ಚಿತ್ರರಂಗಕ್ಕೆ ಡಾ.ರಾಜ್ ಕುಮಾರ್ ಅವರ ಮತ್ತೊಬ್ಬ ಮೊಮ್ಮಗ ಎಂಟ್ರಿ ಕೊಟ್ಟಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಡಾ.ರಾಜ್ ಕುಟುಂಬದ ಕೊಡುಗೆ ದೊಡ್ಡದು. ಈಗ 3ನೇ ಜನರೇಷನ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದೆ.ಮೊದಲ ಜನರೇಷನ್ ಸ್ವತಃ ಅಣ್ಣಾವ್ರು. ಅವರ ಜೊತೆ ಪಾರ್ವತಮ್ಮ, ತಮ್ಮ ವರದರಾಜ್ ಇದ್ದರು. ಚಿನ್ನೇಗೌಡ, ಗೋವಿಂದರಾಜ್ ಅವರೆಲ್ಲ ರಾಜ್ ಜೊತೆಯಲ್ಲೇ ಇದ್ದವರು. ಬೆಳೆದವರು.
ಎರಡನೇ ಜನರೇಷನ್ ಶುರುವಾಗುವುದು ಶಿವಣ್ಣ ಅವರಿಂದ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಇನ್ನು ಅವರ ಕುಟುಂಬದವರೇ ಆದ ವಿಜಯ್ ರಾಘವೇಂದ್ರ, ಶ್ರೀಮುರಳಿ, ಸುನಾದ್ ರಾಜ್ ಅವರದ್ದು ಇನ್ನೊಂದು ಜನರೇಷನ್. ಗೀತಾ, ಅಶ್ವಿನಿ ಅವರೆಲ್ಲ ನಿರ್ಮಾಪಕಿಯಾಗಿ ಬಂದವರು.
ಈಗ 3ನೇ ಜನರೇಷನ್ ಶುರುವಾಗಿದೆ. ಈಗಾಗಲೇ ವಿನಯ್, ಯುವ, ಧನ್ಯಾ ರಾಮ್ ಕುಮಾರ್, ಧಿರೇನ್ ರಾಮ್ ಕುಮಾರ್, ನಿರ್ಮಾಪಕಿಯಾಗಿ ನಿವೇದಿತಾ.. ಹೀಗೆ ಬರುತ್ತಲೇ ಇದ್ಧಾರೆ. ಇದೀಗ ‘ನಿಂಬಿಯಾ ಬನಾದ ಮ್ಯಾಗ’ ಚಿತ್ರದ ಮೂಲಕ ಷಣ್ಮುಖ ಎಂಟ್ರಿ ಕೊಟ್ಟಿದ್ದಾರೆ. ಇವರು ಡಾ||ರಾಜ್ ಕುಮಾರ್ ಪುತ್ರಿ ಲಕ್ಷ್ಮೀ ಹಾಗೂ ಗೋವಿಂದರಾಜು ಅವರ ಪುತ್ರ.
ಲಕ್ಷ್ಮೀ, ಡಾ.ರಾಜ್ ಕುಮಾರ್, ಪಾರ್ವತಮ್ಮ ದಂಪತಿಯ ಕೊನೆಯ ಮಗಳು.
ವಿ.ಮಾದೇಶ್ ನಿರ್ಮಾಣದ, ಅಶೋಕ್ ಕಡಬ ನಿರ್ದೇಶಿಸಿರುವ ‘ನಿಂಬಿಯಾ ಬನಾದ ಮ್ಯಾಗ’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ಶ್ರೀಮುರಳಿ ಸಹ ಟೀಸರ್ ನೋಡಿ, ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ್ದಾರೆ. ಶೀಘ್ರದಲ್ಲೇ ಟ್ರೇಲರ್ ಬಿಡುಗಡೆಯಾಗಲಿದೆ. ಟ್ರೇಲರ್ ರಿಲೀಸ್ ಮಾಡುವುದು ಶಿವರಾಜ್ ಕುಮಾರ್.
ಅಂದಹಾಗೆ ‘ನಿಂಬಿಯಾ ಬನಾದ ಮ್ಯಾಗ’ ಚಿತ್ರ ಪೇಜ್ 1 ಹಾಗೂ ಪೇಜ್ 2 ಎಂದು ಎರಡು ಭಾಗಗಳಲ್ಲಿ ರಿಲೀಸ್ ಆಗಲಿದೆ. ಮೊದಲು ಪೇಜ್ 1 ಬಿಡುಗಡೆಯಾಗಲಿದೆ. ಪೇಜ್ 2 ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಕಳೆದು ಹೋಗಿದ್ದ ಮಗು ಪುನಃ ಬಂದೇ ಬರುತ್ತಾನೆ ಎಂದು ಕಾಯುವ ತಾಯಿ, ವಾಪಸ್ ಬರುವ ಮಗನ ಕಥೆ ಚಿತ್ರದಲ್ಲಿದೆ.
ಷಣ್ಮುಖ ಅವರಿಗೆ ನಾಯಕಿಯಾಗಿ ತನುಶ್ರೀ ಅಭಿನಯಿಸಿದ್ದಾರೆ. 25 ವರ್ಷಗಳ ನಂತರ ‘ಮೇಘಮಾಲೆ’ ಚಿತ್ರದ ಖ್ಯಾತಿಯ ಸುನಾದ್ ರಾಜ್ ಕೂಡಾ ಚಿತ್ರದಲ್ಲಿ ನಟಿಸಿದ್ದಾರೆ. ತ್ರಿಶಾ, ಪಂಕಜ್ ನಾರಾಯಣ್, ಸಂಗೀತ, ಭವ್ಯಾ, ರಾಮಕೃಷ್ಣ, ಮೂಗು ಸುರೇಶ್, ಪದ್ಮಾ ವಾಸಂತಿ, ಭವ್ಯ ಮುಂತಾದವರು ತಾರಾಬಳಗದಲ್ಲಿದ್ದಾರೆ. ಆಶೋಕ್ ಕಡಬ ನಿರ್ದೇಶನದ 5ನೇ ಚಿತ್ರ ‘ನಿಂಬಿಯಾ ಬನಾದ ಮ್ಯಾಗ’. ಆರೋನ್ ಕಾರ್ತಿಕ್ ಸಂಗೀತ ನೀಡಿರುವ ನಾಲ್ಕು ಹಾಡುಗಳು ಈ ಚಿತ್ರದಲ್ಲಿದೆ. ಪಳನಿ ಡಿ ಸೇನಾಪತಿ ಹಿನ್ನೆಲೆ ಸಂಗೀತ ನೀಡಿದ್ದಾರೆ. ಸಿದ್ದು ಕಾಂಚನಹಳ್ಳಿ ಛಾಯಾಗ್ರಹಣ, ರವಿತೇಜ ಸಂಕಲನ ಹಾಗೂ ಮದನ್ ಹರಿಣಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಆದರೆ ಇದು ಕಮರ್ಷಿಯಲ್ ಚಿತ್ರಕ್ಕಿಂತ ಬೇರೆಯದೇ ರೀತಿಯಲ್ಲಿದೆ ಎನ್ನುತ್ತಿದೆ ಚಿತ್ರತಂಡ.



