ಮಠದ ಕಾರ್ಯಕ್ರಮಕ್ಕೆ ಬಂದಿದ್ದ ಅಮಿತ್ ಶಾ ಅವರಿಗೆ ರಾಜ್ಯ ಬಿಜೆಪಿಯ ತರಲೆ ತಾಪತ್ರಯ ನೋಡಿ ತಲೆ ಕೆಟ್ಟು ಹೋದಂತೆ ಕಾಣಿಸುತ್ತಿದೆ. ಅಮಿತ್ ಶಾಗೆ ಒಂದು ವಿಷಯವಂತೂ ಸ್ಪಷ್ಟವಾಗಿ ಗೊತ್ತಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದರೆ ವಿಜಯೇಂದ್ರ ಮತ್ತು ಯಡಿಯೂರಪ್ಪ ಶಕ್ತಿ ಬೇಕೇ ಬೇಕು. ಬಿಜೆಪಿಯ ಇನ್ಯಾವ ನಾಯಕರಿಗೂ ಅಷ್ಟು ಮತಗಳನ್ನು ಹೊತ್ತು ತರುವ ಶಕ್ತಿ ಇಲ್ಲ. ಆದರೆ.. ಅವರೊಬ್ಬರಿಂದಲೇ ಗೆಲುವು ಸಾಧ್ಯವಿಲ್ಲ. ಅದಕ್ಕೆ ವಿಜಯೇಂದ್ರ ಅವರೂ ಸ್ವಲ್ಪ ತಗ್ಗಿ ಬಗ್ಗಿ ಹೋಗಬೇಕು. ಅಮಿತ್ ಶಾ ಎದುರು ಇದ್ದ ಸಮಸ್ಯೆಯೇ ಅದು.
ಯಡಿಯೂರಪ್ಪ ರಂಗ ಪ್ರವೇಶ :
ಈ ಮಧ್ಯೆ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಯಡಿಯೂರಪ್ಪ ಕರ್ನಾಟಕ ದಲ್ಲಿ ಪಕ್ಷ ಸಂಘಟನೆಗಾಗಿ ತಮ್ಮ ಪುತ್ರ ವಿಜಯೇಂದ್ರ ಪಡುತ್ತಿರುವ ಕಷ್ಟದ ವಿವರ ನೀಡಿದ್ದಲ್ಲದೆ, “ಇಷ್ಟು ಕಷ್ಟ ಪಡುತ್ತಿರುವ ವಿಜಯೇಂದ್ರ ವಿರುದ್ಧ ಅಪಪ್ರಚಾರ ನಡೆಯುತ್ತಿದೆ” ಎಂದು ಹೇಳಿದ್ದಾರೆ. ಅಪಪ್ರಚಾರಕ್ಕೆ ಇಳಿದಿರುವ ನಾಯಕರಿಗೆ ಸುಮ್ಮನಿರಲು ಹೇಳಿ. ಇಲ್ಲವೇ ವಿಜಯೇಂದ್ರ ಅಧಿಕಾರದಲ್ಲಿರಬೇಕೋ ಬೇಡವೋ ಎಂಬುದನ್ನಾದರೂ ಸ್ಪಷ್ಟವಾಗಿ ಹೇಳಿಬಿಡಿ ಎಂದೂ ಹೇಳಿದ್ದಾರೆ. ಯಾವಾಗ ಈ ಮಾತು ಹೊರಬಿತ್ತೋ.. ಆಗ ಅಮಿತ್ ಶಾ ಕೂಡಾ ಅಲರ್ಟ್ ಆಗಿದ್ದಾರೆ.
ಆಗ ಅಮಿತ್ ಶಾ ʻʻ ಯಡ್ಯೂರಪ್ಪಾಜೀ, ವಿಜಯೇಂದ್ರ ಅವರೇ ಪಕ್ಷಾಧ್ಯಕ್ಷರಾಗಿ ಕಂಟಿನ್ಯೂ ಆಗುತ್ತಾರೆ. ಆದರೆ ಅವರು ರಾಜ್ಯ ಸರಕಾರದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಟ ಮಾಡುತ್ತಿಲ್ಲ, ಪಕ್ಷದಲ್ಲಿರುವ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಅನ್ನೋ ಕಂಪ್ಲೇಂಟ್ಸ್ ಇವೆ. ಅದನ್ನು ಸರಿಪಡಿಸಿಕೊಳ್ಳಬೇಕುʼʼ ಎಂದಿದ್ದಾರೆ. ಅಷ್ಟು ಹೇಳಿದ ನಂತರ ಯಡಿಯೂರಪ್ಪ ಇನ್ನು ಮುಂದೆ ಹಾಗಾಗದಂತೆ ನೋಡಿಕೊಳ್ತೇನೆ ಎಂದು ಪ್ರಾಮಿಸ್ ಮಾಡಿದ್ದಾರೆ.
