ಮಂಡ್ಯದಲ್ಲೊಂದು ಮೊಟ್ಟೆ ಸಮರ ಶುರುವಾಗಿದೆ. ಅದು ಲಿಂಗಾಯತ ವರ್ಸಸ್ ಒಕ್ಕಲಿಗರ ಗಲಾಟೆಯಾಗುವ ಎಲ್ಲ ಆತಂಕವೂ ಇದೆ. ಅದಕ್ಕೆ ಕಾರಣವಾಗಿರೋದು ಮೊಟ್ಟೆ. ಅಪೌಷ್ಟಿಕತೆ ನಿವಾರಣೆಗಾಗಿ ಕರ್ನಾಟಕದ 1ನೇ ತರಗತಿಯಿಂದ 10ನೇ ತರಗತಿಯ ಎಲ್ಲ ಸರ್ಕಾರಿ ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವುದು ಅಥವಾ ಬಾಳೆಹಣ್ಣು ಅಥವಾ ಚಿಕ್ಕಿ ವಿತರಿಸುವುದು ಕಡ್ಡಾಯ. ಇದಕ್ಕೆ ಸರ್ಕಾರವೇ ಹಣ ಪಾವತಿ ಮಾಡುತ್ತದೆ. ಆದರೆ.. ಮಂಡ್ಯ ಜಿಲ್ಲೆಯ ಆಲಕೆರೆ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಊಟಕ್ಕೆ ನೀಡಲು ಮೊಟ್ಟೆ ಬೇಯಿಸುತ್ತಿರುವುದು ಊರಲ್ಲಿ ಜಾತಿ ಗಲಾಟೆಗೆ ಕಾರಣವಾಗುತ್ತಿದೆ.
ಈ ಸರ್ಕಾರಿ ಶಾಲೆಯಲ್ಲಿ 120 ವಿದ್ಯಾರ್ಥಿಗಳಿದ್ದಾರೆ. ಅದರಲ್ಲಿ 80 ವಿದ್ಯಾರ್ಥಿಗಳು ಮೊಟ್ಟೆ ಬೇಡ ಎಂದು ಹೇಳಿದ್ದಾರೆ. ಮೊಟ್ಟೆ ಬೇಯಿಸುವುದನ್ನು ಮುಂದುವರಿಸಿದರೆ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎನ್ನುವುದು ಪೋಷಕರ ಎಚ್ಚರಿಕೆ. ಈಗಾಗಲೇ ಹಲವರು ವರ್ಗಾವಣೆ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾರಂತೆ. ಇನ್ನುಳಿದ ಮಕ್ಕಳು ಮೊಟ್ಟೆ ಬೇಕೇ ಬೇಕು ಎಂದು ಹಠ ಹಿಡಿದಿದ್ದಾರೆ. ಇವರಲ್ಲಿ ಬಹುತೇಕರು ಲಿಂಗಾಯತರು.
ಮೊಟ್ಟೆ ಕೊಡುವುದು ಸಮಸ್ಯೆ ಅಲ್ಲ.. ಬೇಯಿಸುತ್ತಿರುವುದು ಸಮಸ್ಯೆ..!
ಅಚ್ಚರಿ ಎನಿಸಿದರೂ ಇದು ಸತ್ಯ. ಈ ಶಾಲೆಯ ಮಕ್ಕಳ ಪೋಷಕರು, ಲಿಂಗಾಯತರು ಮೊಟ್ಟೆ ಕೊಡುವುದಕ್ಕೆ ವಿರೋಧ ಇಲ್ಲ. ಅವರು ಹೇಳುತ್ತಿರುವುದೇ ಬೇರೆ. ಈ ಶಾಲೆಯ ಪಕ್ಕದಲ್ಲೇ ಒಂದು ದೇವಸ್ಥಾನ ಇದೆ. ಅದು ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ. ಆರಂಭದಲ್ಲಿ ಮನವಿ ಮಾಡಿಕೊಂಡಿದ್ದೆವು. ಅದರಂತೆ.. ಮೊಟ್ಟೆ ಬೇಡ ಎನ್ನುವ ಮಕ್ಕಳಿಗೆ ಬಾಳೆಹಣ್ಣು ಅಥವಾ ಚಿಕ್ಕಿ ನೀಡಲಾಗುತ್ತಿತ್ತು. ಮೊಟ್ಟೆ ತಿನ್ನುವವರಿಗೆ ಹಸಿ ಮೊಟ್ಟೆಯನ್ನೆ ಮನೆಗೆ ಕೊಂಡೊಯ್ಯಲು ಅನುಮತಿ ಇತ್ತು. ಆದರೆ, ಇತ್ತೀಚೆಗೆ ಪುನಃ ದೇಗುಲ ಇದ್ದರೂ ಮೊಟ್ಟೆ ಬೇಯಿಸಲು ಆರಂಭಿಸಿದ್ದಾರೆ. ಇದು ಅಪವಿತ್ರ. ನಮ್ಮ ನಂಬಿಕೆಗೆ ಘಾಸಿಯಾಗುತ್ತಿದೆ. ಮೊಟ್ಟೆ ಕೊಡಿ. ಆದರೆ.. ದೇವಸ್ಥಾನ ಪಕ್ಕದಲ್ಲೇ ಇದೆ. ಹೀಗಾಗಿ ಅಲ್ಲೇ ಬೇಯಿಸಿಕೊಡಬೇಡಿ ಎಂಬುದಷ್ಟೇ ನಮ್ಮ ಆಗ್ರಹ ಎನ್ನುತ್ತಿದ್ದಾರೆ.
