ಕನ್ನಡಿಗರಿಗೆ ಮರೆಯಲಾಗದಂತಹ ಅದ್ಭುತ ಸಿನಿಮಾಗಳನ್ನು ನೀಡಿರುವ ನಿರ್ದೇಶಕರಲ್ಲಿ ಸಿಂಗೀತಂ ಶ್ರೀನಿವಾಸ ರಾವ್ ಕೂಡಾ ಒಬ್ಬರು. ದೊಡ್ಮನೆಯವರ ಪ್ರೀತಿಯ ನಿರ್ದೇಶಕರಲ್ಲಿ ಒಬ್ಬರಾಗಿದ್ದ ಸಿಂಗೀತಂ, ಡಾ.ರಾಜ್ ಅವರಿಗೆ 7, ಶಿವಣ್ಣ ಮತ್ತು ರಾಘವೇಂದ್ರ ರಾಜ್ ಕುಮಾರ್ ಅವರಿಗೆ ತಲಾ 2 ಸಿನಿಮಾ ನಿರ್ದೇಶನ ಮಾಡಿದ್ದಾರೆ. ಇಬ್ಬರನ್ನೂ ಚಿತ್ರರಂಗಕ್ಕೆ ಪರಿಚಯಿಸಿದ ಖ್ಯಾತಿಯೂ ಇವರದ್ದೇ. ಡಾ.ರಾಜ್ ಅವರ ಸೋಷಿಯಲ್ ಕಲ್ಟ್ ಕ್ಲಾಸಿಕ್ ಸಿನಿಮಾ ನೀಡಿರುವ ಸಿಂಗೀತಂ ಅವರೀಗ ಮತ್ತೆ ನಿರ್ದೇಶಕರಾಗಿ ಬರುತ್ತಿದ್ದಾರೆ. ಅದೂ ಅವರ 94ನೇ ವಯಸ್ಸಿನಲ್ಲ.
ಶ್ರೀನಿವಾಸ ರಾವ್, ದಕ್ಷಿಣ ಭಾರತದ ಖ್ಯಾತ ನಿರ್ದೇಶಕ. ಈಗ ವಯಸ್ಸು 94. ಶಿವರಾಜ್ ಕುಮಾರ್ ಅವರನ್ನ ʻಆನಂದ್ʼ ಮೂಲಕ, ರಾಘವೇಂದ್ರ ರಾಜ್ ಕುಮಾರ್ ಅವರನ್ನ ಚಿರಂಜೀವಿ ಸುಧಾಕರ ಮೂಲಕ ಚಿತ್ರರಂಗಕ್ಕೆ ತಂದವರು. ಬಾಲನಟನಾಗಿ ಪುನೀತ್ ಅವರು ಪ್ರಮುಖ ಪಾತ್ರದಲ್ಲಿದ್ದ ಎರಡು ನಕ್ಷತ್ರಗಳು, ಚಲಿಸುವ ಮೋಡಗಳು ಅಷ್ಟೇ ಅಲ್ಲ, ಡಾ.ರಾಜ್ ಅವರಿಗೆ ಹಾಲು ಜೇನು, ಭಾಗ್ಯದ ಲಕ್ಷ್ಮೀ ಬಾರಮ್ಮ, ಜ್ವಾಲಾಮುಖಿ, ದೇವತಾ ಮನುಷ್ಯ, ಮತ್ತು ಶ್ರಾವಣ ಬಂತು ಚಿತ್ರಗಳನ್ನು ನಿರ್ದೇಶಿಸಿದ್ದವರು. ಶಿವಣ್ಣ ಅವರಿಗೆ ಸಂಯುಕ್ತ ಎಂಬ ಮತ್ತೊಂದು ಹಿಟ್ ಕೊಟ್ಟಿದ್ದರು. ಟುವ್ವಿ ಟುವ್ವಿ, ಬೆಳ್ಳಿಯಪ್ಪ ಬಂಗಾರಪ್ಪ, ಮೇಕಪ್.. ಹೀಗೆ ಕನ್ನಡದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿದ್ದ ನಿರ್ದೇಶಕ.
ಸಿಂಗೀತಂ ಶ್ರೀನಿವಾಸ ರಾವ್ ಅವರ ಮತ್ತೊಂದು ಐತಿಹಾಸಿಕ ಪುಷ್ಪಕ ವಿಮಾನ. ಟಾಕಿ ಚಿತ್ರಗಳ ಯುಗದಲ್ಲಿ ಒಂದೇ ಒಂದು ಡೈಲಾಗ್ ಇಲ್ಲದ ಸಿನಿಮಾ ನಿರ್ದೇಶಿಸಿ, ಬ್ಲಾಕ್ ಬಸ್ಟರ್ ಕೊಟ್ಟಿದ್ದ ಸಿಂಗೀತಂ, ಕನ್ನಡದಲ್ಲಷ್ಟೇ ಅಲ್ಲ, ತೆಲುಗು, ತಮಿಳು, ಮಲಯಾಳಂ, ಇಂಗ್ಲಿಷ್ ಚಿತ್ರಗಳನ್ನೂ ನಿರ್ದೇಶಿಸಿದ್ದಾರೆ. ಸಂಗೀತ ನಿರ್ದೇಶಕರೂ ಆಗಿದ್ದ ಸಿಂಗೀತಂ ಭಾಗ್ಯದ ಲಕ್ಷ್ಮಿ ಬಾರಮ್ಮ, ಸಂಯುಕ್ತ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.
