ನೀವು ಕೊಯಿ ಮಿಲ್ ಗಯಾ ಸಿನಿಮಾ ನೋಡಿದ್ದರೆ, ಅಲ್ಲೊಂದು ಸ್ಪೆಷಲ್ ಕಂಪ್ಯೂಟರ್. ಅದರ ಒಂದು ಬಟನ್ ಒತ್ತಿದರೆ ಅದು ನೇರವಾಗಿ ಅನ್ಯಗ್ರಹ ಜೀವಿಗಳನ್ನು ಕಾಂಟ್ಯಾಕ್ಟ್ ಮಾಡುತ್ತದೆ. ಸಿಗ್ನಲ್ ಕೊಡುತ್ತದೆ. ಅಂತಹ ಒಂದು ಅನ್ಯಗ್ರಹ ಜೀವಿಗಳ ಸಿಗ್ನಲ್ ಪದೇ ಪದೇ ಬರುತ್ತಿದೆಯಂತೆ. ಅದೂ ಕರೆಕ್ಟ್ ಆಗಿ 44 ನಿಮಿಷಗಳಿಗೆ ಒಮ್ಮೆ.
ಆಸ್ಪ್ರೇಲಿಯನ್ ಸ್ಕ್ವಯರ್ ಕಿಲೋಮೀಟರ್ ಅರೇ ಪಾತ್‌ಫೈಂಡರ್ ಮತ್ತು ನಾಸಾದ ಶಕ್ತಿಶಾಲಿ ಮೂನ್ ಎಕ್ಸ್-ರೇ ವೀಕ್ಷಣಾಲಯವನ್ನು ಬಳಸಿಕೊಂಡು ಆಸ್ಪ್ರೇಲಿಯಾ ವಿಜ್ಞಾನಿಗಳು ಈ ನಿಗೂಢ ಬಾಹ್ಯಾಕಾಶ ವಸ್ತುವನ್ನು ಪತ್ತೆಹಚ್ಚಿದ್ದಾರೆ. ಇದು ಪ್ರತಿ 44 ನಿಮಿಷಕ್ಕೊಮ್ಮೆ ರೇಡಿಯೋ ಮತ್ತು ಎಕ್ಸ್ ರೇ ಸಂಕೇತಗಳನ್ನು ಕಳುಹಿಸುತ್ತಿದ್ದು, ವಿಜ್ಞಾನಿಗಳು ಗೊಂದಲಕ್ಕೆ ಒಳಗಾಗಿದ್ದಾರೆ. ಆಸ್ಪ್ರೇಲಿಯಾದ ಖಗೋಳಶಾಸ್ತ್ರಜ್ಞರು ಸೌರವ್ಯೂಹದಾಚೆಗೆ ಒ1832-0911 ಎಂಬ ನಿಗೂಢ ವಸ್ತುವನ್ನು ಪತ್ತೆಹಚ್ಚಿದ್ದು, ಅದೀಗ ಹಲವು ಪ್ರಶ್ನೆಗಳಿಗೆ ಜನ್ಮ ಕೊಟ್ಟಿದೆ.
ಇದು ವಿಶೇಷ ವಿಭಿನ್ನ ಏಕೆ..?
ಸಾವಿರಾರು ಕೋಟಿ ವರ್ಷಗಳ ಬಳಿಕ ಹಲವು ನಕ್ಷತ್ರಗಳು ಸಾಯುತ್ತವೆ. ಹಾಗೆ ಸಾಯುವ ನಕ್ಷತ್ರಗಳು ಅದ್ರಲ್ಲೂ ನ್ಯೂಟ್ರಾನ್ ಹಾಗೂ ಮ್ಯಾಗ್ನೆಟಾರ್‌ನಂತಹ ನಕ್ಷತ್ರಗಳ ಅವಶೇಷಗಳು ಸಿಗ್ನಲ್ ಕೊಡುತ್ತವೆ. ಆಗ ಹೊಮ್ಮುವ ರೇಡಿಯೋ ತರಂಗಗಳು ಅಥವಾ ಎಕ್ಸ್ ರೇ ಮಾದರಿಯಲ್ಲಿ ವಿಶಿಷ್ಟ ಸಂಕೇತಗಳನ್ನು ಹೊರಹೊಮ್ಮಿಸುತ್ತವೆ. ಆ ಸಂಕೇತಗಳು ಲಯಬದ್ಧವಾಗಿರುವುದಿಲ್ಲ. ಆದರೆ, ಈಗ ಪತ್ತೆಯಾಗಿರುವ ತರಂಗಗಳ ಅಲೆ ಲಯಬದ್ಧವಾಗಿ ಸಂಕೇತಗಳನ್ನು ಹೊರಹೊಮ್ಮಿಸುತ್ತಿವೆಯಂತೆ. ಈ ವಿಚಾರವೇ ಈಗ ವಿಜ್ಞಾನಿಗಳನ್ನು ಅಚ್ಚರಿಗೊಳಿಸಿದೆ.
