ಹಿರಿಯ ನಟಿ ಲೀಲಾವತಿ ಅವರಿಗೆ ವಯಸ್ಸಾಗಿದೆ. ಆರೋಗ್ಯ ಮೊದಲಿನಂತಿಲ್ಲ. ವೃದ್ಧಾಪ್ಯದಿಂದಾಗಿ ಹಾಸಿಗೆ ಹಿಡಿದಿದ್ದಾರೆ. ದೇಹ ನಿತ್ರಾಣವಾಗಿದೆ. ಹೆಚ್ಚು ಸಮಯ ನಿದ್ರೆಯಲ್ಲೇ ಕಳೆಯುತ್ತಾರೆ. ಮನೆಗೆ ಬಂದವರನ್ನು ಕೆಲವೊಮ್ಮೆ ಗುರುತು ಹಿಡಿಯುತ್ತಾರೆ. ಕೆಲವೊಮ್ಮೆ ಆಗುವುದಿಲ್ಲ. ಲೀಲಾವತಿ ಅವರನ್ನು ನೋಡುವುದಕ್ಕೆ ಹಲವು ಹಿರಿಯ ನಟ, ನಟಿಯರು ಮನೆಗೆ ಬರುತ್ತಿದ್ದಾರೆ. ನಟ ದರ್ಶನ್ ಹಾಗೂ ಅಭಿಷೇಕ್ ಅಂಬರೀಷ್ ಲೀಲಾವತಿ ಅವರ ಮನೆಗೆ ಭೇಟಿ ಆರೋಗ್ಯ ವಿಚಾರಿಸಿದ್ದಾರೆ.
ಲೀಲಾವತಿ ಅವರಿಗೆ 87 ವರ್ಷ ವಯಸ್ಸು. ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ತೋಟದ ಮನೆಯಲ್ಲಿ ಲೀಲಾವತಿ ಮನೆ ಇದೆ. ದರ್ಶನ್ ಅವರನ್ನೂ ಲೀಲಾವತಿ ಗುರುತು ಹಿಡಿಯುವುದಕ್ಕೆ ಸಾಧ್ಯವಾಗಿಲ್ಲ. ಅಭಿಷೇಕ್ ಅವರನ್ನೂ ಗುರುತು ಹಿಡಿದಿಲ್ಲ. ಇತ್ತೀಚೆಗೆ ಮನೆಗೆ ಹೋಗಿ ಮಾತನಾಡಿಸಿದ್ದ ಅರ್ಜುನ್ ಸರ್ಜಾ ಅವರನ್ನೂ ಲೀಲಾವತಿ ಅರ್ಧಂಬರ್ಧ ಗುರುತು ಹಿಡಿದಿದ್ದರು. ನೆನಪುಗಳು ಮುಸುಕಾಗುತ್ತಿವೆ. ವಯಸ್ಸಿನ ಸಹಜ ಪ್ರಕ್ರಿಯೆ ಅದು.
ಲೀಲಾವತಿ ಇತ್ತೀಚಿನವರೆಗೂ ಆಕ್ಟಿವ್ ಆಗಿದ್ದರು. ಸೋಲದೇವನಹಳ್ಳಿಯಲ್ಲಿಯೇ ಕೃಷಿ ಮಾಡಿಕೊಂಡು, ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡು ಬದುಕುತ್ತಿರುವ ಲೀಲಾವತಿ, ಇತ್ತೀಚೆಗೆ ಪಶು ಆಸ್ಪತ್ರೆ ಕೇಂದ್ರವನ್ನು ಕಟ್ಟಿಸಿದ್ದರು. ಇದೀಗ ಆ ಆರೋಗ್ಯ ಕೇಂದ್ರಕ್ಕೆ ಬೇಕಾದ ಇನ್ನಿತರ ವ್ಯವಸ್ಥೆಗಳನ್ನು ಮಾಡಿಕೊಡುವುದಾಗಿ ಡಿಸಿಎಂ ಡಿಕೆ ಶಿವಕುಮಾರ್ ಭರವಸೆ ಕೊಟ್ಟು, ಪ್ರಕ್ರಿಯೆ ಆರಂಭಿಸಿದ್ಧಾರೆ.
ಕೆಲವೇ ದಿನಗಳ ಹಿಂದೆ ಲೀಲಾವತಿ ನಿಧನರಾಗಿದ್ದಾರೆ ಎಂಬ ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಅಮ್ಮ ಆರೋಗ್ಯವಾಗಿದ್ದಾರೆ. ವಯೋಸಹಜ ಸಮಸ್ಯೆಗಳಿವೆ. 86-87 ವಯಸ್ಸು. ಅದ್ಯಾಕೆ ಸುದ್ದಿ ಹಬ್ಬಿಸಿದ್ದಾರೋ ಗೊತ್ತಿಲ್ಲ. ಮಂಜುನಾಥ ನೋಡಿಕೊಳ್ಳಲಿ ಎಂದು ಹೇಳಿದ್ದರು.
ಇದೀಗ ದರ್ಶನ್ ಮತ್ತು ಅಭಿಷೇಕ್ ಅಂಬರೀಷ್ ಭೇಟಿ ನೀಡಿ ಅರೋಗ್ಯ ವಿಚಾರಿಸಿಕೊಂಡಿದ್ದಾರೆ. ಹಾಸಿಗೆ ಮೇಲೆ ಮಲಗಿದ್ದ ಲೀಲಾವಾತಿಯವರನ್ನು ಕಂಡು ಮಾತನಾಡಿಸಲು ಪ್ರಯತ್ನಿಸಿ ದರ್ಶನ್ ಅಮ್ಮ ನಾನು ದರ್ಶನ್ ಬಂದಿದ್ದೀನಿ ಎಂದರೂ ಲೀಲಾವತಿ ಅವರಿಗೆ ಗುರುತಿಸುವ ಶಕ್ತಿ ಇರಲಿಲ್ಲ. ಎಲ್ಲರನ್ನೂ ಗುರುತು ಹಿಡೀತಾರೆ ಆದರೆ ಮಾತನಾಡಲು ಆಗುತ್ತಿಲ್ಲ ಎಂದು ವಿನೋದ್ ರಾಜ್ ಹೇಳಿದ್ದಾರೆ. ನಟ ಅಭಿಷೇಕ್ ಅವರೂ ಕೂಡಾ ಲೀಲಾವತಿ ಅವರನ್ನು ಮಾತನಾಡಿಸಲು ಪ್ರಯತ್ನಿಸಿದರು. ವಿನೋದ್ ರಾಜ್ ಅವರಿಗೆ ಧೈರ್ಯ ಹೇಳಿದರು.



