ಅಪರ್ಣ ಅಪ್ಪಟ ಕಲಾವಿದೆ. ಆಕೆ ಎಂದೂ ನಾಯಕಿಯಾಗಲೇ ಇಲ್ಲ. ಪುಟ್ಟಣ್ಣ ಕಣಗಾಲ್ ಅವರ ಮಸಣದ ಹೂವು ಚಿತ್ರದಲ್ಲಿ ಅಪರ್ಣ ನಟಿಸಿದ್ದರೂ, ಆ ಚಿತ್ರದಲ್ಲಿ ಖಳನಾಯಕಿ (ಜಯಂತಿ)ಯೇ ನಾಯಕಿ. ಅಂಬರೀಷ್ ಹೀರೋ.
ಅಪರ್ಣ ಒಟ್ಟು ನಟಿಸಿದ್ದ ಚಿತ್ರಗಳು 12. ಆ 12 ಚಿತ್ರಗಳಲ್ಲಿ 4 ಚಿತ್ರಗಳಲ್ಲಿ ವಿಷ್ಣುವರ್ಧನ್ ಹೀರೋ. ನಮ್ಮೂರ ರಾಜ, ಒಲವಿನ ಆಸರೆ, ಒಂದಾಗಿ ಬಾಳು ಹಾಗೂ ಡಾಕ್ಟರ್ ಕೃಷ್ಣ. ವಿಷ್ಣುವರ್ಧನ್ ಅವರ ತಂಗಿಯೇ ಇರಬೇಕು ಎಂದುಕೊಂಡಿದ್ದರು ಅಭಿಮಾನಿಗಳು. ಈ ಯಾವ ಚಿತ್ರಗಳಲ್ಲೂ ಅಪರ್ಣ ನಾಯಕಿ ಅಲ್ಲ. ನಾಯಕ ಅಥವಾ ನಾಯಕಿಯ ತಂಗಿಯ ಪಾತ್ರ ಅಥವಾ ನೊಂದಿರುವ ಹೆಣ್ಣಿನ ಪಾತ್ರಗಳೇ. ಎಲ್ಲ ಚಿತ್ರಗಳಲ್ಲೂ ಅಳಿಸುತ್ತಿದ್ದ ಅಪರ್ಣ, ಕಿರುತೆರೆಗೆ ಬಂದು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಿದ್ದರು.
ಮಸಣದ ಹೂವಿನ ಪಾರ್ವತಿಯೇ, ಮಜಾ ಟಾಕೀಸಿನ ಒನ್ & ಓನ್ಲಿ ವರಲಕ್ಷ್ಮಿಯೇ.. ಎಂದು ಬೆರಗಾಗುವಂತೆ ಮಾಡಿದ್ದವರು ಅಪರ್ಣ. ನಿರೂಪಣೆ ಮಾಡಿಯೇ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದವರು ಅಪರ್ಣ. ಅಂತಹ ಅಪರ್ಣ ಅವರು ಮಜಾ ಟಾಕೀಸಿಗೆ ಬಂದಾಗ ಮೊದ ಮೊದಲು ಜನ ಅಪರ್ಣ ಅವರು ಈ ರೀತಿಯ ಪಾತ್ರ ಮಾಡಬಾರದಿತ್ತು ಎಂದುಕೊಂಡಿದ್ದವರೇ.. ಆಮೇಲಾಮೇಲೆ ನಕ್ಕು ನಲಿದಾಡತೊಡಗಿದ್ದರು. ಅಪರ್ಣ ಅವರ ಮೊದಲ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರಾದರೆ.. ಕೊನೆಯ ಡೈರೆಕ್ಟರ್ ಸೃಜನ್ ಲೋಕೇಶ್.
ಈ ನಡುವೆ ರೇಡಿಯೋ ಜಾಕಿಯಾಗಿ, ಟಿವಿ ನ್ಯೂಸ್ ರೀಡರ್ ಆಗಿ, ಕನ್ನಡದ ಕಾರ್ಯಕ್ರಮಗಳ ನಿರೂಪಕಿಯಾಗಿ ಶಹಬ್ಬಾಸ್ ಎನಿಸಿಕೊಂಡಿದ್ದ ಅಪರ್ಣ ಅವರ ವೈಯಕ್ತಿಕ ಬದುಕು ನೋವಿನಿಂದಲೇ ಕೂಡಿತ್ತು. ನಾಗರಾಜ್ ವಸ್ತಾರೆ ಅವರನ್ನು ಮದುವೆಯಾದ ಮೇಲೆ ನಿರುಮ್ಮಳವಾಗಿ ನಗು ನಗುತ್ತಾ ಬದುಕಿದ್ದ ಅಪರ್ಣ ಅನಿರೀಕ್ಷಿತ ತೊಂದರೆಗಳಲ್ಲಿ ಸಿಲುಕಿ ಕಷ್ಟಕ್ಕೆ ಬಿದ್ದಿದ್ದರು.
ಜೀವನವೇ ಒಂದು ನಿತ್ಯೋತ್ಸವ. ನಗು ನಗುತ್ತಾ ಬದುಕಬೇಕು ಎನ್ನುತ್ತಿದ್ದ ಅಪರ್ಣ, ಶ್ವಾಸಕೋಶದ ಕ್ಯಾನ್ಸರ್ʻನ್ನು ಸೋಲಿಸುವ ಹಠಕ್ಕೆ ಬಿದ್ದಿದ್ದರು. 6 ತಿಂಗಳಷ್ಟೇ ಎಂದಿದ್ದ ವೈದ್ಯರಿಗೇ ಸವಾಲು ಹಾಕುವಂತೆ ಎರಡೂ..ಎರಡೂವರೆ ವರ್ಷ ನಗು ನಗುತ್ತಾ ಬದುಕಿಬಿಟ್ಟರು. ಬದುಕಿರುವವರೆಗೆ ನಗುತ್ತಾ.. ನಗಿಸುತ್ತಾ ಹೊರಟುಬಿಟ್ಟರು.