ಹೊಸ ಸಂಶೋಧನೆ ಕೊನೆಯಿಲ್ಲದ ಬ್ರಹ್ಮಾಂಡದಲ್ಲಿರುವ ಹೊಸ ರೀತಿಯ ಆಕಾಶಕಾಯಗಳ ಮೊದಲ ಸೂಚನೆಯಾಗಿರಬಹುದು. ಇದು ಬಾಹ್ಯಾಕಾಶ ವಿಜ್ಞಾನದಲ್ಲಿಹೊಸ ಅಧ್ಯಾಯವನ್ನೇ ತೆರೆಯಬಹುದು. ಭೂಮಿಯ ರೀತಿಯಲ್ಲಿ ಬೇರೆ ಗ್ರಹಗಳೂ ಈ ಬ್ರಹ್ಮಾಂಡದಲ್ಲಿ ಇರಬಹುದು. ಅಲ್ಲಿಯೂ ಜೀವಿಗಳು ಇರಬಹುದು ಹಾಗೂ ಅವು ನಮಗಿಂತ, ಅಂದರೆ, ಮಾನವರಿಗಿಂತ ತಂತ್ರಜ್ಞಾನದಲ್ಲಿ ನೂರಾರು ಪಟ್ಟು ಮುಂದೆ ಇರಬಹುದು. ಅಥವಾ ಕಡಿಮೆಯೂ ಇರಬಹುದು.
ಆದರೆ ಸದ್ಯಕ್ಕೆ ಮತ್ತೆ ಅನ್ಯಗ್ರಹ ಜೀವಿಗಳ ಸುದ್ದಿ ಪ್ರತ್ಯಕ್ಷವಾಗಿದೆ. ಬ್ರಹ್ಮಾಂಡದಲ್ಲಿ ಜೀವ ಸೃಷ್ಟಿ ಆಗಿರೋದು ಕೇವಲ ಭೂಮಿಯಲ್ಲಿ ಮಾತ್ರವಾ, ಅಥವಾ ಇಂಥಾ ಅದ್ಭುತ ಗ್ರಹ ಬೇರೆಲ್ಲಾದರೂ ಇದೆಯಾ? ಈ ಪ್ರಶ್ನೆಗೆ ವೈಜ್ಞಾನಿಕ ಉತ್ತರವಿನ್ನೂ ಸಿಕ್ಕಿಲ್ಲ. ಆದರೆ ಆಗಾಗ್ಗೆ ಅನ್ಯಗ್ರಹ ಜೀವಿಗಳ ಸುದ್ದಿ, ಸದ್ದು ಮಾಡ್ತಾ ಇರುತ್ತೆ.
ಅನ್ಯಗ್ರಹ ಜೀವಿಗಳ ಅಸ್ತಿತ್ವದ ಅಂತೆ ಕಂತೆಗಳ ಕುರಿತು ವ್ಯಾಪಕ ಚರ್ಚೆಗಳು ಆಗಾಗ್ಗೆ ನಡೆಯುತ್ತಿವೆ. ಏಲಿಯನ್‌ಗಳ ಅಸ್ತಿತ್ವ ಮತ್ತು ಅವುಗಳ ಬಗ್ಗೆ ಹರಡಿರುವ ದೃಷ್ಟಾಂತ ಕಥೆಗಳೆಲ್ಲವೂ ಪೊಳ್ಳು ಎಂಬ ವಾದಗಳ ಮಧ್ಯೆಯೇ, ಮೆಕ್ಸಿಕೋ ಸಂಸತ್‌ನಲ್ಲಿ ಸಾವಿರ ವರ್ಷಕ್ಕೂ ಹಳೆಯದಾದ ಅನ್ಯಗ್ರಹ ಜೀವಿಯ ಅಂದರೆ ಏಲಿಯನ್ಸ್ ಕಳೇಬರ ಎಂದು ಹೇಳಿ ಕೆಲವು ಆಕೃತಿಗಳ ಪ್ರದರ್ಶನ ಮಾಡಲಾಗಿದೆ. ಆದರೆ ತನಿಖೆ, ಪರಿಶೀಲನೆ, ಸಂಶೋಧನೆ ಇನ್ನೂ ಪ್ರಗತಿಯ ಹಂತದಲ್ಲೇ ಇದೆ. ಅನ್ಯಗ್ರಹ ಜೀವಿ ಇದೆಯೋ.. ಇಲ್ಲವೋ.. ಎಂಬುದೇ ಖಚಿತವಾಗಿಲ್ಲ. ಹೀಗಾಗಿ ಈ ಸುದ್ದಿಯೂ ಖಚಿತವಾಗಿಲ್ಲ.



