ಮನೆ ಮನೆಗೂ ಅಕ್ಕಿಯನ್ನು ಉಚಿತವಾಗಿ ಹಂಚುತ್ತಿರುವ ರಾಜ್ಯ ಸರ್ಕಾರಕ್ಕೇ ಅಕ್ಕಿಯನ್ನು ಸಾಲವಾಗಿ ಕೊಟ್ಟ ಸ್ಟೋರಿ ಇದು. ತುಮಕೂರಿನ ಸಿದ್ಧಗಂಗಾ ಮಠ ತ್ರಿವಿಧ ದಾಸೋಹಕ್ಕೆ ಹೆಸರುವಾಸಿ. ಅನ್ನ, ವಸತಿ ಮತ್ತು ಜ್ಞಾನವನ್ನು ಉಚಿತವಾಗಿ ನೀಡುತ್ತಿರುವ ಮಠದಲ್ಲಿಯೇ 10 ಸಾವಿರಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ಧಾರೆ. ಜಾತಿ ಮತ ಭೇದವಿಲ್ಲದೆ ಮಠದ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ಧಾರೆ. ಅಂತಹ ಮಠಕ್ಕೆ ಪುಟ್ಟದೊಂದು ಸಹಾಯ ಮಾಡುವುದಕ್ಕೆ ಭಕ್ತರು ತುದಿಗಾಲಲ್ಲಿ ನಿಂತಿರುತ್ತಾರೆ. ಸರ್ಕಾರವೂ ನೆರವು ನೀಡುತ್ತದೆಯಾದರೂ, ಭಕ್ತರ ಪಾಲು ದೊಡ್ಡದು. ಅಂತಹ ಮಠ ಈಗ ಸರ್ಕಾರಕ್ಕೇ ಅಕ್ಕಿಯನ್ನು ಸಾಲವಾಗಿ ಕೊಟ್ಟಿದೆ.
ತುಮಕೂರಿನ ಬಿಸಿಎಂ ಹಾಸ್ಟೆಲ್ಗಳಿಗೆ ಸಮಯಕ್ಕೆ ಸರಿಯಾಗಿ ಅಕ್ಕಿ ಪೂರೈಕೆ ಆಗಿಲ್ಲ. ಹೀಗಾಗಿ ಹಿಂದುಳಿದ ವರ್ಗಗಳ ಹಾಸ್ಟಲ್ಗಳಿಗೆ ಬಿಸಿಎಂ ಇಲಾಖೆ ಮಠದಲ್ಲಿ ಅಕ್ಕಿ ಸಾಲ ಮಾಡಿವೆ. ಅಧಿಕಾರಿಗಳು ಸುಮಾರು 80 ಚೀಲ ಅಕ್ಕಿ ಸಾಲ ಪಡೆದಿದ್ದಾರೆ. ಆ ಮೂಲಕ ಸಾಲದ ಅಕ್ಕಿಯಿಂದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಊಟ ಮಾಡಿಕೊಡಲಾಗುತ್ತಿದೆ. ಹೌದು, ಸರ್ಕಾರಿ ಹಾಸ್ಟೆಲ್ಲುಗಳ ವಿದ್ಯಾರ್ಥಿಗಳಿಗೆ ಮಠದ ವತಿಯಿಂದಲೇ ಹಾಸ್ಟೆಲ್ಲುಗಳಿಗೂ ಊಟದ ವ್ಯವಸ್ಥೆ ಮಾಡಲಾಗಿದೆ.
ಬಿಸಿಎಂ ಹಾಸ್ಟೆಲ್ಗಳಿಗೆ ಮಠದಿಂದ ಅಕ್ಕಿ ಸಾಲವಾಗಿ ಕೊಟ್ಟಿರುವುದು ನಿಜ. ಕಳೆದ ಎರಡು ಮೂರು ತಿಂಗಳ ಹಿಂದೆ ಅಕ್ಕಿ ಕೊಟ್ಟಿದ್ದೇವೆ. ಬಿಸಿಎಂ ಹಾಸ್ಟೆಲ್, ಶಾಲೆಗಳಿಗೆ ಅಕ್ಕಿ ಪೂರೈಕೆ ವಿಳಂಬವಾಗಿ ಮಠದಿಂದ ಪಡೆದುಕೊಂಡಿದ್ದಾರೆ. ಹಲವು ಬಾರಿ ಸಾಲ ತೆಗೆದುಕೊಂಡು ಹೋಗಿದ್ದಾರೆ. ನಮಗೆ ಅದರ ಲೆಕ್ಕ ಇಲ್ಲ. ಅಕ್ಕಿ ತೆಗೆದುಕೊಂಡು ಹೋಗಿರುವುದು ಮಾತ್ರ ಗ್ಯಾರಂಟಿ ಎಂದು ಮಾಹಿತಿ ನೀಡಿದ್ಧಾರೆ ಮಠದ ಆಡಳಿತಾಧಿಕಾರಿ ವಿಶ್ವನಾಥ್.