2015ರಲ್ಲಿ ಕಾಂಚೇ ಚಿತ್ರವೇ ಕೊನೆ. ನಿರ್ದೇಶನದಿಂದ ದೂರವೇ ಉಳಿದಿದ್ದ ಅವರು ಇದೀಗ ಮತ್ತೆ ಅಖಾಡಕ್ಕೆ ಇಳಿಯುತ್ತಿದ್ದಾರೆ.13 ವರ್ಷಗಳ ಬಳಿಕ ತೆಲುಗು ಚಿತ್ರ ನಿರ್ದೇಶಿಸಲಿದ್ದಾರೆ. ಇದು ಅವರ 61ನೇ ಚಿತ್ರವಾಗಿದ್ದು, ಪ್ರಭಾಸ್ ನಟನೆಯ ‘ಕಲ್ಕಿ 2898AD’ ಚಿತ್ರವನ್ನು ನಿರ್ದೇಶಿಸಿದ ನಾಗ್ ಅಶ್ವಿನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜಿಸುತ್ತಿದ್ದಾರೆ. ತಮ್ಮ ಮೊದಲ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ ಗುರುವಿನ ಹೊಸ ಸಾಹಸಕ್ಕೆ ಶಿವರಾಜ್ ಕುಮಾರ್ ವೆಲ್ ಕಂ ಹೇಳಿದ್ದಾರೆ. ಅಪ್ಪಾಜಿ, ರಾಘು, ಅಪ್ಪು, ಹಾಗೂ ನನ್ನನ್ನು ಬೇರೆ ಬೇರೆ ಚಿತ್ರಗಳಲ್ಲಿ ನಿರ್ದೇಶಿಸಿದ ಏಕೈಕ ನಿರ್ದೇಶಕರು ಸಿಂಗೀತಂ ಶ್ರೀನಿವಾಸ್ ರಾವ್ ಅವರು. 94ರ ಹರೆಯದಲ್ಲೂ ನಿರ್ದೇಶನ ಮಾಡುವ ಅವರ ಚೈತನ್ಯ ನಮ್ಮೆಲ್ಲರಿಗೂ ಸ್ಪೂರ್ತಿ. ಚಿತ್ರಕ್ಕೆ, ಚಿತ್ರ ತಂಡಕ್ಕೆ ಹಾಗೂ ಸಿಂಗೀತಂ ಶ್ರೀನಿವಾಸ್ ರಾವ್ ಅವರಿಗೆ ತುಂಬು ಹೃದಯದ ಶುಭಾಶಯಗಳು ಎಂದು ಶಿವಣ್ಣ ಶುಭಕೋರಿದ್ದಾರೆ.
ಪುಷ್ಪಕ ವಿಮಾನ ಅಷ್ಟೇ ಅಲ್ಲ… ಕಮಲ್ ಹಾಸನ್ ಅವರ 100ನೇ ಸಿನಿಮಾಗೆ ಸಿಂಗೀತಂ ಅವರೇ ಡೈರೆಕ್ಟರ್. ಬಯೋಪಿಕ್‌ಗಳನ್ನೂ ಯಶಸ್ವಿಯಾಗಿ ನಿರ್ದೇಶಿಸಿದ್ದ ಸಿಂಗೀತಂ ತೆಲುಗಿನಲ್ಲಿ ಆಂಧ್ರಕೇಸರಿ (ಪ್ರಕಾಶಂ ಪಂತುಲು), ಮಯೂರಿ ( ಕಾಲುಗಳೇ ಇಲ್ಲದ ಭರತನಾಟ್ಯ ಕಲಾವಿದೆ ಸುಧಾಚಂದ್ರನ್), ಕಮಲ್ ಹಾಸನ್ ವೃತ್ತಿಜೀವನದ ಮತ್ತೊಂದು ಮೈಲಿಗಲ್ಲು ಸಿನಿಮಾ ಅಪೂರ್ವ ಸಹೋದರಂಗಳ್, ಮೈಖೆಲ್ ಮದನ ಕಾಮರಾಜನ್, ಬಾಲಕೃಷ್ಣ ಕೆರಿಯರ್‌ನ ಬೆಸ್ಟ್ ಸಿನಿಮಾಗಳಲ್ಲೊಂದಾದ ಭೈರವ ದ್ವೀಪಂ.. ಹೀಗೆ ಪ್ರಯೋಗಗಳಿಗೆ ಹೆಸರುವಾಸಿಯಾಗಿದ್ದರು. ಈಗ ಮತ್ತೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅದೂ 94ನೇ ವಯಸ್ಸಿನಲ್ಲಿ.



