ಅಣ್ಣಾಮಲೈ. ಹುಟ್ಟ ತಮಿಳಿಗ. ಆದರೆ ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿ ಸಂಚಲನ ಮೂಡಿಸಿದ್ದ ಖಡಕ್ ಆಫೀಸರ್. ವಿಆರ್ʻಎಸ್ ತೆಗೆದುಕೊಂಡು ರಾಜಕೀಯಕ್ಕೆ ಬಂದ ಅಣ್ಣಾಮಲೈ, ತಮಿಳುನಾಡು ಬಿಜೆಪಿಗೆ ಹೊಸ ರಕ್ತ ತುಂಬಿದ್ದಾರೆ. ಹೊಸ ಉತ್ಸಾಹ ತುಂಬಿದ್ಧಾರೆ. ಎಷ್ಟರಮಟ್ಟಿಗೆಂದರೆ.. ಈ ವರ್ಷ ನಡೆಯುವ ಲೋಕಸಭೆ ಹಾಗೂ ೨೦೨೬ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗಳ ಮೇಲೆ ಬಿಜೆಪಿ ಭಾರೀ ನಿರೀಕ್ಷೆ ಇಟ್ಟುಕೊಂಡಿದೆ.
ಆದರೆ ಅಣ್ಣಾಮಲೈ ಹೇಳೋದೇ ಬೇರೆ. ನಾವು ಈಗ.. ಅಥವಾ ಇನ್ನೈದು ವರ್ಷದಲ್ಲಿ ಗೆಲ್ಲದೇ ಇರಬಹುದು. ಆದರೆ ಇನ್ನು ೧೦ ವರ್ಷದ ನಂತರವಾದರೂ ಅಧಿಕಾರ ನಮ್ಮದೇ. ಅದಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ ಎನ್ನುತ್ತಾರೆ. ಅಣ್ಣಾಮಲೈ ಎಲ್ಲಿ ಹೋದರೂ.. ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಿದ್ಧಾರೆ. ಬಿಜೆಪಿಗೆ ತಮಿಳುನಾಡಿನಲ್ಲಿ ಈ ಮಟ್ಟಿನ ಜನ ಸೇರುತ್ತಿರುವುದೇ ಹೊಸತು. ಏಕೆಂದರೆ ದ್ರಾವಿಡ ಪಕ್ಷಗಳ ರಾಜ್ಯಭಾರ ಇರುವ ರಾಜ್ಯ ತಮಿಳುನಾಡು. ಈ ನಡುವೆಯೇ ಅಣ್ಣಾಮಲೈಗೆ ತಮಿಳುನಾಡಿನಲ್ಲಿ ಡಿಎಂಕೆ ಹಾಗೂ ಅಣ್ಣಾಡಿಎಂಕೆ ಜೊತೆ ಹೊಸ ಎದುರಾಳಿ ಹುಟ್ಟಿಕೊಂಡಿದ್ದಾರೆ. ಆ ಹೊಸ ಎದುರಾಳಿಯ ಹೆಸರು ದಳಪತಿ ವಿಜಯ್. ಹೊಸ ಪಕ್ಷ ತಮಿಳಿಗ ವೆಟ್ರಿ ಕಳಗಂ.
ಎಂಜಿಆರ್, ಜಯಲಲಿತಾ, ವಿಜಯಕಾಂತ್, ಕಮಲಹಾಸನ್, ಉದಯನಿಧಿ ಸ್ಟಾಲಿನ್ ನಂತರ ಇದೀಗ ಮತ್ತೊಬ್ಬ ನಟ ದಳಪತಿ ವಿಜಯ್ ರಾಜಕೀಯಕ್ಕೆ ಅಧಿಕೃತವಾಗಿ ಎಂಟ್ರಿ ಘೋಷಿಸಿದ್ಧಾರೆ. ತಮಿಳಗ ವೆಟ್ರಿ ಕಳಗಂ ಎಂಬ ಹೊಸ ಪಕ್ಷ ಸ್ಥಾಪಿಸಿದ್ದಾರೆ. ಇದು ತಮಿಳುನಾಡಿನ ಸಿನಿಮಾ ಹಾಗೂ ರಾಜಕೀಯದಲ್ಲಿ ಹೊಸ ತಿರುವು ತರಲಿದೆ ಎಂದು ಭಾವಿಸಲಾಗಿದೆ.
