ಹಾಸನ ಟಿಕೆಟ್ ಗೊಂದಲಕ್ಕೆ ನಿಗದಿಯಾಗಿದ್ದ ಮತ್ತೊಂದು ಸಭೆಯೂ ರದ್ದಾಗಿದೆ. ಫೆಬ್ರವರಿ 4, ಫೆಬ್ರವರಿ 12, ಫೆಬ್ರವರಿ 18 ಹಾಗೂ ಫೆಬ್ರವರಿ 26ರ ಸಭೆ ರದ್ದಾಗಿದೆ. ಮುಂದಿನ ಸಭೆ ಯಾವಾಗ ಅನ್ನೋದು ಗೊತ್ತಿಲ್ಲ. ಅಖಾಡಕ್ಕೆ ದೊಡ್ಡಗೌಡ್ರು ಎಂಟ್ರಿ ಕೊಟ್ಟಿದ್ದಾರೆ ಎನ್ನುವುದು ಸದ್ಯಕ್ಕಿರುವ ಮಾಹಿತಿ.
ಇನ್ನೇನು ಮುಗೀತು ಎಂಬಷ್ಟರ ಮಟ್ಟಿಗೆ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ್ದ ಹಾಸನ ಟಿಕೆಟ್ ಫೈಟ್ ಈಗ ಮತ್ತಷ್ಟು ಜಟಿಲವಾಗಿದೆ. ಭಾನುವಾರ ಟಿಕೆಟ್ ಗೊಂದಲಕ್ಕೆ ಪರಿಹಾರ ನೀಡಲು ಸಭೆ ಕರೆದಿದ್ದ ಕುಮಾರಸ್ವಾಮಿ, ಶನಿವಾರ ರಾತ್ರಿಯೇ ದಿಢೀರ್ ಎಂದು ಸಭೆ ರದ್ದು ಮಾಡಿದ್ದರು. ಭವಾನಿ ರೇವಣ್ಣ ಅವರಿಗೆ ಟಿಕೆಟ್ ಇಲ್ಲ. ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಸಭೆಗೂ ಮುನ್ನ ಹೇಳಿದ್ದ ಹೆಚ್ಡಿಕೆ, ಸಭೆಗೂ ಮುನ್ನವೇ ತಮ್ಮ ಮನಸ್ಸಿನ ಮಾತನ್ನು ಹೇಳಿದ್ದು ಸಭೆ ರದ್ದಾಗೋಕೆ ಕಾರಣವಾಯ್ತಾ? ಹೇಳೋಕಾಗಲ್ಲ. ಆದರೆ ಸಭೆಯಂತೂ ರದ್ದಾಯ್ತು.
ದೇವೇಗೌಡರು ನನ್ನ ಗಮನಕ್ಕೆ ಬಾರದೇ ಯಾವುದೇ ನಿರ್ಧಾರ ಬೇಡ. ಎಲ್ಲರೂ ಕುಳಿತು ಒಮ್ಮತದ ನಿರ್ಧಾರ ತೆಗೆದುಕೊಳ್ಳೋಣ. ಪಕ್ಷ, ಕುಟುಂಬಕ್ಕೆ ಹಿನ್ನಡೆಯಾಗದಂತೆ ನೋಡಿಕೊಳ್ಳಬೇಕು.. ಟಿಕೆಟ್ ಘೋಷಣೆಗೆ ಇನ್ನೂ ಸಮಯವಿದೆ ಎಂದು ಕುಮಾರಸ್ವಾಮಿಗೆ ಹೇಳಿದ್ದಾರೆ ಎನ್ನುವುದು ಜೆಡಿಎಸ್ ಮೂಲಗಳು ಹೇಳುತ್ತಿರುವ ಮಾಹಿತಿ.ಈ ವಿಚಾರಕ್ಕೆ ಬೇಸರಗೊಂಡ ಕುಮಾರಸ್ವಾಮಿ ಭವಾನಿ ರೇವಣ್ಣ ವಿರುದ್ಧ ಸಿಟ್ಟಾದಂತಿದೆ.. ದೇವೇಗೌಡರ ಆರೋಗ್ಯಕ್ಕಿಂತ ನನಗೆ ಯಾವುದು ಮುಖ್ಯವಲ್ಲ. ಅವರ ಆರೋಗ್ಯ ಕೆಡಿಸಲು ನಾನು ಬಯಸಲ್ಲ.. ಆದ್ರೆ, ಬೇರೆಯವರಿಗೆ ಗೌಡರ ಆರೋಗ್ಯದ ಬಗ್ಗೆ ಕಾಳಜಿ ಇಲ್ಲ ಎಂದು ಪರೋಕ್ಷವಾಗಿ ಭವಾನಿ ರೇವಣ್ಣ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ.
