ಹಿಟ್ ಚಿತ್ರಗಳಿಲ್ಲದೆ ಡಲ್ಲು ಹೊಡೆಯುತ್ತಿದ್ದ ಚಿತ್ರರಂಗಕ್ಕೆ ಯಶಸ್ಸಿನ ರುಚಿ ತೋರಿಸಿದ್ದು ಎಕ್ಕ. 2025ರಲ್ಲಿ 140ಕ್ಕೂ ಅಧಿಕ ಸಿನಿಮಾಗಳು ಬಂದಿದ್ದರೂ, ಯಾವ ಸಿನಿಮಾಗಳು ಕೂಡ ದೊಡ್ಡಮಟ್ಟದಲ್ಲಿ ಕಲೆಕ್ಷನ್ ಮಾಡಿರಲಿಲ್ಲ. ಹೌಸ್‌ಫುಲ್ ಬೋರ್ಡ್ ಬಿದ್ದಿದ್ದೇ ಎಕ್ಕ ಚಿತ್ರದಿಂದ. ಯುವರಾಜ್ ಕುಮಾರ್ ಅಭಿನಯದ ಎಕ್ಕ ಚಿತ್ರ ಚಿತ್ರಮಂದಿರಗಳಲ್ಲಿ ಯಶಸ್ವಿ 25 ದಿನ ಪೂರೈಸಿ ಮುನ್ನುಗ್ಗುತ್ತಿದೆ. ಜುಲೈ 18ಕ್ಕೆ ರಿಲೀಸ್ ಆಗಿದ್ದ ಎಕ್ಕ, ಆಗಸ್ಟ್ 11ಕ್ಕೆ 25 ದಿನ ಪೂರೈಸಿದೆ.
ಎಕ್ಕ ಚಿತ್ರದ ಬ್ಯಾಂಗಲ್ ಬಂಗಾರಿ ಹಾಡಂತೂ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಸಂಜನಾ ಆನಂದ್ ಹರೆಯದ ಹುಡುಗರ ಹೊಸ ಕ್ರಷ್ ಆಗಿದ್ದರು. ಯುವ ಚಿತ್ರದಲ್ಲಿ ಆವರೇಜ್ ಹಿಟ್ ನೀಡಿದ್ದ ಯುವರಾಜ್ ಕುಮಾರ್, ಎಕ್ಕ ಚಿತ್ರದಲ್ಲಿ ದೊಡ್ಡ ಹಿಟ್ ಕೊಟ್ಟಿದ್ಧಾರೆ.
ಜಯಣ್ಣ-ಭೋಗೇಂದ್ರ, ಕಾರ್ತಿಕ್ ಗೌಡ-ಯೋಗಿರಾಜ್ ಹಾಗೂ ಅಶ್ವಿನಿ ಪುನೀತ್ ರಾಜ್ ಕುಮಾರ್ ನಿರ್ಮಾಣದ ಚಿತ್ರಕ್ಕೆ ರೋಹಿತ್ ಪದಕಿ ಆಕ್ಷನ್ ಕಟ್ ಹೇಳಿದ್ದರು. ಸಿನಿಮಾ ಯಶಸ್ವಿಯಾಗಿ 25 ದಿನ ಪೂರೈಸಿ, ಈಗಲೂ ಚಿತ್ರಮಂದಿರಗಳಲ್ಲಿ ಉತ್ತಮ ಕಲೆಕ್ಷನ್ ಮಾಡ್ತಾ ಇದೆ.
ಯುವ ರಾಜ್ ಕುಮಾರ್ ಎದುರು ಸಂಜನಾ ಆನಂದ್, ಸಂಪದಾ ಹುಲಿವಾನ ನಾಯಕಿಯರಾಗಿ ನಟಿಸಿದ್ದರು. ಶೃತಿ ತಾಯಿಯಾಗಿ, ಆದಿತ್ಯ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದ ಸಿನಿಮಾ ಸೂಪರ್ ಹಿಟ್ ಸಾಲಿಗೆ ಸೇರಿದೆ.
