ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರಿಗೆ ಬಿಜೆಪಿ ಹೈಕಮಾಂಡ್ ಆಗಾಗ್ಗೆ ಬುದ್ದಿ ಮಾತು ಹೇಳುತ್ತಲೇ ಇದೆ. ಅದಕ್ಕೆ ತಕ್ಕಂತೆ ರಾಜ್ಯ ಬಿಜೆಪಿಯಲ್ಲಿ ವಿಜಯೇಂದ್ರ ವಿರೋಧಿ ಬಣ.. ಲಾಗಾಯ್ತಿನಿಂದಲೂ ಆಕ್ಟಿವ್ ಆಗಿಯೇ ಇದೆ. ಹೀಗಿರುವಾಗಲೇ ದೆಹಲಿಗೆ ಹೋಗಿದ್ದ ವಿಜಯೇಂದ್ರ & ಟೀಂಗೆ ಅಮಿತ್ ಶಾ ಬುದ್ದಿ ಮಾತು ಹೇಳಿ ಕಳಿಸಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಸಿದ್ದರಾಮಯ್ಯನವರ ಸರ್ಕಾರದ ಹಿಂದೂ ವಿರೋಧಿ ನೀತಿ, ಧರ್ಮಸ್ಥಳ ಪ್ರಕರಣ ಸೇರಿದಂತೆ, ಹಲವು ವಿಚಾರಗಳನ್ನು ಕರ್ನಾಟಕ ಬಿಜೆಪಿ ನಿಯೋಗ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆ ಮಾತುಕತೆ ನಡೆಸಿದೆ. ಈ ವೇಳೆ, ರಾಜ್ಯ ಬಿಜೆಪಿಯ ಕಾರ್ಯವೈಖರಿಯ ಬಗ್ಗೆ ಅಮಿತ್ ಶಾ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ʻʻಹೋರಾಟದ ತೀವ್ರತೆ ಸಾಲದು.. ಬರೀ ಮಾತನಾಡಿದ್ರೆ ಆಗಲ್ಲʼʼ
ಧರ್ಮಸ್ಥಳ ಚಲೋ ಯಶಸ್ವಿಯಾಗಿದೆ. ದ್ದರಾಮಯ್ಯ ಸರ್ಕಾರದ ಹಿಂದೂ ವಿರೋಧಿ ನೀತಿಯನ್ನು ಜನರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದ ವಿಜಯೇಂದ್ರ & ಟೀಂನ ವಾದಕ್ಕೆ ಅಮಿತ್ ಶಾ ಅವರೇನೋ ಓಕೆ ಎಂದರು. ಆದರೆ.. ಬಹುತೇಕ ಹೋರಾಟಗಳು ಸೋಷಿಯಲ್ ಮೀಡಿಯಾ ಪೋಸ್ಟ್, ಟಿವಿಗಳಲ್ಲಿ ಹೇಳಿಕೆಗಳಿಗಷ್ಟೇ ಸೀಮಿತವಾಗುತ್ತಿವೆ ಏಕೆ ಎಂದೂ ಪ್ರಶ್ನೆ ಮಾಡಿದರು.
ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಒಂದಲ್ಲಾ ಒಂದು ಅಹಿತಕರ ಘಟನೆಗಳು, ಭ್ರಷ್ಟಾಚಾರದ ಸುದ್ದಿಗಳು, ಕೋಮು ಗಲಭೆ, ಹಿಂದೂ ವಿರೋಧಿ ತೀರ್ಮಾನಗಳು ನಡೆದರೂ, ಅದನ್ನು ವ್ಯವಸ್ಥಿತವಾಗಿ ಜನರ ಬಳಿ ತಲುಪಿಸುವಲ್ಲಿ ಒಟ್ಟಾರೆಯಾಗಿ ನೀವೆಲ್ಲಾ ವಿಫಲರಾಗಿದ್ದೀರಿ. ಬಾಯಿ ಮಾತಿನ ಹೇಳಿಕೆಗಳು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದರೆ ಪ್ರಯೋಜನವಿಲ್ಲ ಎಂದಿರುವ ಅಮಿತ್ ಶಾ ಇನ್ನಷ್ಟು ಪರಿಣಾಮಕಾರಿ ಹೋರಾಟದ ಅಗತ್ಯ ಇದೆ ಎಂದು ಹೇಳಿದರು.
