ಒಬ್ಬ ಸ್ಟಾರ್ ನಟನ ಚಿತ್ರದ ಸೋಲು.. ಆತನೂ ಸೇರಿದಂತೆ ಇನ್ನೂ ಹಲವು ಸ್ಟಾರ್ ನಟರಿಗೆ ಭಯ ತಂದಿದೆ. ಸೆಲ್ಫಿ ಎಂಬ ಚಿತ್ರದ ಕಳಪೆ ಓಪನಿಂಗ್ ಬಾಲಿವುಡ್ನ್ನು ಮತ್ತೊಮ್ಮೆ ಬೆಚ್ಚಿಬೀಳಿಸಿದೆ. ಈ ಸೋಲು ಸ್ವತಃ ಅಕ್ಷಯ್ ಕುಮಾರ್, ಸಲ್ಮಾನ್ ಖಾನ್, ಅಜಯ್ ದೇವಗನ್ ಅವರ ಮುಂದಿನ ಚಿತ್ರಗಳಿಗೂ ಭಯ ಹುಟ್ಟಿಸಿದೆ ಎನ್ನುವುದೇ ವಿಶೇಷ.
ಒಂದು ಕಾಲವಿತ್ತು. ಬೇರೆ ಭಾಷೆಯಲ್ಲಿ ಹಿಟ್ ಆದ ಚಿತ್ರಗಳನ್ನು ಯಥಾವತ್ ಆಗಿ ಭಟ್ಟಿ ಇಳಿಸುತ್ತಿದ್ದ ಕಾಲ. ವಿ.ರವಿಚಂದ್ರನ್ ಮಾತ್ರ, ವೊರಿಜಿನಲ್ ಚಿತ್ರವೂ ಡಲ್ಲು ಹೊಡೆಯುವಂತೆ ರೀಮೇಕ್ ಮಾಡುತ್ತಿದ್ದರು. ಗೆಲ್ಲುತ್ತಲೂ ಇದ್ದರು. ಸಲ್ಮಾನ್, ಅಕ್ಷಯ್ ಕುಮಾರ್ ಮೊದಲಾದವರಿಗೆ ಹಿಂದಿಯಲ್ಲಿ ಲೈಫು ಕೊಟ್ಟಿದ್ದು ರೀಮೇಕ್ ಚಿತ್ರಗಳೇ. ಆದರೆ ಕಾಲ ಬದಲಾಗುತ್ತಿದೆ. ರೀಮೇಕ್ ಚಿತ್ರಗಳು ಲಗಾಟಿ ಹೊಡೆಯುತ್ತಿವೆ.
ಮಲಯಾಳಂನಲ್ಲಿ ಹಿಟ್ ಆದ ಒಟಿಟಿಯಲ್ಲೂ ಜನಮನ್ನಣೆ ಗಳಿಸಿದ್ದ ಡ್ರೈವಿಂಗ್ ಲೈಸೆನ್ಸ್ ಚಿತ್ರದ ಹಿಂದಿ ವರ್ಷನ್ ಮಕಾಡೆ ಮಲಗಿದೆ. ಅಕ್ಷಯ್ ವೃತ್ತಿ ಜೀವನದಲ್ಲೇ ಹೀನಾಯ ಓಪನಿಂಗ್ ಪಡೆದುಕೊಂಡಿದೆ. ಅಕ್ಷಯ್ ಕುಮಾರ್, ಇಮ್ರಾನ್ ಹಶ್ಮಿಯಂತಾ ನಟರಿದ್ದರೂ ಬಾಕ್ಸಾಫೀಸಿನಲ್ಲಿ ಪಲ್ಟಿ ಹೊಡೆದಿದೆ.