ಎಕ್ಕ ಸಿನಿಮಾ ಬೆಂಗಳೂರಿನ ಸಂತೋಷ್, ವೀರೇಶ್, ವೆಂಕಟೇಶ್ವರ, ಗಣೇಶ್ ಚಿತ್ರಮಂದಿರಗಳಲ್ಲಿ ಹಾಗೂ ಕೆಲವು ಮಲ್ಟಿಪ್ಲೆಕ್ಸ್ ಸ್ಕೀನ್‌ಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಆಗ್ತಾ ಇದೆ. ಈಗಲೂ ಪ್ರೇಕ್ಷಕರು ಎಕ್ಕ ಚಿತ್ರವನ್ನು ಕಣ್ತುಂಬಿಕೊಳ್ತಿದ್ದಾರೆ. ತುಮಕೂರಿನ ಗಾಯತ್ರಿ, ಮೈಸೂರಿನ ಗಾಯತ್ರಿ, ಮಂಡ್ಯದ ಗುರುಶ್ರೀ, ಹಾಸನದ ಎಸ್‌ಬಿಜಿ, ಚಾಮರಾಜನಗರದ ಸಿಂಹ, ಶಿವಮೊಗ್ಗದ ಮಲ್ಲಿಕಾರ್ಜುನ, ದಾವಣಗೆರೆಯ ಅಶೋಕ, ಹುಬ್ಬಳ್ಳಿಯ ಸುಧಾ, ಚಿತ್ರದುರ್ಗದ ಬಸವೇಶ್ವರ, ವಿಜಯಪುರದ ಡ್ರೀಮ್ ಲ್ಯಾಂಡ್, ಬೆಳಗಾವಿಯ ನಿರ್ಮಲ, ಕಲಬುರ್ಗಿಯಿ ಸಂಗಂ ಸೇರಿದಂತೆ ಹಲವೆಡೆ ಈಗಲೂ ಉತ್ತಮ ಕಲೆಕ್ಷನ್ ಮಾಡುತ್ತಿದೆ.
ಸು ಫ್ರಂ ಸೋ ರಿಲೀಸ್ ಆದ ಮೇಲೆ ಎಕ್ಕ ಚಿತ್ರದ ಕಲೆಕ್ಷನ್ ಸ್ವಲ್ಪ ಕಡಿಮೆಯಾಗಿದೆಯಾದರೂ.. ಹೊಡೆತವೇನೂ ಬಿದ್ದಿಲ್ಲ. ಸು ಫ್ರಂ ಸೋ, ಪ್ರೇಕ್ಷಕರ ಮೊದಲ ಆಯ್ಕೆಯಾಗಿದೆ ಎನ್ನುವುದಂತೂ ಸತ್ಯ. ʻಸು ಫ್ರಂ ಸೋʼ ಸಿನಿಮಾ ಭರ್ಜರಿ ಬ್ಲಾಕ್ ಬಸ್ಟರ್ ಆಗಿದೆ. ಸಿನಿಮಾ ಚಿತ್ರರಂಗದವರಿಗೇ ಅಚ್ಚರಿ. ಬರಬಿಸಿಲಿನಲ್ಲಿ ಒಣಗಿದ್ದ ಭೂಮಿಗೆ ಮಳೆ ಸುರಿದಂತೆ ಚಿತ್ರರಂಗಕ್ಕೆ ಯಶಸ್ಸಿನ ರುಚಿ ನೀಡಿದೆ. ಸಿನಿಮಾ ಈಗಾಗಲೇ ಮಲಯಾಳಂ ಹಾಗೂ ತೆಲುಗಿಗೆ ಡಬ್ ಆಗಿ ಅಲ್ಲಿಯೂ ಯಶಸ್ಸು ಕಾಣುತ್ತಿದೆ. ಇದೀಗ ಹಿಂದಿಯ ಅಜಯ್ ದೇವಗನ್ ಕೂಡಾ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.
ಜುಲೈ 25ರಂದು ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸಿನ ಮಳೆ ಸುರಿಸುತ್ತಿರುವ ಸು ಫ್ರಂ ಸೋ ಚಿತ್ರಕ್ಕೆ ಹಣ ಹಾಕಿದ್ದವರು ರಾಜ್ ಬಿ ಶೆಟ್ಟಿ. ಸ್ವತಃ ನಟರಾಗಿದ್ದರೂ.. ತಮ್ಮದೇ ನಿರ್ಮಾಣದ ಚಿತ್ರದಲ್ಲಿ ಲೇವಡಿಗೊಳಗಾಗುವ ಕಾಮಿಡಿ ಪಾತ್ರವನ್ನೇ ಆಯ್ದುಕೊಂಡು ಗೆದ್ದಿರುವ ರಾಜ್ ಬಿ ಶೆಟ್ಟಿ, ಕಥೆಯಷ್ಟೇ ಮುಖ್ಯ ಅನ್ನೋದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ಜೆಪಿ ತುಮಿನಾಡ್, ರಾಜ್ ಬಿ ಶೆಟ್ಟಿ, ಶನೀಲ್ ಗೌತಮ್, ಸಂಧ್ಯಾ ಅರಕೆರೆ ಮುಖ್ಯಭೂಮಿಕೆಯಲ್ಲಿರುವ ‘ಸು ಫ್ರಮ್ ಸೋ’ ಚಿತ್ರದ ಬಾಕ್ಸಾಫೀಸ್ ಕಲೆಕ್ಷನ್ 60 ಕೋಟಿ ದಾಟಿದೆ.



