ಅದೇಕೋ ಏನೋ.. ಧ್ರುವ ಸರ್ಜಾ ಸಿನಿಮಾಗಳು ಅಂದ್ರೆ ಒಂದಲ್ಲ ಒಂದು ಸಮಸ್ಯೆಗಳು ಇದ್ದೇ ಇರುತ್ತವೆ. ಅದು ಮೊದಲ ಚಿತ್ರದಿಂದ ಈಗಿನವರೆಗೂ ಪದೇ ಪದೇ ರಿಪೀಟ್ ಆಗ್ತಿದೆ. ಇದೀಗ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಬಹು ನಿರೀಕ್ಷಿತ ಚಿತ್ರ ಮಾರ್ಟಿನ್ ಬಿಡುಗಡೆಗೆ ರೆಡಿಯಾಗಿದೆ. ಇದರಲ್ಲಿ ನಿರ್ಮಾಪಕ ಮತ್ತು ನಿರ್ದೇಶಕರ ಕಿತ್ತಾಟ ಬಹಿರಂಗವಾಗಿದೆ. ಮಾರ್ಟಿನ್ ಚಿತ್ರದ ಸುದ್ದಿಗೋಷ್ಟಿಯಲ್ಲಿ ನಿರ್ದೇಶಕರೇ ಬಂದಿಲ್ಲ.
ನನ್ನ ಮತ್ತು ಅರ್ಜುನ್ ಅವರ ನಡುವೆ ಸಮಸ್ಯೆ ಇಲ್ಲ. ಅದರೆ ನಿರ್ಮಾಪಕರು, ನಿರ್ದೇಶಕರ ಮಧ್ಯೆ ಸಮಸ್ಯೆ ಇದೆ. ಅದನ್ನು ಅವರವರೇ ಬಗೆಹರಿಸಿಕೊಳ್ಳಬೇಕು ಎಂದಿದ್ದಾರೆ ಧ್ರುವ ಸರ್ಜಾ. ನಿರ್ಮಾಪಕ ಉದಯ್ ಕೆ ಮೆಹ್ತಾ ಅವರನ್ನು ಕೇಳಿದರೆ ನಾವೇನು ನಮ್ಮ ಹೆಸರು ಹಾಕಿಕೊಂಡಿದ್ದೇವಾ, ನೋಡಿ, ಅರ್ಜುನ್ ಅವರದ್ದೇ ಹೆಸರಿದೆ ಎನ್ನುತ್ತಾರೆ. ಆದರೆ ಅಪ್ಪಿತಪ್ಪಿಯೂ ʻಎಪಿ ಅರ್ಜುನ್ʼ ಎಂಬ ಹೆಸರು ಹೇಳಲ್ಲ. ಪೋಸ್ಟರ್ ನೋಡಿ.. ಅಂತಾರೆ.
ಅದ್ಧೂರಿಯಾಗಿ ಹಲವು ಬಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಚಿತ್ರದ ಸುದ್ದಿಗೋಷ್ಟಿಯ ಬಗ್ಗೆ ನಿರ್ದೇಶಕ ಎಪಿ ಅರ್ಜುನ್ ಅವರಿಗೆ ಮಾಹಿತಿಯೂ ಇಲ್ಲ ಎನ್ನುವುದು ಚಿತ್ರತಂಡದ ನಡುವೆ ಎಲ್ಲವೂ ಸರಿ ಇಲ್ಲ ಎಂದು ತೋರಿಸುತ್ತಿದೆ. ನಿರ್ದೇಶಕ ಅರ್ಜುನ್ ಹೊರತುಪಡಿಸಿ ಚಿತ್ರತಂಡದ ಎಲ್ಲರೂ ಭಾಗಿಯಾಗಿದ್ದರು ಎನ್ನುವುದು ವಿಶೇಷ.
ಧ್ರುವ ಸರ್ಜಾ ಅವರನ್ನು ಹೀರೋ ಆಗಿ ಲಾಂಚ್ ಮಾಡಿದ್ದು ಎಪಿ ಅರ್ಜುನ್. ಏನೇ ಸ್ನೇಹಿತ ಎಂದರೂ, ಧ್ರುವ ಸರ್ಜಾ ಅವರಿಗೆ ಅರ್ಜುನ್ ಎಂದರೆ ಪ್ರೀತಿ ಮತ್ತು ಗೌರವ ಇದೆ. ಅತ್ತ ನಿರ್ದೇಶಕರನ್ನೂ ಬಿಡಲಾಗದೆ, ಇತ್ತ ನಿರ್ಮಾಪಕ, ಮಾರ್ಟಿನ್ ಚಿತ್ರವನ್ನೂ ಬಿಟ್ಟುಕೊಡಲಾಗದ ಇಕ್ಕಟ್ಟಿನ ಸ್ಥಿತಿ ಅವರದ್ದು.
ನಿರ್ಮಾಪಕ, ನಿರ್ದೇಶಕರ ನಡುವೆ ವೈಮನಸ್ಯ ಎಷ್ಟಿದೆ ಎಂದರೆ, ಉದಯ್ ಮೆಹ್ತಾ, ನಿರ್ದೇಶಕರ ಹೆಸರು ಹೇಳಲ್ಲ. ಸುದ್ದಿಗೋಷ್ಟಿಯ ಬಗ್ಗೆ ಮಾಹಿತಿಯನ್ನೂ ಕೊಡಲ್ಲ. ನಿರ್ದೇಶಕ ಎಪಿ ಅರ್ಜುನ್ ಅವರೂ ಅಷ್ಟೇ, ನನಗೆ ಮಾಹಿತಿ ಇಲ್ಲ ಎನ್ನುತ್ತಾರೆ. ಇದರ ನಡುವೆಯೇ ಚಿತ್ರ ರಿಲೀಸ್ ಆಗ್ತಿದೆ. ಅಂದಹಾಗೆ ಮಾರ್ಟಿನ್ ಚಿತ್ರದ ಬಿಡುಗಡೆ ಆಗದಂತೆ ಎಪಿ ಅರ್ಜುನ್ ತಡೆ ತರುವ ಯತ್ನ ಮಾಡಿದ್ದಾರೆ ಎನ್ನುವ ಸುದ್ದಿ ಇದೆ. ಆದರೆ ಪೂರ್ತಿ ವಿವರಗಳು ಹೊರಬಂದಿಲ್ಲ.