ಒಗ್ಗಟ್ಟಿಗೆ ನಿಮ್ಮ ಪ್ರಯತ್ನವೂ ಇರಲಿ ಎಂದ ಶಾ..!
ಹೋರಾಟವೇನೋ ಓಕೆ.. ಆದರೆ ಪ್ರತಿಬಾರಿಯೂ ಹೈಕಮಾಂಡ್ ನಾಯಕರೇ ಬರಬೇಕು, ಒಗ್ಗಟ್ಟು ಮೂಡಿಸಬೇಕು ಎಂದರೆ ಆಗಲ್ಲ. ನಿಮ್ಮ ಪ್ರಯತ್ನವೂ ಬೇಕು. ನಿಮ್ಮಿಂದ ಪಕ್ಷದಲ್ಲಿ ಮೂಡಿರುವ ಅಸಮಾಧಾನಗಳನ್ನು ಬಗೆಹರಿಸುವ ಯಾವುದೇ ಪ್ರಯತ್ನ ಆಗುತ್ತಿಲ್ಲ. ಆ ವಿಷಯಕ್ಕೂ ಗಮನ ಕೊಡಿ. ನಮ್ಮಲ್ಲಿರುವ ವರದಿಯ ಪ್ರಕಾರ, ರಾಜ್ಯ ಬಿಜೆಪಿಯಲ್ಲಿ ಒಗ್ಗಟ್ಟಿನ ಕೊರತೆಯಿದೆ ಎನ್ನುವ ಮಾತನ್ನು ಹೇಳಿದ್ದಾರೆ ಎಂದು ಸುದ್ದಿಯಾಗುತ್ತಿದೆ. ಹಿಂದೂಗಳಿಗೆ ಒಗ್ಗಟ್ಟಿನ ಮಂತ್ರ ಹೇಳುವವರಿಗೇ ಒಗ್ಗಟ್ಟಿಲ್ಲದಿದ್ದರೆ ಹೇಗೆ ಎಂದು ಪ್ರಶ್ನೆ ಮಾಡಿದರಂತೆ. ಅದನ್ನು ಸರಿಪಡಿಸಿಕೊಳ್ಳುವ ಭರವಸೆ ಕೊಟ್ಟಿದ್ದಾರಂತೆ ವಿಜಯೇಂದ್ರ.
ಅಮಿತ್ ಶಾ ಭೇಟಿ ಮಾಡಿದ ವಿಜಯೇಂದ್ರ ನೇತೃತ್ವದ ನಿಯೋಗದಲ್ಲಿ ವಿಪಕ್ಷ ನಾಯಕರಾದ ಅಶೋಕ್, ಛಲವಾದಿ ನಾರಾಯಣಸ್ವಾಮಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜಾ, ಎಸ್.ಆರ್.ವಿಶ್ವನಾಥ್ ಇದ್ದರು. ಈ ವೇಳೆ ಕರ್ನಾಟಕದ ಸ್ವಾಮೀಜಿಗಳು, ತಮ್ಮನ್ನು ಭೇಟಿಯಾಗಿ, ಧರ್ಮಸ್ಥಳ ಪ್ರಕರಣವನ್ನು ಎನ್ಐಎಗೆ ವಹಿಸುವಂತೆ ಒತ್ತಾಯಿಸಿದ ಮಾಹಿತಿಯನ್ನು, ರಾಜ್ಯ ನಿಯೋಗಕ್ಕೆ, ಅಮಿತ್ ಶಾ ನೀಡಿದ್ದಾರೆ.



