ಡಾ.ರಾಜ್ ಕುಮಾರ್ ಅವರನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿ ವಿರುದ್ಧ ಸ್ಪರ್ಧೆ ಮಾಡುವಂತೆ ಆಗಿನ ಜನತಾ ಪರಿವಾರದವರು ಬೆನ್ನು ಬಿದ್ದಿದ್ದರು. ಡಾ.ರಾಜ್ ಆ ಒತ್ತಡ ತಡೆಯಲಾರದೆ, ಒಂದಷ್ಟು ದಿನ ನಾಪತ್ತೆಯಾಗಿದ್ದುದ್ದು, ನಾಮಪತ್ರ ಸಲ್ಲಿಕೆ ಮುಗಿದ ನಂತರವಷ್ಟೇ ಮನೆಗೆ ಬಂದಿದ್ದ ಕಥೆ ಎಲ್ಲರಿಗೂ ಗೊತ್ತಿರುವಂತದ್ದೇ. ಹೀಗಾಗಿಯೇ ಡಾ.ರಾಜ್ ಇವತ್ತಿಗೂ ರಾಜಕೀಯ ಪಕ್ಷಗಳನ್ನೆಲ್ಲ ಮೀರಿ ವರನಟರಾಗಿದ್ದಾರೆ. ಈಗ ಅಶ್ವಿನಿ ಪುನೀತ್ ರಾಜ್ʻಕುಮಾರ್ ಕೂಡಾ ಮಾವ ಡಾ.ರಾಜಕುಮಾರ್ ಹಾಗೂ ಪತಿ ದಿ.ಪುನೀತ್ ರಾಜಕುಮಾರ್ ಅವರ ಹಾದಿಯಲ್ಲೇ ಸಾಗಿದ್ಧಾರೆ.
ನೋ ಪಾಲಿಟಿಕ್ಸ್ ಎಂದಿರುವ ಅಶ್ವಿನಿ ಪುನೀತ್ ರಾಜಕುಮಾರ್ :
ದಿವಂಗತ ನಟ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ಗೆ ರಾಜ್ಯಸಭೆ ಟಿಕೆಟ್ ನೀಡಲು ಬಿಜೆಪಿ ಮುಂದಾಗಿತ್ತು ಎನ್ನುವ ವಿಚಾರ ಈಗ ಗೊತ್ತಾಗಿದೆ. ರಾಜ್ಯ ಬಿಜೆಪಿಯಿಂದ ಅಶ್ವಿನಿ ಪುನೀತ್ಗೆ ಟಿಕೆಟ್ ನೀಡುವ ಪ್ರಸ್ತಾಪಕ್ಕೆ ಬಿಜೆಪಿ ಹೈಕಮಾಂಡ್ ಕೂಡ ಒಪ್ಪಿಗೆ ಸೂಚಿಸಿತ್ತು. ಒಬಿಸಿ ವರ್ಗಕ್ಕೆ ರಾಜ್ಯಸಭಾ ಸ್ಥಾನ ಎಂದು ಅಭಿಪ್ರಾಯಪಟ್ಟಿದ್ದ ಹೈಕಮಾಂಡ್ ಅಭ್ಯರ್ಥಿಯ ಹೆಸರನ್ನು ಶಿಫಾರಸು ಮಾಡುವಂತೆ ಸೂಚನೆ ನೀಡಿತ್ತು. ಈ ಹಂತದಲ್ಲಿ ರಾಜ್ಯ ಬಿಜೆಪಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಹೆಸರನ್ನು ಪ್ರಸ್ತಾಪ ಮಾಡಿತ್ತು ಎಂದು ಮೂಲಗಳು ಹೇಳುತ್ತಿವೆ. ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಅಶ್ವಿನಿ ಹೆಸರನ್ನು ರಾಜ್ಯ ಬಿಜೆಪಿ ತಿಳಿಸಿತ್ತು. ಇದನ್ನು ಗಮನಿಸಿದ ಹೈಕಮಾಂಡ್ ಇದು ಒಳ್ಳೆಯ ಆಯ್ಕೆ ಎಂದಿತ್ತಲ್ಲದೆ, ಅದಕ್ಕೂ ಮುನ್ನ ಅಶ್ವಿನಿ ಅವರು ಒಪ್ಪುತ್ತಾರಾ ಎಂಬುದನ್ನ ತಿಳಿಯಿರಿ ಎಂದು ಹೇಳಿತ್ತು.
ಹೈಕಮಾಂಡ್ ಸೂಚನೆ ನಂತರ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರನ್ನು ರಾಜ್ಯ ಬಿಜೆಪಿ ಸಂಪರ್ಕ ಮಾಡಿತ್ತು. ಈ ಹಂತದಲ್ಲಿ ಬಿಜೆಪಿ ನಾಯಕರ ಪ್ರಸ್ತಾಪವನ್ನಅಶ್ವಿನಿ ಪುನೀತ್ ರಾಜ್‌ಕುಮಾರ್ ನಿರಾಕರಿಸಿದ್ದಾರೆ. ರಾಜಕೀಯದಿಂದ ನಮ್ಮ ಕುಟುಂಬ ಮೊದಲಿನಿಂದಲೂ ದೂರ ಉಳಿದುಕೊಂಡು ಬಂದಿದೆ ಎಂದು ಅವರಿಗೆ ತಿಳಿಸಿದ್ದಾರೆ. ಅಶ್ವಿನಿ ಪುನೀತ್ ನಿರಾಕರಣೆ ಬಳಿಕ ನಾರಾಯಣ ಬಾಂಢಗೆಗೆ ರಾಜ್ಯಸಭಾ ಟಿಕೆಟ್ ಸಿಕ್ಕಿದೆ.
ನಮ್ಮ ಕುಟುಂಬ ಮೊದಲಿನಿಂದಲೂ ರಾಜಕೀಯದಲ್ಲಿಲ್ಲ. ಹೀಗಾಗಿ ನಾನೂ ಕೂಡ ಇರೋದು ಸರಿಯಾಗೋದಿಲ್ಲ ಎನ್ನುವುದು ಅಶ್ವಿನಿ ಪುನೀತ್ ಕೊಟ್ಟಿರುವ ಸ್ಪಷ್ಟ ಉತ್ತರ. ಮಾವ ಹಾಗೂ ಪತಿ ಇಬ್ಬರೂ ರಾಜಕೀಯದಿಂದ ದೂರವೇ ಇದ್ದರು. ನಾನೂ ಅದೇ ಹಾದಿಯಲ್ಲಿರುತ್ತೇನೆ ಎಂಬ ಸಂದೇಶ ಕಳಿಸಿದ್ಧಾರೆ ಅಶ್ವಿನಿ.
ಡಾ.ರಾಜ್ ಕುಟುಂಬದಿಂದ ಸದ್ಯಕ್ಕೆ ರಾಜಕೀಯದಲ್ಲಿರುವುದು ಗೀತಾ ಶಿವರಾಜ್ʻಕುಮಾರ್. ಶಿವಣ್ಣ ಸ್ಪರ್ಧೆ ಮಾಡುತ್ತಿಲ್ಲವಾದರೂ, ಪತ್ನಿಯ ರಾಜಕೀಯಕ್ಕೆ ಬೆನ್ನೆಲುಬಾಗಿದ್ಧಾರೆ.



