ವಿಜಯೇಂದ್ರ ಯಡಿಯೂರಪ್ಪ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ನೀಡಿದಾಗಿನಿಂದ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ. ಪಕ್ಷದಲ್ಲೇ ಇರುವ ಬಹಳಷ್ಟು ನಾಯಕರಿಗೆ ವಿಜಯೇಂದ್ರ ಅವರಿಗೆ ಈ ಹುದ್ದೆ ಸಿಕ್ಕಿರುವುದೇ ಇಷ್ಟವಿಲ್ಲ. ಅದು ಕಾಂಗ್ರೆಸ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹೋರಾಟದಲ್ಲೂ ಪ್ರಭಾವ ಬೀರುತ್ತಿದೆ. ಪಕ್ಷದಿಂದ ಹಾಗೂ ಹೈಕಮಾಂಡ್ʻನಿಂದ ಹೋಗಿ ಮಾತನಾಡಿ ಎಂದರೆ ಮಾತನಾಡುತ್ತಾರೆ. ಟೀಕೆ ಮಾಡಿ ಎಂದರೆ ಟೀಕೆ ಮಾಡ್ತಾರೆ. ಪ್ರತಿಭಟನೆ ಮಾಡಿ ಎಂದರೆ ಪ್ರತಿಭಟನೆ ಮಾಡ್ತಾರೆ. ಶೋಆಫ್ ಮಾಡಿ ಎಂದರೆ ಶೋಆಫ್ ಮಾಡ್ತಾರೆ. ಮೀಡಿಯಾಗಳ ಮುಂದೆ ಎರಡು ನಿಮಿಷ ಹೇಳಿಕೆ ಕೊಟ್ಟು ಹೋಗಿ ಬಿಡ್ತಾರೆ. ಪ್ರತಿ ಹೋರಾಟ, ಪ್ರತಿ ಹೇಳಿಕೆ, ಪ್ರತಿಭಟನೆ ಎಲ್ಲವೂ ಹೈಕಮಾಂಡ್ʻಗೆ ಕೊಡುತ್ತಿರುವ ಲೆಕ್ಕದ ಬುಕ್ಕಿಗಷ್ಟೇ ಸೀಮಿತ.
ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಿರುವುದು ಹಲವರಿಗೆ ಇಷ್ಟ ಇಲ್ಲ. ಕಾರಣ, ವಿಜಯೇಂದ್ರ ಯಡಿಯೂರಪ್ಪನವರ ಮಗನೇ ಹೊರತು, ಯಡಿಯೂರಪ್ಪ ಅಲ್ಲ. ಯಡಿಯೂರಪ್ಪ ಅವರ ವಿರುದ್ಧವೇ ಭುಗಿಲೆದ್ದಿದ್ದ ಭಿನ್ನಮತ, ಅವರ ಮಗನ ವಿರುದ್ಧವೂ ಸಹಜವಾಗಿಯೇ ಜೋರಾಗಿದೆ.
ಭಿನ್ನಮತದ ಹಿಂದೆ ಬೇರೆ ಯಾರೋ ಇದ್ದಾರೆ ಎಂದುಕೊಂಡರೆ ಅದು ಸಹಜವೇ. ಏಕೆಂದರೆ ಒಬ್ಬೊಬ್ಬರ ಹೇಳಿಕೆಯ ಹಿಂದೆಯೂ ಒಂದೊಂದು ಗುಟ್ಟು ಇದೆ.
ಬಸನಗೌಡ ಪಾಟೀಲ ಯತ್ನಾಳ್ : ಬಹಿರಂಗವಾಗಿ ಯಡಿಯೂರಪ್ಪ ಅಥವಾ ವಿಜಯೇಂದ್ರ ಅವರ ಹೆಸರು ಹೇಳಲ್ಲ. ಅಪ್ಪ-ಮಗ ಪಕ್ಷವನ್ನು ಹಾಳು ಮಾಡ್ತಿದ್ದಾರೆ ಅಂತಾರೆ. ಅಪ್ಪ-ಮಗ ಎಂದರೆ ಯಾರು ಅನ್ನೋದು ಇಡೀ ರಾಜ್ಯಕ್ಕೆ ಗೊತ್ತು.
ಅರವಿಂದ ಲಿಂಬಾವಳಿ : ಇತ್ತೀಚೆಗೆ ಬಹಿರಂಗವಾಗಿಯೇ ಪ್ರವಾಹ ಮತ್ತಿತರ ವಿಚಾರಗಳನ್ನು ಚರ್ಚೆ ಮಾಡಲೇ ಇಲ್ಲ ಎಂದು ಬಹಿರಂಗವಾಗಿ ಟ್ವೀಟ್ ಮಾಡಿದ್ದರು. ಅಸಮಾಧಾನದ ಹೊಗೆ ಅಶೋಕ್ ಮತ್ತು ವಿಜಯೇಂದ್ರ ಅವರ ವಿರುದ್ಧವೇ ಇತ್ತು.