ಧ್ರುವ ಸರ್ಜಾ ಅವರ ಮೊದಲ ಚಿತ್ರ ಅದ್ಧೂರಿ, ಶೂಟಿಂಗ್ ಶುರುವಾಗಿ ಕುಂಟುತ್ತಾ ಸಾಗಿ ಎರಡೂವರೆ ವರ್ಷ ಆದ್ಮೇಲೆ ರಿಲೀಸ್ ಆಯ್ತು. ಅದಾದ ಮೇಲೆ ಬಹದ್ದೂರ್ ಚಿತ್ರವೂ ಅಷ್ಟೇ, ಏನೇನೋ ಆಗಿ.. ಕೊನೆಗೆ ಎರಡೂವರೆ ವರ್ಷ ಆದ್ಮೇಲೆ ರಿಲೀಸ್ ಆಯ್ತು. ಅದು ಮುಗಿದ ಮೇಲೆ ಬಂದ ಬಹದ್ದೂರ್ ಚಿತ್ರವೂ ಅಷ್ಟೇ, ಮೂರು ವರ್ಷ ಟೈಂ ತಗೊಳ್ತು. ಮುಂದಿನ ಚಿತ್ರ ಪೊಗರು ಚಿತ್ರದ ಕಥೆ ಸ್ವಲ್ಪ ಡಿಫರೆಂಟ್ ಅನ್ನಬೇಕು. ಆದರೆ ಆ ಚಿತ್ರಕ್ಕೆ ಕೊರೊನಾ ಅಡ್ಡಗಾಲಾಯ್ತು. ಹೀಗಿದ್ದರೂ, ಪೊಗರು ಚಿತ್ರದ ಚಿತ್ರೀಕರಣ ಅಗತ್ಯಕ್ಕಿಂತ ಹೆಚ್ಚು ಸುದೀರ್ಘವಾಗಿ, ಬಿಡುಗಡೆಯ ಹೊತ್ತಿಗೆ ಕೊರೊನಾ ಕಾಟ ಕೊಡ್ತು. ಕೊನೆಗೆ ರಿಲೀಸ್ ಆಯ್ತಾದ್ರೂ, ಅಷ್ಟೆಲ್ಲ ಟೈಂ ತಗಂಡು ಮಾಡಿದ್ದ ಸಿನಿಮಾ, ನಿರೀಕ್ಷೆಯ ಅರ್ಧಕ್ಕೂ ಇರಲಿಲ್ಲ. ಪೊಗರು ಆದ್ಮೇಲೆ ಶುರುವಾಗಿದ್ದೇ ಮಾರ್ಟಿನ್. ಈ ಚಿತ್ರ ಶುರುವಾಗಿ ಮೂರೂವರೆ ವರ್ಷ ಆಗಿದೆ.
ಈ ಚಿತ್ರವೂ ಅಷ್ಟೇ, ರಿಲೀಸ್ ಡೇಟ್ ಘೋಷಣೆ ಮಾಡಿ, ಒಂದೂವರೆ ವರ್ಷದ ಮೇಲೆ ಮತ್ತೆ ಶೂಟಿಂಗ್ ಮಾಡಿ ರಿಲೀಸ್ ಮಾಡಲಾಗ್ತಾ ಇದೆ. ವಿಚಿತ್ರ ಅಂದ್ರೆ ನಿರ್ದೇಶಕ ಎಪಿ ಅರ್ಜುನ್ ಅವರ ಪ್ರತಿ ಚಿತ್ರವೂ ಇದೇ ರೀತಿ ಸಮಸ್ಯೆಗೆ ಸಿಕ್ಕಿಕೊಳ್ತಿದೆ. ಎಪಿ ಅರ್ಜುನ್ ಅವರ ಅಂಬಾರಿ, ಅದ್ಧೂರಿ, ರಾಟೆ, ಮಿ.ಐರಾವತ ಹಾಗೂ ಕಿಸ್ ಚಿತ್ರಗಳು. ಈ ಯಾವ ಚಿತ್ರವೂ ಅಂದುಕೊಂಡಂತೆ ಹೇಳಿದ ಸಮಯಕ್ಕೆ ರಿಲೀಸ್ ಆಗಿಲ್ಲ. ಅಲ್ಲದೆ ಪ್ರತಿ ಚಿತ್ರದಲ್ಲೂ ನಿರ್ಮಾಪಕರು ಬದಲಾಗಿದ್ದಾರೆ. ನಿರ್ದೇಶಕರು ಕಿರಿಕ್ ಮಾಡಿಕೊಂಡಿದ್ದಾರೆ. ಮಿ.ಐರಾವತದಲ್ಲಿ ಕೊನೆಯ ಹಂತದಲ್ಲಿ ನಿರ್ದೇಶಕರೇ ಬದಲಾಗಿದ್ದರು ಎಂಬ ಸುದ್ದಿ ಇದೆ. ಒಟ್ಟಿನಲ್ಲಿ ಧ್ರುವ ಸರ್ಜಾ ಟೈಂ ಸರಿ ಇಲ್ಲ. ಅಷ್ಟೇ.