ಇದು ಮೊದಲೇನಲ್ಲ, ಈ ಹಿಂದೆ ಅಜಯ್ ದೇವಗನ್ ಅಭಿನಯದ ದೃಶ್ಯಂ 2 ಚಿತ್ರವೂ ಹೀಗೆಯೇ ಆಗಿತ್ತು. ಬಜೆಟ್ ಕಡಿಮೆಯಿದ್ದ ಕಾರಣಕ್ಕೆ ಸಕ್ಸಸ್ ಲಿಸ್ಟ್ ಸೇರಿತಾದರೂ ಅಜಯ್ ದೇವಗನ್ ವೃತ್ತಿ ಜೀವನದಲ್ಲಿ ಅದೊಂದು ಫ್ಲಾಪ್ ಚಿತ್ರವೇ. ಕನ್ನಡದಲ್ಲಿ ಕೂಡಾ ದೃಶ್ಯ ಗಳಿಸಿದ್ದ ಯಶಸ್ಸು, ದೃಶ್ಯ 2 ಗೆ ಸಿಗಲಿಲ್ಲ. ತೆಲುಗಿನಲ್ಲಿ ಚಿರಂಜೀವಿ ಕೂಡಾ ಲೂಸಿಫರ್ ಚಿತ್ರದ ರೀಮೇಕ್ನಲ್ಲಿ ದೊಡ್ಡ ಯಶಸ್ಸು ಕಾಣಲಿಲ್ಲ. ಅಷ್ಟೇ ಏಕೆ, ಪುನೀತ್ ರಾಜಕುಮಾರ್ ತೆರೆಯ ಮೇಲೆ ನಟರಾಗಿ ಕಾಣಿಸಿದ ಕೊನೆಯ ಸಿನಿಮಾ ಲಕ್ಕಿಮ್ಯಾನ್ ಚಿತ್ರ ಕೂಡಾ ಪುನೀತ್ ಅಲೆಯಲ್ಲಿ ಸಕ್ಸಸ್ ದಡ ಸೇರಿತಾದರೂ ದೊಡ್ಡ ಯಶಸ್ಸು ಸಿಗಲಿಲ್ಲ. ತೆಲುಗಿನಲ್ಲಿ ಭರ್ಜರಿ ಸಕ್ಸಸ್ ಕಂಡಿದ್ದ ಅಲಾ ವೈಕುಂಠಪುರಂಲೋ ಚಿತ್ರದ ರೀಮೇಕ್ ಶೆಹಜಾದೆ ಕೂಡಾ ಫ್ಲಾಪ್ ಲಿಸ್ಟಿಗೆ ಸೇರಿದೆ.
ಒಂದು ಕಾಲದಲ್ಲಿ ರೀಮೇಕ್ ಮಾಡುವುದಕ್ಕೆ ನಾಮುಂದು.. ತಾಮುಂದು.. ಎಂದು ಬರುತ್ತಿದ್ದ ನಿರ್ಮಾಪಕ-ನಿರ್ದೇಶಕರಿಗೆ ಕೂಡಾ ಈಗ ಟೆನ್ಷನ್ ಶುರುವಾಗಿದೆ. ಎಲ್ಲವೂ ಒಟಿಟಿ ಮಹಿಮೆ. ಹಲವು ಚಿತ್ರಗಳ ದೃಶ್ಯಗಳನ್ನೆಲ್ಲ ಒಟ್ಟಾಗಿಸಿ ಯಾವುದೋ ಒಂದು ಕಥೆ ಹೆಣೆದು ಬೆರಕೆ ಸೊಪ್ಪಿನ ಸಾರಿನ ಚಿತ್ರಗಳಿಗೂ ಉಳಿಗಾಲವಿಲ್ಲ.
ಇನ್ನು ಮುಂದೆ ಟೆನ್ಷನ್ ಆಗಬೇಕಿರೋದು ಹಿಂದಿ ಸಿನಿಮಾ. ಪಠಾಣ್ ಗೆದ್ದಿದೆ. ಇದರ ನಡುವೆಯೇ ಸೆಲ್ಫಿ ಬಿದ್ದಿದೆ. ಷೆಹಜಾದೆ ಪಲ್ಟಿಯಾಗಿದೆ.
ಇಷ್ಟಕ್ಕೇ ಮುಗಿದಿಲ್ಲ. ತಮಿಳಿನ ಖೈಥಿ ಚಿತ್ರ ಹಿಂದಿಗೆ ರೀಮೇಕ್ ಆಗುತ್ತಿದೆ. ಭೋಲಾ ಎಂಬ ಹೆಸರಿನಲ್ಲಿ ಬರುತ್ತಿರುವ ಚಿತ್ರಕ್ಕೆ ಈಗಾಗಲೇ ಭಯ ಶುರುವಾಗಿದೆ. ಸಲ್ಮಾನ್ ಖಾನ್ ಕೂಡಾ ತಮಿಳಿನ ವೀರಂ ಚಿತ್ರದ ರೀಮೇಕ್ ಮಾಡುತ್ತಿದ್ದಾರೆ. ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರಕ್ಕೂ ಈಗ ಸೋಲಿನ ಭಯ. ಅಕ್ಷಯ್ ಕುಮಾರ್ ಕೂಡಾ ಸೂರರೈಪೋಟ್ರು ಚಿತ್ರದ ರೀಮೇಕ್ ಪ್ರೊಡಕ್ಷನ್ ಹಂತದಲ್ಲಿದೆ. ಆದರೆ..ಎಲ್ಲರಿಗೂ ಪುಕಪುಕ. ರೀಮೇಕ್ ಚಿತ್ರಗಳ ಜಮಾನ ಮುಗೀತಾ?