ರಮೇಶ್ ಜಾರಕಿಹೊಳಿ : ಹೈಕಮಾಂಡ್ ನಾಯಕರು ಹೇಳಿದಂತೆ ಕೇಳ್ತೇನೆ. ರಾಜ್ಯ ನಾಯಕರ ಮಾತುಗಳಿಗೆ ಮುಲಾಜು ನೋಡಲ್ಲ. ಡೋಂಟ್ ಕೇರ್ ಎಂದಿದ್ದರು.
ಬಿಪಿ ಹರೀಶ್ : ಬಹಿರಂಗವಾಗಿಯೇ ಹೆಸರು ಹೇಳಿಯೇ ವಿಜಯೇಂದ್ರ ವಿರುದ್ಧ ಕಿಡಿ ಕಾರುತ್ತಾರೆ.
ಜಿಎಂ ಸಿದ್ದೇಶ್ವರ್ : ದಾವಣಗೆರೆಯಲ್ಲಿ ನಮ್ಮನ್ನು ಸೋಲಿಸಿದ್ದೇ ಯಡಿಯೂರಪ್ಪ ಮತ್ತು ಮಕ್ಕಳು ಎಂದು ಕಿಡಿ ಕಾರುವ ಜಿಎಂ ಸಿದ್ದೇಶ್ವರ್, ಆ ಮಾತನ್ನು ದೆಹಲಿ ಮಟ್ಟದಲ್ಲೂ ಹೇಳಿದ್ದಾರಂತೆ.
ಪ್ರತಾಪ್ ಸಿಂಹ : ಸಂಸದರಾಗಿದ್ದಾಗ ಅನುಕೂಲದ ದೃಷ್ಟಿಯಿಂದಾದರೂ ಸಂಯಮದಿಂದ ಮಾತನಾಡುತ್ತಿದ್ದ ಪ್ರತಾಪ್ ಸಿಂಹ, ಯಾವಾಗ ಟಿಕೆಟ್ ಕೂಡಾ ಸಿಗದೆ ಮಾಜಿಯಾದರೋ.. ಅಲ್ಲಿಂದ ನೋ ಫಿಲ್ಟರ್. ಎಲ್ಲ ನಾಯಕರೂ ತಮ್ಮ ತಮ್ಮ ಮಕ್ಕಳನ್ನಷ್ಟೇ ಬೆಳೆಸುತ್ತಿದ್ದಾರೆ ಎಂದು ಯಡಿಯೂರಪ್ಪನವರ ಹೆಸರು ಹೇಳಿಯೇ ಮಾತನಾಡ್ತಿದ್ದಾರೆ ಪ್ರತಾಪ್ ಸಿಂಹ.
ಇವರೆಲ್ಲರ ಹಿಂದೆ ಬಿಜೆಪಿಯ ದೆಹಲಿ ಹೈಕಮಾಂಡ್ʻನ ದೊಡ್ಡ ದೊಡ್ಡ ನಾಯಕರ ಕಾಣಿಕೆಗಳಂತೂ ಇವೆ. ʻತೇನ ವಿನಾ ತೃಣಮಪಿ ನ ಚಲತಿʼ ಎಂಬಂತೆ.. ಬಿ.ಎಲ್. ಸಂತೋಷ್ ಅವರ ಕುಮ್ಮಕ್ಕು ಇಲ್ಲದೆ ಇವರೆಲ್ಲ ಪದೇ ಪದೇ ಅಟ್ಯಾಕ್ ಮಾಡಲು ಸಾಧ್ಯವಿಲ್ಲ. ಅಮಿತ್ ಶಾ ಮೊದಲಾದವರ ಸಪೋರ್ಟ್ ಇಲ್ಲದೆ ʻಇಂತಹ ಅಶಿಸ್ತುʼ ಪ್ರಕರಣಗಳನ್ನು ನೋಡುತ್ತಾ ಕುಳಿತುಕೊಳ್ಳುವುದಂತೂ ಸಾಧ್ಯವೇ ಇಲ್ಲ.ಮೇಲ್ನೋಟಕ್ಕೆ ಎಲ್ಲರಿಗೂ ಗೊತ್ತಿರುವ ಸತ್ಯವನ್ನು ಮಾತನಾಡುತ್ತಿಲ್ಲ. ಅಷ್ಟೆ.



