ಸದ್ಗುರು ಎಂದೇ ಖ್ಯಾತಿ ಪಡೆದಿರುವ ಜಗ್ಗಿ ವಾಸುದೇವ್ ವಿರುದ್ಧ ದೊಡ್ಡ ಆರೋಪವೇ ಕೇಳಿ ಬಂದಿದೆ. ಸದ್ಗುರು ಜಗ್ಗಿ ವಾಸುದೇವ್ ತಮ್ಮ ಆಶ್ರಮಕ್ಕೆ ಬಂದ ಹೆಣ್ಣು ಮಕ್ಕಳನ್ನು ತಲೆ ಕೆಡಿಸಿ, ಬಲವಂತವಾಗಿ ಸನ್ಯಾಸಿನಿ ಮಾಡ್ತಿದ್ದಾರೆ ಎನ್ನುವುದು ಆರೋಪ. ಸನ್ಯಾಸಿನಿಯರಂತೆ ಬದುಕಲು ಯುವತಿಯರನ್ನು ಪ್ರಚೋದಿಸುತ್ತಿದ್ದಾರೆ. ಬ್ರೈನ್ ವಾಶ್ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ತನಿಖೆ ಶುರುವಾಗಿದೆ. ಆಶ್ರಮಕ್ಕೆ 150ಕ್ಕೂ ಹೆಚ್ಚು ಪೊಲೀಸರು ನುಗ್ಗಿ ತಪಾಸಣೆ ಮತ್ತು ವಿಚಾರಣೆ ಮಾಡುತ್ತಿದ್ದಾರೆ.
ಆರೋಪ ಮಾಡಿದ್ದು ಯಾರು..?
ನಿವೃತ್ತ ಪ್ರೊಫೆಸರ್ ಡಾ ಎಸ್ ಕಾಮರಾಜ್ ಇಬ್ಬರು ಹೆಣ್ಣುಮಕ್ಕಳಾದ ಗೀತಾ (42) ಮತ್ತು ಲತಾ (39) ಅವರನ್ನು ಈಶಾ ಫೌಂಡೇಷನ್‌ನಲ್ಲಿ ಬಂಧಿಸಿಡಲಾಗಿದೆ ಎಂದು ಅವರು ಆರೋಪಿಸಿದ್ದರು. ತಮ್ಮ ಸಹಜ ಜೀವನವನ್ನು ತ್ಯಜಿಸುವಂತೆ ಬ್ರೈನ್‌ವಾಶ ಮಾಡಿದ್ದಾರೆ ಎಂದು ದೂರಿದ್ದರು. ನ್ಯಾಸಿಗಳಂತೆ ಜೀವನಶೈಲಿ ಅಳವಡಿಸಿಕೊಳ್ಳಲು ಮತ್ತು ಕುಟುಂಬದಿಂದ ಸಂಪರ್ಕ ಕಡಿದುಕೊಳ್ಳಲು ಅವರ ಮೇಲೆ ಬಲವಂತ ಮಾಡಲಾಗಿದೆ ಎಂಬ ಗಂಭೀರ ಆರೋಪ ಮಾಡಿದ್ದರು. ಮದ್ರಾಸ್ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ಇವರಲ್ಲಿ 42 ವರ್ಷದ ಗೀತಾ ಬ್ರಿಟನ್‌ನ ಪ್ರತಿಷ್ಠಿತ ವಿವಿಯೊಂದರಲ್ಲಿ ಮೆಕಟ್ರಾನಿಕ್ಸ್‌ನಲ್ಲಿ ಪದವಿ ಪಡೆದಿದ್ದಾರೆ. 2008ರಲ್ಲಿ ವಿಚ್ಛೇದನ ಪಡೆದಿದ್ದಾರೆ. ಒಳ್ಳೆ ಸಂಬಳದ ಉದ್ಯೋಗದಲ್ಲಿರುವ ಈಕೆ, ಈಶಾ ಫೌಂಡೇಷನ್ ತರಗತಿಗೆ ಬರುತ್ತಿದ್ದರು. ಅದಾದ ಮೇಲೆ ಗೀತಾ ತನ್ನ ತಂಗಿ 39 ವರ್ಷದ ಲತಾ ಅವರನ್ನೂ ಈಶಾ ಫೌಂಡೇಷನ್‌ಗೆ ಸೇರಿಸಿದರು. ಈಶಾ ಪ್ರತಿಷ್ಠಾನವು, ತಮ್ಮ ಹೆಣ್ಣುಮಕ್ಕಳ ಆಲೋಚನಾ ಶಕ್ತಿಯನ್ನು ದುರ್ಬಲಗೊಳಿಸುವಂತಹ ಆಹಾರ ಮತ್ತು ಔಷಧಗಳನ್ನು ನೀಡಿ, ಕುಟುಂಬದಿಂದ ದೂರ ಮಾಡಿದೆ ಎಂದು ತಂದೆ ಕಾಮರಾಜ್ ಆರೋಪಿಸಿದ್ದಾರೆ. ಇತ್ತೀಚೆಗೆ ಈಶಾ ಫೌಂಡೇಷನ್‌ನ ಒಬ್ಬ ಡಾಕ್ಟರ್ 12 ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊತ್ತಿದ್ದಾರೆ. ಇದನ್ನೂ ಕೂಡಾ ತಮ್ಮ ಹೇಬಿಯಸ್ ಕಾರ್ಪಸ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಕೋರ್ಟ್‌ನಲ್ಲಿ ಏನಾಯ್ತು..?