ಕಳೆದ ಎರಡು ವರ್ಷಗಳಿಂದ ಅವರು ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಪರ್ಣ ಗುರುವಾರ ರಾತ್ರಿ ಇಹಲೋಕ ಯಾತ್ರೆ ಮುಗಿಸಿದ್ದಾರೆ.
“ಅಪರ್ಣಾ ಇಹಲೋಕದ ವ್ಯಾಪಾರ ಮುಗಿಸಿ, ಸ್ವರ್ಗಸ್ಥಳಾಗಿದ್ದಾಳೆ. ಕಳೆದ ಎರಡು ವರ್ಷಗಳಿಂದ ನಾನು ಮತ್ತು ಅವಳು, ಅವಳ ನಾಲ್ಕನೇ ಹಂತದ್ದಲ್ಲಿದ್ದ ಶ್ವಾಸಕೋಶದ ಕ್ಯಾನ್ಸರ್ ಜೊತೆಗೆ ಸೆಣೆಸುತ್ತಿದ್ದೆವು. ಈ ಹೋರಾಟದಲ್ಲಿ ನಾವಿಬ್ಬರು ಸೋತಿದ್ದೇವೆ. ಅತ್ಯಂತ ವಿಷಾದದಿಂದ ಈ ಮಾತನ್ನು ನಿಮ್ಮಗಳ ಎದುರು ಇಡುತ್ತಿದ್ದೇನೆ. ಬರುವ ಅಕ್ಟೋಬರ್‌ಗೆ ಅಪರ್ಣಾಗೆ 58 ವರ್ಷ ತುಂಬುತ್ತಿತ್ತು” ಎಂದು ಭಾವುಕರಾಗಿ ವಿಷಯ ಹಂಚಿಕೊಂಡಿದ್ದಾರೆ ಅಪರ್ಣ ಅವರ ಪತಿ ನಾಗರಾಜ್ ವಸ್ತಾರೆ.
ಚಿಕ್ಕಮಗಳೂರಿನ ಪಂಚನಹಳ್ಳಿ ಗ್ರಾಮದ ಅಪರ್ಣ ಅವರ ತಂದೆ ಪತ್ರಕರ್ತರು. ಕನ್ನಡಪ್ರಭದ ಪುರವಣಿ ಸಂಪಾದಕರಾಗಿದ್ದವರು. ನಟಿಯಾಗಿ ಬಂದರೂ ಅಪರ್ಣ ಹೆಚ್ಚು ಗುರುತಿಸಿಕೊಂಡಿದ್ದು ಟಿವಿಯಲ್ಲಿ ನ್ಯೂಸ್ ಆಂಕರ್ ಆಗಿ ಹಾಗೂ ಕನ್ನಡ ವೇದಿಕೆಗಳಲ್ಲಿ ನಿರೂಪಕಿಯಾಗಿ. . ಕನ್ನಡ ಮನಸ್ಸುಗಳನ್ನು ತಮ್ಮ ಮಾತುಗಳಿಂದಲೇ ಆಕರ್ಷಿಸಿದ್ದ ಅಪರ್ಣ ನಿರೂಪಣೆಗೆ ಹೊಸ ಮೆರುಗು ತಂದುಕೊಟ್ಟಿದ್ದರು. ಶಂಕರ್ ಪ್ರಕಾಶ್- ಅಪರ್ಣಾ ನಿರೂಪಕ ಜೋಡಿ ಎಲ್ಲರಿಗೂ ಇಷ್ಟವಾಗುತ್ತಿತ್ತು
ನಟಿ ಅಪರ್ಣ ಚಿತ್ರರಂಗಕ್ಕೆ ಬಂದಿದ್ದು ಪುಟ್ಟಣ್ಣ ಕಣಗಾಲ್ ಅವರ ಮಸಣದ ಹೂವು ಚಿತ್ರದಿಂದ. ಸಂಗ್ರಾಮ, ನಮ್ಮೂರ ರಾಜ, ಸಾಹಸ ವೀರ, ಇನ್ಸ್‌ಪೆಕ್ಟರ್ ವಿಕ್ರಂ, ಡಾಕ್ಟರ್ ಕೃಷ್ಣ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದ ಅಪರ್ಣ ಇತ್ತೀಚೆಗೆ ತೆರೆ ಕಂಡಿದ್ದ ಗ್ರೇಗೇಮ್ಸ್ ಚಿತ್ರದಲ್ಲಿ ಕೊನೆಯದಾಗಿ ಬಣ್ಣ ಹಚ್ಚಿದ್ದರು.
ಟಿವಿಗಳಲ್ಲಿ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಲ್ಲಿ ಸಂಚಲನ ಮೂಡಿಸಿದ್ದರು. ಮೂಡಲಮನೆ, ಮುಕ್ತ, ಮುಕ್ತಮುಕ್ತ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ಅಪರ್ಣ ಬಿಗ್ ಬಾಸ್ ಶೋನಲ್ಲಿಯೂ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಅಪರ್ಣ ಅವರಿಗೆ ಹೆಸರು ತಂದುಕೊಟ್ಟಿದ್ದುದು ಮಜಾ ಟಾಕೀಸ್ ರಿಯಾಲಿಟಿ ಶೋನ ವರಲಕ್ಷ್ಮಿಯ ಪಾತ್ರ.



