ಎರಡನೇ ಬಾರಿ ಸಿಎಂ ಆಗಿ ದಾಖಲೆ ಬರೆದ ಸಿದ್ದರಾಮಯ್ಯ (CM Siddaramaiah) ಅವರಿಗೆ ಮೊದಲ ಅವಧಿಯಲ್ಲಿ ಇದ್ದಂತಹ ಕಂಟ್ರೋಲ್ ಇಲ್ಲವೇನೋ ಎಂಬ ಅನುಮಾನ ಮೂಡುವಂತಾಗಿದೆ. ಬಿ.ಆರ್.ಪಾಟೀಲ್ (BR Patil) ಮೊದಲ ಬಾರಿಗೆ ಅಸಮಾಧಾನದ ಪತ್ರ ಬರೆದಿದ್ದರು. ಅದನ್ನು ಬಸವರಾಜ ರಾಯರೆಡ್ಡಿ (Basaraja Rayareddy) ಸಮರ್ಥಿಸಿಕೊಂಡಿದ್ದರು. ಅದು ಸುಳ್ಳು ಎಂದು ಕಾಂಗ್ರೆಸ್ಸಿಗರು (Congress) ಒಂದು ಕಡೆ ವಾದ ಮಾಡುತ್ತಲೇ, ಮತ್ತೊಂದು ಕಡೆ ಅದನ್ನು ನಿಜ ಎಂದು ಒಪ್ಪಿಕೊಳ್ಳುತ್ತಿದ್ದರು. ಪತ್ರ ನಿಜ. ಆದರೆ ಅದರೊಳಗಿದ್ದ ವಿಷಯ ಮಾತ್ರ ಬೇರೆ ಎನ್ನುತ್ತಿದ್ದರು. ನಂತರ ಸಚಿವ ಚೆಲುವರಾಯ ಸ್ವಾಮಿ (Cheluvuraya Swamy) ರಂಪ ಮಾಡಿಕೊಳ್ಳುತ್ತಲೇ ಇದ್ದಾರೆ. ಎರಡು ಸಿಐಡಿ ವಿಚಾರಣೆ ಎದುರಿಸುತ್ತಿದ್ಧಾರೆ. ಕ್ಲೀನ್ ಚಿಟ್ ಪಡೆದುಕೊಳ್ಳಲೂಬಹುದು. ಇದರ ಮಧ್ಯೆ ಗುತ್ತಿಗೆದಾರರು (Contractors) ಸಿಡಿದೆದ್ದಿದ್ದಾರೆ. 15% ಕಮಿಷನ್ ಆರೋಪ ಮಾಡಿದ ಕೆಂಪಣ್ಣನವರೇ (Contractor Kempanna) , ನಂತರ ನನ್ನ ಗಮನಕ್ಕೆ ಅದು ಬಂದಿಲ್ಲ ಎಂದು ಗೊಂದಲ ಸೃಷ್ಟಿಸಿಬಿಟ್ಟರು. ಬಹುಶಃ ಬಿಲ್ ಕ್ಲಿಯರ್ ಆಗುವ ಭರವಸೆ ಸಿಕ್ಕಿರಬಹುದು. ಹೀಗೆ ಸರ್ಕಾರದ ಮಂದಿ ಗ್ಯಾರಂಟಿ ಜಾರಿ ಮಾಡಿದ ಖುಷಿಯನ್ನು ಅನುಭವಿಸಲು ಆಗದಂತೆ ಒಂದಲ್ಲ ಒಂದು ರಂಪದಲ್ಲಿ ಸಿಕ್ಕು ಒದ್ದಾಡುತ್ತಿರುವಾಗಲೇ.. ಬಸವರಾಜ ರಾಯರೆಡ್ಡಿ ಸಿಡಿದೆದ್ದು ಕುಳಿತಿದ್ದಾರೆ.
