ಡಿಕೆ ಶಿವಕುಮಾರ್ ಮತ್ತು ಅಮಿತ್ ಶಾ ಅವರ ಮಹಾಶಿವರಾತ್ರಿ ಫೋಟೋ ಎಲ್ಲ ಕಡೆ ಚರ್ಚೆಯಾಗುತ್ತಿದೆ. ಆದರೆ ವಿಶೇಷವೇನು ಗೊತ್ತೇ.. ಡಿಕೆ ಮತ್ತು ಅಮಿತ್ ಶಾ ಇಬ್ಬರೂ ಒಂದು ಕಾಲದಲ್ಲಿ ಹಾವು ಮುಂಗುಸಿಯಂತೆ ಇದ್ದವರು. ಅವರ ಹೆಸರು ಎತ್ತಿದರೆ ಡಿಕೆ ಮನೆಯಲ್ಲಿರುವ ಹುಲ್ಲಿನಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆ ಎನ್ನುವಂತಿತ್ತು. ಆದರೆ ಅವರಿಬ್ಬರೂ ಈಗ ಆತ್ಮೀಯರಾಗಿರುವುದು ಹೇಗೆ..? ಅದರ ಹಿಂದೊಂದು ಕಥೆ ಇದೆ.
ಒಂದು ವರದಿಯ ಪ್ರಕಾರ ಕೆಲವು ತಿಂಗಳ ಹಿಂದೆ ಅಮಿತ್ ಶಾ ಗಂಭೀರ ಆರೋಗ್ಯ ಸಮಸ್ಯೆಗೆ ಒಳಗಾಗಿದ್ದರು. ಆಗ ಅಮಿತ್ ಶಾ, ಹೊರಗೆ ಕಾಣಿಸಿಕೊಳ್ಳುವ ಸ್ಥಿತಿಯಲ್ಲೇ ಇರಲಿಲ್ಲ. ಇಂತಹ ಸಮಯದಲ್ಲೇ ಒಮ್ಮೆ ಅವರನ್ನು ನೋಡಲು ಕರ್ನಾಟಕ ಬಿಜೆಪಿಯ ಹಿರಿಯ ನಾಯಕ ವಿ.ಸೋಮಣ್ಣ ಹೋದರು. ಹೀಗೆ ಹೋದವರು ಅಮಿತ್ ಷಾ ಅವರ ಆರೋಗ್ಯ ವಿಚಾರಿಸಿ ʻʻಸಾರ್,ನೀವೊಂದು ಸಲ ನೊಣವಿನಕೆರೆ ಅಜ್ಜಯ್ಯನವರ ಗದ್ದುಗೆಯ ದರ್ಶನ ಮಾಡಿ. ಎಲ್ಲ ಒಳ್ಳೆಯದಾಗುತ್ತದೆʼʼ ಎನ್ನುತ್ತಾರೆ. ಆಗ ಸುಸ್ತಾಗಿದ್ದ ಅಮಿತ್ ಶಾ ಅವರು ʻʻದರ್ಶನ ಪಡೆಯೋದಕ್ಕೆ ನಾನೇನೇ ಸಿದ್ಧ. ಆದರೆ ಇಂತಹ ಸ್ಥಿತಿಯಲ್ಲಿ ಕರ್ನಾಟಕಕ್ಕೆ ಹೋಗುವುದು ಹೇಗೆ? ಆರೋಗ್ಯವೇ ಸರಿ ಇಲ್ಲವಲ್ಲʼʼ ಎಂದು ಕೇಳಿದ್ದರಂತೆ. ಇದಾದ ನಂತರ ಸೋಮಣ್ಣ ಅವರು ನೊಣವಿನಕೆರೆ ಅಜ್ಜಯ್ಯನವರ ಗದ್ದುಗೆಯನ್ನೇ ದೆಹಲಿಗೆ ತರಿಸುವ ವ್ಯವಸ್ಥೆ ಮಾಡಿದ್ದಾರೆ. ಅದಕ್ಕೆ ನೆರವಾಗಿರುವುದು ಡಿಕೆ.
