ಅಡುಗೆ ಮನೆಯಲ್ಲಿ ತರಕಾರಿ ಹಚ್ಚುವ ಚಾಕು ಇದೆ. ಇರುತ್ತೆ. ಅದರಲ್ಲೇನು ವಿಶೇಷ ಅಂತೀರಾ..? ಅದು ರಕ್ತಸಿಕ್ತವಾಗಿದೆ. ಅಯ್ಯೋ.. ತರಕಾರಿ ಹಚ್ಚೋವಾಗ ಏನೋ ಮಿಸ್ ಆಗಿರಬೇಕು.. ಅಷ್ಟಕ್ಕೇ ಸೀನ್ ಕ್ರಿಯೇಟ್ ಮಾಡಬೇಡಿ ಅಂತೀರ.. ಓಕೆ.. ಆದರೆ ಆ ರಕ್ತಸಿಕ್ತ ಚಾಕು ಇರೋದು ಅನಿರುದ್ಧ (Anirudha Jhatkar) ಕೈಲಿ. ಹೊಸ ಸಿನಿಮಾ ಕಥೆ ಬಿಡ್ರಿ.. ಹೌದು.. ಹೌದು.. ಇದು ಹೊಸ ಸಿನಿಮಾ ಕಥೇನೇ..
ಅನಿರುದ್ಧ ಜತ್ಕರ್ (Anirudha Jhatkar) ಹಿರಿತೆರೆಗೆ ವಾಪಸ್ ಆಗಿದ್ದಾರೆ. ಅಡುಗೆಭಟ್ಟನ ವೇಷದಲ್ಲಿ. ರಾಘು ಚಿತ್ರದ ಖ್ಯಾತಿಯ ನಿರ್ದೇಶಕ ಎಂ. ಆನಂದರಾಜ್ ನಿರ್ದೇಶನದ ಚಿತ್ರದಲ್ಲಿ ಅನಿರುದ್ಧ್ ನಟಿಸುತ್ತಿದ್ದಾರೆ. ಈ ಚಿತ್ರದ ಶೀರ್ಷಿಕೆ ಇದೀಗ ಅನಾವರಣಗೊಂಡಿದೆ. ಅಡುಗೆ ಭಟ್ಟನಾಗಿ ಕಾಣಿಸಿಕೊಳ್ಳಲಿರುವ ಅನಿರುದ್ಧ್ ಅವರ ಈ ಚಿತ್ರದ ಹೆಸರು CHEF ಚಿದಂಬರ.
ಅನಿರುದ್ಧ್ ಅವರಿಗೆ ನಾಯಕಿಯರಾಗಿ ನಿಧಿ ಸುಬ್ಬಯ್ಯ (Nidhi Subbaiah) ಹಾಗೂ ಲವ್ ಮಾಕ್ಟೇಲ್ (Love Mocktail) ಖ್ಯಾತಿಯ ರೆಚೆಲ್ ಡೇವಿಡ್ ಅಭಿನಯಿಸುತ್ತಿದ್ದಾರೆ. ಶರತ್ ಲೋಹಿತಾಶ್ವ, ಕೆ.ಎಸ್ ಶ್ರೀಧರ್, ಶಿವಮಣಿ ಮುಂತಾದವರು ನಟಿಸಲಿದ್ದಾರೆ. ಇದೊಂದು ಡಾರ್ಕ್ ಕಾಮಿಡಿ (Dark Comedy) ಸಿನಿಮಾ ಎಂದಿರೋ ಚಿತ್ರ ಸಾಹಿತಿ ಆನಂದ್, ಚಿತ್ರದಲ್ಲಿ ಅನಿರುದ್ಧ್ ಅವರನ್ನು ಮೊದಲ ಬಾರಿಗೆ ಬಾಣಸಿಗನ ಪಾತ್ರದಲ್ಲಿ ತೋರಿಸಲಾಗುತ್ತಿದೆ ಎಂದಿದ್ದಾರೆ.
ನನ್ನ ಸ್ಕ್ರಿಪ್ಟ್ಗೆ 30 ವರ್ಷದ ಸೂಕ್ತ ನಟನ ಹುಡುಕಾಟದಲ್ಲಿದ್ದೆ, ಕುಟುಂಬ ಪ್ರೇಕ್ಷಕರಿಗೆ ರೀಚ್ ಆಗಬಲ್ಲ ನಟ ಯಾರು ಎಂದಾಗ ಅನಿರುದ್ಧ್ ಹೆಸರು ನನ್ನ ಮನಸಿಗೆ ಬಂತು ಎಂದು ಆನಂದ್ ತಿಳಿಸಿದ್ದಾರೆ.
ಈಗ ಬಿಡುಗಡೆಯಾಗಿರುವ ಪೋಸ್ಟರ್ನಲ್ಲಿ ಇದನ್ನು ನೋಡಬಹುದು. ರೂಪಾ ಡಿ.ಎನ್ ಅವರು ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಸಿನಿಮಾಕ್ಕೆ ನಿರ್ದೇಶಕರೇ ಕಥೆ ಬರೆದಿದ್ದು, ಚಿತ್ರಕಥೆ, ಸಂಭಾಷಣೆ ಗಣೇಶ್ ಪರಶುರಾಮ್ ಅವರದ್ದು.
ವಿಶೇಷ ಏನೆಂದರೆ ಚಿತ್ರದ ಪೋಸ್ಟರ್ನಲ್ಲಿ ಎರಡು ಶೇಡ್ಗಳು ಕಾಣಿಸುತ್ತಿವೆ. ಕೈಯಲ್ಲಿ ತರಕಾರಿ ಕತ್ತರಿಸುವ ಚಾಕು ಹಿಡಿದರೂ, ನೋಡುವ ನೋಟ, ಕೈಯಲ್ಲಿ ತೊಟ್ಟಿಕ್ಕುವ ರಕ್ತ ಬೇರೆಯದೇ ಕಥೆ ಹೇಳುತ್ತಿದೆ. ನಾಯಕನ ಆಂತರಿಕ ಸಂಘರ್ಷ, ಆತ ಅದರಲ್ಲಿ ಸಿಲುಕಿಕೊಳ್ಳುವುದು ಮತ್ತು ಆತ ಸಂಕಟದಿಂದ ಹೊರಬರಲು ಅವನು ಮಾಡುವ ತಂತ್ರಗಳ ಸುತ್ತ ಕತೆ ಸುತ್ತುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಜೊತೆ ಜೊತೆಯಲಿ, ಸೂರ್ಯವಂಶ ಸೀರಿಯಲ್ಲುಗಳ ಬಳಿಕ ಅನಿರುದ್ಧ ಹಿರಿತೆರೆಗೆ ವಾಪಸ್ ಆಗಿದ್ದಾರೆ. 2018ರಲ್ಲಿ ತೆರೆಗೆ ಬಂದಿದ್ದ ರಾಜಾ ಸಿಂಹ ಸಿನಿಮಾ ಬಳಿಕ ಹಿರಿತೆರೆಯಿಂದ ಕಿರುತೆರೆಯತ್ತ ಮುಖ ಮಾಡಿದ್ದ ಅನಿರುದ್ಧ್ ಅವರು, ಈಗ ಅಡುಗೆ ಭಟ್ಟನಾಗಿ ಆರು ವರ್ಷದ ಬಳಿಕ ಮತ್ತೆ ಹಿರಿತೆರೆಗೆ ವಾಪಸಾಗುತ್ತಿದ್ದಾರೆ.



