಮೀಜಿ ವಾದವೇನು..?
‘ಮಹಿಳೆ ಹಾಗೂ ಮಹಿಳೆಯ ಸಂಬಂಧಿಕರೂ ಮಠದ ಭಕ್ತರು. ಅವರೆಲ್ಲರೂ ಮಠಕ್ಕೆ ಭೇಟಿ ನೀಡುತ್ತಿದ್ದರು. ಮಹಿಳೆ ಮತ್ತು ಅವರ ಮಗಳು ಶನಿವಾರ ತಡವಾಗಿಯೇ ಮಠಕ್ಕೆ ಬಂದಿದ್ದರು. ವಾಪಸ್ ಹೋಗಲು ಕೂಡ ತಡವಾಗಿದ್ದರಿಂದ ಮಠದಲ್ಲಿ ಉಳಿದುಕೊಂಡಿದ್ದರು. ಗ್ರಾಮದ ಕೆಲವರು ನಮ್ಮ ಮೇಲಿನ ವೈಷಮ್ಯಕ್ಕೆ ಭಕ್ತರನ್ನು ಬಲಿಪಶು ಮಾಡುವುದು ಸರಿ ಅಲ್ಲ. ನಮ್ಮ ಮೇಲಿನ ಆರೋಪ ಸಾಬೀತು ಮಾಡಿದರೆ ಶಿಕ್ಷೆ ಅನುಭವಿಸಲು ಸಿದ್ಧ.
ನನ್ನ ಅಥವಾ ಮಠದ ಮೇಲಿನ ದ್ವೇಷಕ್ಕೆ ಆ ಮಹಿಳೆ ಮತ್ತು ಮಗಳ ಹೆಸರಿಗೆ ಕಳಂಕ ತರಬೇಡಿ. ನನ್ನ ಮೇಲಿನ ದ್ವೇಷಕ್ಕೆ ಅಮಾಯಕಿಯ ಬದುಕು, ಗೌರವ ಮಣ್ಣು ಪಾಲಾಗಬಾರದು ಎಂದು ಬೇಡಿಕೊಂಡಿದ್ದಾರೆ ಅಡವಿ ಸಿದ್ದರಾಮ ಸ್ವಾಮೀಜಿ. ತಪ್ಪು ಆಗಿದ್ದರೆ ಸಾಕ್ಷಿ ಕೊಡಿ. ಶಿಕ್ಷೆ ಅನುಭವಿಸುವುದಕ್ಕೆ ನಾನು ಸಿದ್ಧ ಎಂದೂ ಹೇಳಿದ್ದಾರೆ.