ಹಾಸನ ಟಿಕೆಟ್ ಪಡೆಯಲೇ ಬೇಕು ಎಂದು ರೇವಣ್ಣ ದಂಪತಿ ಪಟ್ಟು ಹಿಡಿದಂತಿದೆ..ಈಗಾಗಲೇ ಕ್ಷೇತ್ರದಲ್ಲಿ ರೇವಣ್ಣ ದಂಪತಿ ಆ್ಯಕ್ಟಿವ್ ಆಗಿದ್ದಾರೆ. ಸ್ವರೂಪ್ ಪ್ರಕಾಶ್ ಬಹಿರಂಗ ಪ್ರಚಾರದಿಂದ ಸ್ವಲ್ಪ ಹಿಂದೆ ಸರಿದಿದ್ದಾರೆ.ಆದರೂ ಎಚ್ಡಿಕೆ ಕೃಪಾ ಕಟಾಕ್ಷದ ನಿರೀಕ್ಷೆಯಲ್ಲಿದ್ದಾರೆ.ಇದೆಲ್ಲದರ ಮಧ್ಯೆ ಹಾಸನ ಟಿಕೆಟ್ ವಿಚಾರದಲ್ಲಿ ನನ್ನ ನಿರ್ಧಾರವೇ ಅಂತಿಮ ಎನ್ನುತ್ತಿದ್ದಾರೆ ಕುಮಾಸ್ವಾಮಿ.
ಹಾಸನ ಟಿಕೆಟ್ ವಿಚಾರದಲ್ಲಿ ಗೌಡರ ಕುಟುಂಬದಲ್ಲಿನ ಕಿತ್ತಾಟ ವಿರೋಧಿಗಳಿಗೂ ಆಹಾರ ಒದಗಿಸಿದೆ. ಮನೆ ಮ್ಯಾನೇಜ್ ಮಾಡಲಾಗದವರು ರಾಜ್ಯ ಮ್ಯಾನೇಜ್ ಮಾಡ್ತಾರಾ? ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡ ಟೀಕಿಸಿದ್ದಾರೆ. ನಮ್ಮ ಕುಟುಂಬದಲ್ಲಿ ನಡೀತಿರೋದು ರಾಜ್ಯದ ಜನರ ಸಮಸ್ಯೆಗೆ ಸ್ಪಂದಿಸುವ ಹೋರಾಟ.. ಮೊದಲು ನಿಮ್ಮಕುಟುಂಬದ ಬಗ್ಗೆ ನೋಡಿಕೊಳ್ಳಿ ಎಂದಿದ್ದಾರೆ ಕುಮಾರಸ್ವಾಮಿ. ಪ್ರಲ್ಹಾದ್ ಜೋಶಿ ತಮ್ಮನ ವಿರುದ್ಧ ಕಿಡಿಕಾರಿದ್ದಾರೆ.
ಹಾಸನ ಜೆಡಿಎಸ್ ಟಿಕೆಟ್ ದಂಗಲ್ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸಭೆ ಕರೆಯುವ ಮೂಲಕ ಟಿಕೆಟ್ ಫೈನಲ್ಗೆ ಮುಂದಾಗಿದ್ದ ಕುಮಾರಸ್ವಾಮಿಗೆ ಈಗ ಮತ್ತೊಮ್ಮೆ ಹಿನ್ನಡೆಯಾಗಿದೆ. ಮುಂದಿನ ಸಭೆ ಯಾವಾಗ? ಆ ಸಭೆ ಯಾವಾಗ ರದ್ದಾಗುತ್ತೆ? ಎನ್ನುವುದು ಕುಹಕಿಗಳ ಪ್ರಶ್ನೆ. ಆದರೆ ಜೆಡಿಎಸ್ ಟಿಕೆಟ್ ಫೈನಲ್ ಆಗುವುದೇ ಇಂತಹ ವಿಚಾರಗಳಾದ ಮೇಲೆ. ಅದು ಜೆಡಿಎಸ್ ಸಂಪ್ರದಾಯವೂ ಹೌದು.



