ಶಿವಣ್ಣ ಅಭಿನಯದ ಭೈರತಿ ರಣಗಲ್ ರಿಲೀಸ್ ಆಗಿದೆ. ಮೈಲಿಗಲ್ಲು ಫಿಕ್ಸ್ ಆಗಿದೆ. ಅಭಿಮಾನಿಗಳ ಆರ್ಭಟ, ಸಂಭ್ರಮ ನೋಡೋಕೆ ಎರಡು ಕಣ್ಣು ಸಾಲದು ಎನ್ನುವಂತಿದೆ. ಸ್ಟಾರ್ ಸಿನಿಮಾ ರಿಲೀಸ್ ವೇಳೆ ರಾಜ್ಯಾದ್ಯಂತ ಸಾವಿರಾರು ಅಭಿಮಾನಿಗಳು ಕಟೌಟ್ ಹಾಕಿ, ಸ್ಟಾರ್ ಅಂಟಿಸಿ, ಬಣ್ಣ ಬಣ್ಣದ ಪೇಪರುಗಳಿಂದ ಥಿಯೇಟರ್ ಶೃಂಗಾರ ಮಾಡಿ, ಮೆರವಣಿಗೆ ಮಾಡಿ, ಹಾಡಿ ಕುಣಿಯುವುದು ಸಂಪ್ರದಾಯ. ಅದು ಅಭಿಮಾನಿಗಳು ಕೇವಲ ಅಭಿಮಾನದಿಂದ ಮಾಡುವ ಹಬ್ಬ. ಭೈರತಿ ರಣಗಲ್ ಚಿತ್ರಕ್ಕೂ ಆ ರೀತಿ ನಡೆದಿದೆ.
ಸಿನಿಮಾ ನೋಡೋಕೆ ಹಲವು ಸ್ಟಾರ್ ನಟರು ಬಂದು ಹೋಗಿದ್ದಾರೆ. ವಿನಯ್ ರಾಜಕುಮಾರ್, ಯುವ ರಾಜ್ ಕುಮಾರ್, ಶಿವಣ್ಣನ ಮಕ್ಕಳು ಕೂಡಾ ಬಂದು ಹೋಗಿದ್ದಾರೆ. ವಿಶೇಷ ಅಂದ್ರೆ ಭೈರತಿ ರಣಗಲ್ ಚಿತ್ರದ ಬಿಡುಗಡೆಯಲ್ಲಿ ಡಾಲಿ ಧನಂಜಯ ಪ್ರೇಕ್ಷಕರ ಜೊತೆ ಹಾಡಿ ಕುಣಿದಿರೋದು. ಹೈಲೈಟ್ ಆಗಿರುವುದೇ ಡಾಲಿ ಧನಂಜಯ ಡ್ಯಾನ್ಸ್. ಆಗಿದ್ದು ಏನೆಂದರೆ ನರ್ತಕಿ ಥಿಯೇಟರಿನಲ್ಲಿ ನೂರಾರು ಅಭಿಮಾನಿಗಳ ಮಧ್ಯೆ ಭೈರತಿ ರಣಗಲ್ ಗೆಟಪ್ ಹಾಕ್ಕೊಂಡು ಬಂದ ಡಾಲಿ ಧನಂಜಯ, ಅಭಿಮಾನಿಗಳ ಜೊತೆ ಹಾಡಿ ಕುಣಿದು ಕುಪ್ಪಳಿಸಿದ್ದಾರೆ. ಭೈರತಿ ರಣಗಲ್ ಚಿತ್ರಕ್ಕೆ ಭರ್ಜರಿ ಓಪನಿಂಗ್ ಕೂಡಾ ಸಿಕ್ಕಿದೆ. ಚಿತ್ರಕ್ಕೆ ಪಾಸಿಟಿವ್ ರೆಸ್ಪಾನ್ಸ್ ದೊರೆಯುತ್ತಿದೆ.
ಶಿವಣ್ಣ ಚಿತ್ರರಂಗದ ಹಿರಿಯ ನಟ. 130+ ಚಿತ್ರಗಳಲ್ಲಿ ನಟಿಸಿರುವ ಕಲಾವಿದ. ಇನ್ನು ಡಾಲಿ, ಶಿವಣ್ಣ ಅವರನ್ನು ನೋಡುವ ರೀತಿಯೇ ಬೇರೆ. ಭೈರತಿ ರಣಗಲ್ ಈವೆಂಟಿನಲ್ಲಿ ಕೂಡಾ ಶಿವಣ್ಣ ಮೇಲೆ ಇಟ್ಟಿದ್ದ ಪ್ರೀತಿಯನ್ನು ಮತ್ತೊಮ್ಮೆ ಬಹಿರಂಗಪಡಿಸಿದ್ದರು ಡಾಲಿ. ಶಿವಣ್ಣ ಅಭಿನಯದ ಚಿತ್ರವನ್ನು ಅಪ್ಪಟ ಅಭಿಮಾನಿಯಂತೆ ಸೆಲಬ್ರೇಟ್ ಮಾಡುವ ರೀತಿ ಕನ್ನಡ ಚಿತ್ರರಂಗಕ್ಕೆ ಖಂಡಿತಾ ಬೇಕು.