ತಮಿಳುನಾಡಿಗೆ ಸಿನಿಮಾ ನಟರು ರಾಜಕೀಯ ಪ್ರವೇಶಿಸುವುದು ಹೊಸದಲ್ಲ. ಹಾಗೆ ನೋಡಿದರೆ ಕರುಣಾನಿಧಿ ಕೂಡಾ ಸಿನಿಮಾದಿಂದಲೇ ಬಂದವರು. ಕರುಣಾನಿಧಿ, ಜಯಲಲಿತಾ ಅವರಿಗೆ ಸಿಕ್ಕ ದೊಡ್ಡ ಯಶಸ್ಸು, ವಿಜಯಕಾಂತ್ ಹಾಗೂ ಕಮಲಹಾಸನ್ ಅವರಿಗೆ ಸಿಗಲಿಲ್ಲ. ರಜನಿಕಾಂತ್ ರಾಜಕೀಯಕ್ಕೆ ಬರುತ್ತಾರೆ ಎನ್ನಲಾಗುತ್ತಿದ್ದ ಸುದ್ದಿ ಈಗ ಸತ್ತೇ ಹೋಗಿದ್ದು, ಇದೀಗ ವಿಜಯ್ ಎಂಟ್ರಿ ಮೂಲಕ ಸಿನಿಮಾ ರಾಜಕೀಯಕ್ಕೆ ಹೊಸ ಹುರುಪು ಬಂದಿದೆ.
ವಿಜಯ್ ಅವರು ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ವಿಜಯ್ ಅವರ ಪಕ್ಷವು 2026ರ ತಮಿಳುನಾಡು ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ನಟ ವಿಜಯ್ ಅವರು ಅವರನ್ನು ತಮ್ಮ ಪಕ್ಷದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದ್ದು, ಚುನಾವಣಾ ಆಯೋಗದಲ್ಲಿ ಪಕ್ಷದ ಹೆಸರನ್ನು ನೋಂದಣಿ ಮಾಡಿದ್ದಾರೆ. ಸುಮಾರು 200 ಸದಸ್ಯರು ಪಾಲ್ಗೊಂಡಿದ್ದ ಪಕ್ಷದ ಸಾಮಾನ್ಯ ಮಂಡಳಿ ಸಭೆಯಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ನಟ ವಿಜಯ್ ತಮಿಳುನಾಡು ಮತ್ತು ಕೇರಳದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ ಮತ್ತು ಹಲವಾರು ಸಾರ್ವಜನಿಕ ಕಲ್ಯಾಣ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. 2024ರ ಚುನಾವಣೆಯಲ್ಲಿ ನಮ್ಮ ಪಕ್ಷ ಸ್ಪರ್ಧಿಸುವುದಿಲ್ಲ ಮತ್ತು ನಾವು ಯಾವುದೇ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ. ಆದರೆ ತಮಿಳುನಾಡು ವಿಧಾನಸಭೆ ಚುನಾವಣೆ ಹೊತ್ತಿಗೆ ಪಕ್ಷವನ್ನು ಸಂಪೂರ್ಣವಾಗಿ ಸನ್ನದ್ಧ ಮಾಡುವ ಉತ್ಸಾಹದಲ್ಲಿದ್ದಾರೆ.
ಇದು ವಿಜಯ್ ಕಥೆಯಾದರೆ.. ಬಿಜೆಪಿಗೆ ಹೊಸ ಉತ್ಸಾಹ ತುಂಬಿಸಿ ಮುನ್ನುಗ್ಗುತ್ತಿರುವ ಅಣ್ಣಾಮಲೈ ಅವರು ಈ ಹೊಸ ಎದುರಾಳಿಯನ್ನು ಹೇಗೆ ನಿಭಾಯಿಸ್ತಾರೆ ಅನ್ನೋದು.
ಏಕೆಂದರೆ ವಿಜಯ್ ಸಿನಿಮಾ ರಂಗದಲ್ಲಿ ಅಜಾತಶತ್ರು ಏನಲ್ಲ. ಈಗಾಗಲೇ ವಿಜಯ್ ಫ್ಯಾನ್ಸ್ ರಜನಿಕಾಂತ್ ಹಾಗೂ ಅಜಿತ್ ಅಭಿಮಾನಿಗಳ ಜೊತೆ ಕಿತ್ತಾಟ ಮಾಡ್ಕೊಳ್ತಿದ್ಧಾರೆ. ಕಮಲ್ ಹಾಸನ್ ಅವರನ್ನೂ ವಿಜಯ್ ಅಭಿಮಾನಿಗಳು ಬಿಟ್ಟಿಲ್ಲ. ತಮಿಳುನಾಡಿನಲ್ಲಿ ರಾಜಕೀಯ ನಾಯಕರನ್ನು ಬೈದು ಜಯಿಸಿಕೊಳ್ಳಬಹುದು. ಆದರೆ ಸಿನಿಮಾ ನಟರನ್ನು ಬೈದು ದಕ್ಕಿಸಿಕೊಳ್ಳೋದು ಕಷ್ಟ. ಆದರೆ ಅಣ್ಣಾಮಲೈ ಅವರು ತಮಿಳುನಾಡಿನ ರಾಜಕೀಯಕ್ಕೆ ಹೊಸ ಸ್ಟೈಲ್ ತಂದುಕೊಟ್ಟವರು. ಏನಾಗಲಿದೆ.. ಕುತೂಹಲವಂತೂ ಇದೆ.