ವಿಜಯೇಂದ್ರಗೆ 3 ಟಾಸ್ಕ್ :
ವಿಜಯೇಂದ್ರ ಅವರ ಬಳಿಯೂ ಚರ್ಚೆ ನಡೆಸಿದ ಅಮಿತ್ ಶಾ ನೇರವಾಗಿ ಮೂರು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಮೊದಲನೆಯದ್ದು ಪಕ್ಷದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು. ಪಕ್ಷದ ಹಿರಿಯ ನಾಯಕರಿಗೆ ವಿಜಯೇಂದ್ರ ಅವರ ಬಗ್ಗೆ ಸಮಾಧಾನ ಇಲ್ಲ. ತಮಗೆ ವಿರುದ್ಧ ಅಭಿಪ್ರಾಯ ಹೊಂದಿರುವವರನ್ನು ಮುಲಾಜಿಲ್ಲದೆ ದೂರ ಇಡುತ್ತಾರೆ. ಈ ವರ್ತನೆಯಿಂದಾಗಿ ಹಲವು ನಾಯಕರು ಸಿಟ್ಟಾಗಿದ್ದಾರೆ. ಆ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲೇಬೇಕು ಎಂದು ಹೇಳಿದ್ಧಾರೆ.
ಎರಡನೆಯದ್ದು ಜೆಡಿಎಸ್ ಜತೆಗಿನ ಮೈತ್ರಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎನ್ನುವುದು. ವಿಜಯೇಂದ್ರ ಅವರು ಏನೇ ಹೇಳಿದರೂ.. ತಳಮಟ್ಟದಲ್ಲಿ ಪಕ್ಷದ ಗ್ರಾಸ್ ಲೆವೆಲ್ ಮೇಲೇಳುತ್ತಿಲ್ಲ. ಜೆಡಿಎಸ್ ಇಲ್ಲದೆ ಹೋದರೆ, ಮೈಸೂರು ಭಾಗದಲ್ಲಿ ಸೀಟು ಗೆಲ್ಲುವುದು ಕಷ್ಟ. ಜೆಡಿಎಸ್ ಬೇರೆ, ಬಿಜೆಪಿ ಬೇರೆ ಎಂದು ಹೋದರೆ, ಲಾಭ ಮಾಡಿಕೊಳ್ಳುವುದು ಕಾಂಗ್ರೆಸ್ ಎನ್ನುವ ಲೆಕ್ಕಾಚಾರ ಅಮಿತ್ ಶಾ ಅವರದ್ದು.
ಮೂರನೇಯದಾಗಿ.. ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರದ ವಿರುದ್ಧ ಪರಿಣಾಮಕಾರಿ ಹೋರಾಟಗಳನ್ನು ಸಂಘಟಿಸಿ ಎಂಬುದು. ವಿಜಯೇಂದ್ರ ಅವರು ಜನಾಕ್ರೋಶ ಯಾತ್ರೆ ಸೇರಿದಂತೆ ಹಲವು ಹೋರಾಟಗಳನ್ನೇನೋ ಮಾಡಿದ್ದಾರೆ. ಆದರೆ ಆ ಯಾವ ಹೋರಾಟಗಳೂ ಜನರ ಮನಸ್ಸಿಗೆ ಬಿದ್ದಿಲ್ಲ. ಕೇವಲ ಮೀಡಿಯಾಗಳಲ್ಲಿ ಪ್ರಚಾರ ಮಾಡಿದರೆ ಸಕ್ಸಸ್ ಆಗಲ್ಲ ಎನ್ನುವುದು ಶಾ ಅವರ ವಾದ.
ಒಟ್ಟಿನಲ್ಲಿ ಸಂಘಟನೆಯನ್ನ ಸೀರಿಯಸ್ ಆಗಿ ತೆಗೆದುಕೊಳ್ಳದೇ ಹೋದರೆ.. ವಿಜಯೇಂದ್ರ ಅವರ ಸ್ಥಾನವೂ ಉಲ್ಟಾಪಲ್ಟಾ ಆಗಬಹುದು ಎಂಬ ಸಿಗ್ನಲ್ ಕೊಟ್ಟಿದ್ದಾರೆ ಅಮಿತ್ ಶಾ.