ಹಾಗೆ ದೆಹಲಿಗೆ ಬಂದ ಅಜ್ಜಯ್ಯನವರ ಗದ್ದುಗೆಯನ್ನು ಎಲ್ಲಿ ಇಟ್ಟುಕೊಳ್ಳುವುದು ಎಂಬ ವಿಷಯ ಚರ್ಚೆಗೆ ಬಂದಾಗ ದೆಹಲಿಯಲ್ಲಿರುವ ಡಿ.ಕೆ.ಶಿವಕುಮಾರ್ ಅವರ ಫ್ಲ್ಯಾಟಿನಲ್ಲಿ ಇರಿಸುವುದಕ್ಕೆ ವ್ಯವಸ್ಥೆ ಮಾಡಲಾಯಿತಂತೆ. ಹೀಗೆ ಡಿಕೆಶಿ ಅವರ ಫ್ಲ್ಯಾಟಿನಲ್ಲಿದ್ದ ಅಜ್ಜಯ್ಯನವರ ಗದ್ದುಗೆಯನ್ನು ದರ್ಶಿಸಲು ಅಂತಹ ನಿತ್ರಾಣ ಸ್ಥಿತಿಯಲ್ಲಿಯೇ ಅಮಿತ್ ಶಾ ಹೋಗಿದ್ದರಂತೆ. ವಿಚಿತ್ರ ಎಂದರೆ ಡಿಕೆಶಿ ಫ್ಲ್ಯಾಟಿನಲ್ಲಿ ಇಡಲಾಗಿದ್ದ ಅಜ್ಜಯ್ಯನವರ ಗದ್ದುಗೆಯನ್ನು ನೋಡಿ ನಮಸ್ಕರಿಸಿ ಬಂದ ಮರುದಿನದಿಂದಲೇ ಅಮಿತ್ ಶಾ ಆರೋಗ್ಯದಲ್ಲಿ ಗಣನೀಯ ಸುಧಾರಣೆ ಶುರುವಾಯ್ತಂತೆ. ಒಂದೇ ವಾರಕ್ಕೆ ಸಂಪೂರ್ಣ ಹುಷಾರಾದಂತೆ. ಇದಾದ ಮೇಲೆ ಅಮಿತ್ ಶಾ ಮತ್ತು ಡಿಕೆ ಮಧ್ಯೆ ಆಪ್ತತೆ ಬೆಳೆಯಿತಂತೆ.
ಡಿಕೆ ಬಿಜೆಪಿಗೆ ಹೋಗ್ತಾರಾ..?
ಅಂತಹ ಯಾವುದೇ ಆಲೋಚನೆ ಅಮಿತ್ ಶಾ ಅವರಿಗೂ ಇಲ್ಲ. ಡಿಕೆಯನ್ನು ಬಿಜೆಪಿಗೆ ತರುವ ಪ್ರಯತ್ನ ಮಾಡಿದರೆ, ಕುಮಾರಸ್ವಾಮಿ ದೂರ ಸರಿಯುತ್ತಾರೆ. ಬಿಜೆಪಿಯಲ್ಲಿಯೂ ಬಹುತೇಕ ಜನ ಡಿಕೆ ವಿರುದ್ಧ ಪರ್ಸನಲ್ ಹೋರಾಟದಲ್ಲಿದ್ದಾರೆ. ಅವರೆಲ್ಲರೂ ದೂರವಾಗುತ್ತಾರೆ. ಹೀಗಿರುವಾಗ ಶಾ ಅಂತಹ ರಿಸ್ಕಿಗೆ ಕೈ ಹಾಕುವುದಿಲ್ಲ. ಇನ್ನು ಎದುರಾಳಿ ಪಕ್ಷದಲ್ಲಿದ್ದರೂ ಸ್ನೇಹಕ್ಕೇನು ಸಮಸ್ಯೆ ಇಲ್ಲ ಎನ್ನುತ್ತಿರುವ ಡಿಕೆ ಕೂಡಾ, ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ. ಇನ್ನೊಂದು ವಿಷಯ ಎಂದರೆ ಡಿಕೆ ಮತ್ತು ಶಾ ನಡುವಿನ ಆಪ್ತತೆಯ ಸಂಪೂರ್ಣ ಮಾಹಿತಿ ಸೋನಿಯಾ, ರಾಹುಲ್, ಪ್ರಿಯಾಂಕ ಅವರಿಗೂ ಗೊತ್ತಿದೆ ಎನ್ನುವುದು. ಹೀಗಾಗಿ.. ಡಿಕೆಯ ಒಂದು ಹೆಜ್ಜೆ, ನೂರು ಮಾತಿಗೆ ಸಮ ಎನ್ನುವಂತಾಗಿದೆ.