ಕರ್ನಾಟಕ ಭ್ರಷ್ಟ ರಾಜ್ಯ ಆಗುತ್ತಿದೆ. ರಾಷ್ಟ್ರ ಮಟ್ಟದಲ್ಲಿ ಕರ್ನಾಟಕದ ಮಾನ ಮರ್ಯಾದೆ ಹಾಳಾಗುತ್ತಿದೆ. ಇದರ ಬಗ್ಗೆ ನನಗೂ ನೋವಿದೆ. ಇದನ್ನು ತೊಲಗಿಸುವ ನಿಟ್ಟಿನಲ್ಲಿ ಸಿಎಂ ಕೆಲಸ ಮಾಡಬೇಕು. ಇದರಿಂದ ಕರ್ನಾಟಕಕ್ಕೆ ಕೆಟ್ಟಹೆಸರು ಬರುತ್ತಿದೆ. ಷ್ಟಾಚಾರ ತಡೆಗಟ್ಟುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನಷ್ಟು ಹೆಚ್ಚು ಸೂಕ್ತ, ಪರಿಣಾಮಕಾರಿ ಕ್ರಮ ತೆಗೆದುಕೊಳ್ಳಬೇಕು. ಗುತ್ತಿಗೆದಾರರ ಸಂಘದಿಂದ ಶೇ.15ರಷ್ಟು ಕಮಿಷನ್ ಆರೋಪ ಕೇಳಿ ಬಂದಿದೆ. ಈ ಹಿಂದೆ ಬಿಜೆಪಿಯಲ್ಲಿ ಶೇ.40 ಕಮಿಷನ್ ಆರೋಪ ಮಾಡಿದ್ದರು. ಈಗ ಶೇ.15ರಷ್ಟು ಕಮಿಷನ್ ಎಂದು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ವಿಷಾದ ವ್ಯಕ್ತಪಡಿಸಿದ್ದಾರೆ.
ಚುನಾವಣೆ ವ್ಯವಸ್ಥೆ ಸಹ ಹದಗೆಟ್ಟಿದೆ. ನಾಮಪತ್ರ ನೀಡುವ ದಿನದಿಂದಲೇ ರಾಜಕೀಯ ವ್ಯವಸ್ಥೆ ಹದಗೆಡುತ್ತಿದೆ. ಈ ಬಗ್ಗೆ ಸಿಎಂ, ಪ್ರಧಾನಿ ಗಮನಕ್ಕೆ ತಂದಿದ್ದೇನೆ. ಇದು ರಾಷ್ಟ್ರ ಮಟ್ಟದಲ್ಲಿ ಚರ್ಚೆ ಆಗಬೇಕು. ಚುನಾವಣೆ ಎಂಬುದು ಒಂದು ಭ್ರಷ್ಟಾಚಾರ ಆಗಿದೆ ಎಂದರು. ವರ್ಗಾವಣೆಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಸಚಿವರು ಕ್ಲಾಸ್ ಒಂದರಿಂದ ಉಳಿದ ಅಧಿಕಾರಿಗಳನ್ನು ವರ್ಗಾವಣೆ ಮಾಡಬಾರದು. ಈ ಬಗ್ಗೆ ಸಿಎಂಗೆ ಪತ್ರ ಬರೆಯುತ್ತಿದ್ದೇನೆ. ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಬೇಕು ಎಂದಿದ್ದಾರೆ.
ಇದು ಸಹಜವಾಗಿಯೇ ಬಿಜೆಪಿ ನಾಯಕರಿಗೆ ಪ್ರಬಲ ಅಸ್ತ್ರವನ್ನೊದಗಿಸಿದಂತಾಗಿದೆ. ಒಂದೆಡೆ ಬಿ.ಆರ್.ಪಾಟೀಲ್, ಮತ್ತೊಂದು ಕಡೆ ಚೆಲುವರಾಯ ಸ್ವಾಮಿ, ಇನ್ನೊಂದೆಡೆ ಬಸವರಾಜ ರಾಯರೆಡ್ಡಿ, ಗುತ್ತಿಗೆದಾರರ ಕಂಪ್ಲೇಂಟುಗಳು.. ಇವನ್ನೆಲ್ಲ ನೋಡುತ್ತಿದ್ದರೆ, ಸಿದ್ದರಾಮಯ್ಯ ತಮ್ಮ ಎರಡನೇ ಅವಧಿಯಲ್ಲಿ ಮೊದಲಿನ ಅವಧಿಯಲ್ಲಿದ್ದಷ್ಟು ಪ್ರಬಲರಾಗಿಲ್ಲ ಎಂಬ ಸಂಶಯ ಮೂಡುತ್ತಿದೆ.