ತಂದೆಯ ಆರೋಪದಲ್ಲಿ ಹುರುಳಿಲ್ಲ. ತಾವು ಸ್ವಇಚ್ಚೆಯಿಂದ ಆಶ್ರಮ ಸೇರಿದ್ದೇವೆ ಎಂದು ಇಬ್ಬರೂ ಮಹಿಳೆಯರು ವಾದಿಸಿದ್ದಾರೆ. ಆ ಮಹಿಳೆಯರ ವಾದವನ್ನು ಒಪ್ಪಿರುವ ನ್ಯಾಯಾಲಯ, ಹೆಣ್ಣು ಮಕ್ಕಳು ಇಬ್ಬರೂ ವಯಸ್ಕರು. ಅವರಿಗೆ ಆಯ್ಕೆಯ ಸ್ವಾತಂತ್ರ್ಯ ಇದೆ. ಆದರೂ ಪದೇ ಪದೇ ಆರೋಪಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಇದು ಸಂದೇಹಾಸ್ಪದ ಎಂದು ಅಭಿಪ್ರಾಯಪಟ್ಟಿದೆ. ಸದ್ಗುರು ಜಗ್ಗಿ ವಾಸುದೇವ್ ಅವರ ಜೀವನಶೈಲಿಯು ಅವರ ಉಪದೇಶಗಳಿಗೆ ವಿರುದ್ಧವಾಗಿದೆ. ಜಗ್ಗಿ ವಾಸುದೇವ್ ತಮ್ಮ ಮಗಳಿಗೆ ಮದುವೆ ಮಾಡಿಸಿದ್ದಾರೆ. ಸಾಂಸಾರಿಕ ಜೀವನ ಕಟ್ಟಿಕೊಳ್ಳಲು ಅವಕಾಶ ನೀಡಿದ್ದಾರೆ. ಆದರೆ ಸನ್ಯಾಸತ್ವದ ಜೀವನ ಒಪ್ಪಿಕೊಳ್ಳಲು ಯುವತಿಯರಿಗೆ ಉತ್ತೇಜನ ನೀಡುತ್ತಿದ್ದಾರೆ ಎಂದು ಹೇಳಿ ತಪಾಸಣೆ ಆದೇಶ ನೀಡಿದೆ. ಈಶಾ ಫೌಂಡೇಷನ್ ವಿರುದ್ಧ ದಾಖಲಾದ ಎಲ್ಲ ಪ್ರಕರಣಗಳ ವಿವರಗಳನ್ನು ಸಂಗ್ರಹಿಸಿ ತನ್ನ ಮುಂದೆ ಹಾಜರುಪಡಿಸುವಂತೆ ಕೊಯಮತ್ತೂರು ಪೊಲೀಸರಿಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ ನೀಡಿದೆ.
ಮದ್ರಾಸ್ ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ತೊಂಡಮತ್ತೂರ್‌ನಲ್ಲಿರುವ ಪ್ರತಿಷ್ಠಾನದ ಆಶ್ರಮದ ಮೇಲೆ ಮಂಗಳವಾರ ಸುಮಾರು 150 ಪೊಲೀಸ್ ಸಿಬ್ಬಂದಿ ದಾಳಿ ನಡೆಸಿದ್ದಾರೆ.ಸಹಾಯ ಉಪ ಪೊಲೀಸ್ ವರಿಷ್ಠಾಧಿಕಾರಿ ದರ್ಜೆಯ ಅಧಿಕಾರಿ ಮತ್ತು ಮೂವರು ಡಿಎಸ್‌ಪಿಗಳ ನೇತೃತ್ವದಲ್ಲಿ ಈ ಶೋಧ ಕಾರ್ಯ ನಡೆದಿದೆ.