ಆಲಕೆರೆ ಸರ್ಕಾರಿ ಶಾಲೆ ಬಳಿ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನವಿದೆ. ಅದರ ಪಕ್ಕದಲ್ಲೇ ದೇವಸ್ಥಾನ ಇರುವುದರಿಂದ ಮೊಟ್ಟೆಗಳನ್ನು ಬೇಯಿಸುವುದು ಸಂಪ್ರದಾಯಗಳಿಗೆ ವಿರುದ್ಧ, ಧಾರ್ಮಿಕ ರೂಢಿಗಳನ್ನು ಉಲ್ಲಂಘಿಸಿದಂತೆ ಎಂದು ವಾದಿಸುತ್ತಿದ್ದಾರೆ.
ಗಲಾಟೆಗೆ 25 ವರ್ಷಗಳ ಇತಿಹಾಸ..!
ಇದು ಇವತ್ತಿನದ್ದಲ್ಲ. ಒಂದು ಮೂಲದ ಪ್ರಕಾರ ಇದು ವೀರಭದ್ರಸ್ವಾಮಿ ಒಡೆತನದ ಗಲಾಟೆಯಂತೆ ತೋರುತ್ತಿದೆಯಾದರೂ.. ಊರಿನವರಿಗೆ ಇದೇನೂ ಹೊಸದಲ್ಲ. ಈ ಗಲಾಟೆ ಬಹುತೇಕ ರಾಜಕೀಯ ಕಾರಣಗಳಿಗೆ ಉದ್ಭವವಾಗುವದೂ ಸತ್ಯ. ಊರಿನ ಜನರೆಲ್ಲ ಒಂದಾಗಿ ಒಂದು ನಿರ್ಧಾರ ಮಾಡಿಕೊಂಡು.. ಯಾರಿಗೂ ತೊಂದರೆಯಾಗದಂತೆ ಅನುಸರಿಸುತ್ತಿರಬೇಕಾದರೆ.. ದಿಢೀರನೇ ಮತ್ತೆ ಮೊಟ್ಟೆ ಬೇಯಿಸಿ ವಿವಾದ ಸೃಷ್ಟಿಸಿದವರಾರು..? ಮೊಟ್ಟೆಯನ್ನು ಶಾಲೆಯಲ್ಲಿ ತಿಂದರೆ ಮಾತ್ರ ಪೌಷ್ಠಿಕಾಂಶ ಬರುತ್ತದಾ.. ಊರಿನ ಹಿರಿಯರಿಗೇ ಇಲ್ಲದ ಈ ಸಮಸ್ಯೆ ಶಾಲೆಯ ಆಡಳಿತ ಮಂಡಳಿಯವರಿಗೇಕೆ… ಇಲ್ಲದ ಸಮಸ್ಯೆ ಸೃಷ್ಟಿಸಿದ್ದರ ಹಿಂದೆ ಬೇರೇನಾದರೂ ಕೈವಾಡ ಇದೆಯೇ.. ಹೀಗೆ ಹತ್ತು ಹಲವಾರು ಪ್ರಶ್ನೆಗಳು ಉದ್ಭವವಾಗಿವೆ.