ಎಲ್ಲರಿಗೂ ಥ್ರಿಲ್ ಆಗಿರುವುದಂತೂ ನಿಜ. ಆದರೆ ಸಿನಿಮಾ ನೋಡುವುದಕ್ಕೆ ವಿನಯ್ ಹಾಗೂ ಯುವ ಬಂದಿದ್ದರಾದರೂ, ಹೈಲೈಟ್ ಆಗಿದ್ದು ಮಾತ್ರ ಡಾಲಿ. ವಿನಯ್ ಹಾಗೂ ಯುವ ಇಬ್ಬರೂ ಶಿವಣ್ಣ ಅವರಿಗೆ ಮಕ್ಕಳೇ ಆಗಬೇಕು. ದೊಡ್ಡಪ್ಪನ ಚಿತ್ರವನ್ನ ಮಕ್ಕಳು ನೋಡೋದು, ಹೊಗಳೋದು ಕಾಮನ್ ಆಗಿರುತ್ತೆ. ಸ್ವತಃ ಒಬ್ಬ ಸ್ಟಾರ್ ನಟನಾಗಿ, ನಿರ್ಮಾಪಕನೂ ಆಗಿರುವ ಡಾಲಿ ಧನಂಜಯ ಹಾಡಿ ಕುಣಿದಿರೋದು ಸಹಜವಾಗಿಯೇ ಜಾಸ್ತಿ ಮೈಲೇಜ್ ಪಡೆದುಕೊಂಡಿದೆ.
ಮಫ್ತಿಯ ಪ್ರೀಕ್ವೆಲ್ ಕಥೆಯನ್ನು ಶಿವಣ್ಣನ ಅಭಿಮಾನಿಗಳು ಸಖತ್ ಎಂಜಾಯ್ ಮಾಡ್ತಿದ್ದಾರೆ. ‘ಮಫ್ತಿ’ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಗಣ (ಶ್ರೀಮುರಳಿ), ಭೈರತಿ ರಣಗಲ್ (ಶಿವರಾಜ್ ಕುಮಾರ್) ಸಾಮ್ರಾಜ್ಯಕ್ಕೆ ಲಗ್ಗೆಯಿಟ್ಟು, ಆತನನ್ನು ಸಾಕ್ಷಿಸಮೇತ ಅರೆಸ್ಟ್ ಮಾಡಿರುತ್ತಾನೆ. ಅಲ್ಲಿಗೆ ಸಿನಿಮಾ ಮುಕ್ತಾಯವಾಗಿರುತ್ತದೆ. ಈಗ ಭೈರತಿ ರಣಗಲ್ ಹಿನ್ನೆಲೆ ಹೇಳಿದ್ದಾರೆ. ಸಾವಿರಾರು ಜನರ ಪಾಲಿಗೆ ದೇವರಾಗಿರುವ ಭೈರತಿ ರಣಗಲ್ ಈ ಮೊದಲು ಏನಾಗಿದ್ದ? ಆತನ ಬಾಲ್ಯ ಹೇಗಿತ್ತು? ಡಾನ್ ರೀತಿ ಆತ ಬೆಳೆದು ನಿಂತಿದ್ದು ಹೇಗೆ? ಅವನ ಪರ್ಸನಲ್ ಲೈಫ್ ಯಾವ ರೀತಿ ಇತ್ತು ಎಂಬ ಕಥೆಯನ್ನು ತಣ್ಣಗೆ ಹೇಳಿದ್ದಾರೆ ನರ್ತನ್. ಇಲ್ಲಿಯೂ ಒಂದು ವಿಶೇಷ ಅಂದ್ರೆ ಇಲ್ಲಿಯೂ ಅಬ್ಬರವಿಲ್ಲ. ಆರ್ಭಟವಿಲ್ಲ. ಶಿವಣ್ಣ ಕಣ್ಣಲ್ಲೇ ನಟಿಸಿದ್ದಾರೆ. ಮೊದಲ ದಿನವೇ ಭರ್ಜರಿ ಕಲೆಕ್ಷನ್ ಆಗಿದ್ದು, ಸುಮಾರು ೫೦ ಸಾವಿರ ಟಿಕೆಟ್ಸ್ ಸೇಲ್ ಆಗಿವೆ.