ಸಿದ್ಧಗಂಗಾ ಮಠಕ್ಕೆ ಲಕ್ಷಾಂತರ ಭಕ್ತರಿದ್ದಾರೆ. ಈ ಹಿಂದೆ ಸರ್ಕಾರವೇ ಮಠಕ್ಕೆ ಅಕ್ಕಿಯನ್ನು ಸ್ಥಗಿತ ಮಾಡಿದ್ದ ನೆನಪೂ ಭಕ್ತರ ಮನಸ್ಸಿನಲ್ಲಿ ಹಸಿರಾಗಿದೆ. ಆದರೆ.. ಮಠ ಇರುವುದೇ ಜನರ ಸೇವೆಗೆ. ಅದರಲ್ಲಂತೂ ರಾಜಿ ಇಲ್ಲ. ಉದ್ಧಾನ ಶಿವಯೋಗಿಗಳಿಂದ ಶುರುವಾದ ಮಠದ ಪರಂಪರೆಯೇ ಅನ್ನ ದಾಸೋಹ.
ರಾಜ್ಯಕ್ಕೆ ಬರ ಬಂದಾಗಲೂ ಮಠದಲ್ಲಿ ದಾಸೋಹ ನಿಂತಿಲ್ಲ. ಸಾವಿರಾರು ವಿದ್ಯಾರ್ಥಿಗಳಿಗೆ ಪ್ರತಿದಿನ ಅನ್ನದಾಸೋಹ ಮಠ ಸಿದ್ಧಗಂಗಾ ಮಠ. ಶಿವಕುಮಾರ ಸ್ವಾಮೀಜಿಗಳ ಕಾಲದಲ್ಲಿ ಹೆಮ್ಮರವಾಗಿ ಬೆಳೆದ ದಾಸೋಹದ ಬೆಳಕು ಮಠದಲ್ಲಿ ಪ್ರಜ್ವಲಿಸುತ್ತಿದೆ. ಹೀಗಿರುವಾಗ ಸರ್ಕಾರಿ ಶಾಲೆ/ಹಾಸ್ಟೆಲ್ಲುಗಳ ವಿದ್ಯಾರ್ಥಿಗಳಿಗೆ ಮಠದವರು ಅಕ್ಕಿ ಸಾಲ ಕೊಡುವುದು ಅಪರೂಪವೇನಲ್ಲ. ಇಷ್ಟಕ್ಕೂ ಮಠದಲ್ಲಿ ಅಭ್ಯಾಸ ಮಾಡದ, ಬೇರೆ ಬೇರೆ ಶಾಲೆ, ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಪ್ರತಿದಿನ ಮಠಕ್ಕೆ ಬಂದು ಊಟ ಮಾಡಿ ಹೋಗುತ್ತಾರೆ. ಮಠದವರು ಅನ್ನ ನೀಡುತ್ತಾರೆ. ಇದು ದಾಸೋಹದ ಮಠ.
ಘಟನೆ ವಿವರ : ಮೂಲಗಳ ಪ್ರಕಾರ, ಸಿರಾ ಮತ್ತು ತುಮಕೂರಿನ ಬಿಸಿಎಂ ಹಾಸ್ಟೆಲ್‌ಗಳು ಅಕ್ಕಿ ಕೊರತೆಯನ್ನು ಎದುರಿಸುತ್ತಿವೆ. ಹೀಗಾಗಿ ಮಕ್ಕಳ ಊಟಕ್ಕೆ ತೊಂದರೆಯಾಗುತ್ತಿತ್ತು. ಇದೇ ಕಾರಣಕ್ಕೆ ತುಮಕೂರು ಅಧಿಕಾರಿಗಳು ಡಿಸೆಂಬರ್‌ನಲ್ಲಿ ಸಿದ್ದಗಂಗಾ ಮಠದಿಂದ 180 ಕ್ವಿಂಟಾಲ್ ಅಕ್ಕಿಯನ್ನು ಸಾಲವಾಗಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 18 ಹಾಸ್ಟೆಲ್‌ಗಳ ಸುಮಾರು 2,000 ವಿದ್ಯಾರ್ಥಿಗಳಿಗೆ ಆಹಾರಕ್ಕಾಗಿ ಅಧಿಕಾರಿಗಳು ಈ ಕ್ರಮ ತೆಗೆದುಕೊಂಡಿದ್ದಾರೆ. ಇಲ್ಲಿ ಮೆಚ್ಚಬೇಕಿರುವುದು ಸರ್ಕಾರ ಪೂರೈಸದೇ ಇದ್ದರೂ ಪರ್ಯಾಯ ವ್ಯವಸ್ಥೆಗೆ ಮುಂದಾದ ಅಧಿಕಾರಿಗಳನ್ನು. ಸಿದ್ಧಗಂಗಾ ಮಠದವರದ್ದೇನು ವಿಶೇಷ ಇಲ್ಲ ಬಿಡಿ. ಏಕೆಂದರೆ ಇಲ್ಲದವರಿಗೆ ನೆರವಾಗುವುದು ಸಿದ್ಧಗಂಗಾ ಮಠದವರಿಗೆ ವಿಶೇಷ ಏನಲ್ಲ.



