ಶಿವ ರಾಜ್ ಕುಮಾರ್ ಸೀನಿಯರ್ ಸಿಟಿಜನ್ ಆಗಿಬಿಟ್ಟಿದ್ದಾರೆ. ಆದರೆ, ಅಭಿಮಾನಿಗಳಿಗೆ ಮಾತ್ರ.. ಶಿವಣ್ಣ ಎಂದೆಂದಿಗೂ ಸ್ವೀಟ್ ಸಿಕ್ಸ್ ಟೀನ್. 60 ದಾಟಿದ.. ಸೈಮಾದಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ಪಡೆದ ಶಿವಣ್ಣ, ಈಗ ಬಚ್ಚನ್ ಮೊಮ್ಮಗಳಿಗೆ ಆಶೀರ್ವಾದ ಮಾಡಿ ಸುದ್ದಿಯಾಗಿದ್ಧಾರೆ. ಅಮಿತಾಬ್ ಬಚ್ಚನ್ ಕುಟುಂಬದ ಮೊಮ್ಮಗಳು ಶಿವಣ್ಣನ ಆಶೀರ್ವಾದ ಪಡೆದುಕೊಂಡಿರುವುದು ಎಲ್ಲೆಡೆ ವೈರಲ್ ಆಗುತ್ತಿದೆ.
ಇದು ನಡೆದಿದ್ದು ದುಬೈನಲ್ಲಿ. ಸೈಮಾ ಅವಾರ್ಡ್ ಫಂಕ್ಷನ್ನಿನಲ್ಲಿ. ಕಾರ್ಯಕ್ರಮದಲ್ಲಿ ಶಿವಣ್ಣ ಜೀವಮಾನ ಸಾಧನೆ ಪ್ರಶಸ್ತಿ ಪಡೆದರೆ, ಅದೇ ಕಾರ್ಯಕ್ರಮದಲ್ಲಿ ‘ಪೊನ್ನಿಯಿನ್ ಸೆಲ್ವನ್’ ಚಿತ್ರಕ್ಕಾಗಿ ಐಶ್ವರ್ಯಾ ರೈ ಅವರು ಸೈಮಾ ಪ್ರಶಸ್ತಿ ಸ್ವೀಕರಿಸಿದರು. ಈ ಕಾರ್ಯಕ್ರಮದಲ್ಲಿ ದೊಡ್ಮನೆಯ ಮೇಲೆ ಭಾರತೀಯ ಚಿತ್ರರಂಗ ಯಾವ ರೀತಿಯ ಗೌರವ ಇಟ್ಟುಕೊಂಡಿದೆ ಎನ್ನುವುದು ಜಗತ್ತಿಗೇ ಗೊತ್ತಾಯಿತು.
ಶಿವಣ್ಣ ಅವರು ಇಡೀ ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲ ಕಲಾವಿದರ ಹಾರ್ಟ್ ಫೇವರಿಟ್ ಆಗಿದ್ದರು. ಶಿವಣ್ಣ ಪ್ರಶಸ್ತಿ ಸ್ವೀಕರಿಸಲು ಹೊರಟಾಗ, ದಕ್ಷಿಣ ಭಾರತ ಚಿತ್ರರಂಗದ ತಂತ್ರಜ್ಞರು ಹಾಗೂ ಕಲಾವಿದರೆಲ್ಲರೂ ಎದ್ದು ನಿಂತು ಅಭಿನಂದಿಸಿದ್ದರು.
ಕಾರ್ಯಕ್ರಮದಲ್ಲಿ ಐಶ್ವರ್ಯಾ ರೈ, ಪೊನ್ನಿಯನ್ ಸೆಲ್ವನ್ ಚಿತ್ರಕ್ಕಾಗಿ ಪ್ರಶಸ್ತಿ ಸ್ವೀಕರಿಸಿ ವೇದಿಕೆಯಿಂದ ಇಳಿದು ಬರುತ್ತಾರೆ. ನಟ ವಿಕ್ರಮ್ ಅವರು ಐಶ್ವರ್ಯಾಗೆ ಇಳಿದು ಬರಲು ಸಹಾಯ ಮಾಡುತ್ತಿರುತ್ತಾರೆ. ಈ ವೇಳೆ ಶಿವರಾಜ್‌ಕುಮಾರ್ ಹಾಗೂ ವಿಕ್ರಂ ಮಾತನಾಡುತ್ತಿರುತ್ತಾರೆ. ಟ್ರೋಫಿಯೊಂದಿಗೆ ಬಂದ ತಾಯಿಯನ್ನು ಮಗಳು ಆರಾಧ್ಯ ಅಪ್ಪಿಕೊಳ್ಳುತ್ತಾರೆ. ಕುಳಿತುಕೊಳ್ಳಲು ಹೋಗುತ್ತಿದ್ದ ಐಶ್ವರ್ಯಾ ರೈ ಅವರಿಗೆ ಶಿವಣ್ಣ ಕೂಡಾ ಅಲ್ಲಿಯೇ ಇರುವುದು ಗಮನಕೆಕ ಬರುತ್ತದೆ. ತಕ್ಷಣವೇ ವಾಪಸ್ ಬಂದು ಶಿವಣ್ಣ ಅವರನ್ನು ಮಾತನಾಡಿಸುತ್ತಾರೆ ಐಶ್ವರ್ಯಾ. ತಮ್ಮ ಮಗಳನ್ನೂ ಕೂಡಾ ಶಿವಣ್ಣ ಅವರಿಗೆ ಪರಿಚಯ ಮಾಡಿಸುತ್ತಾರೆ. ಈ ವೇಳೆ ಆರಾಧ್ಯ ತಕ್ಷಣ ಶಿವಣ್ಣ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಳ್ತಾರೆ.
ಬಚ್ಚನ್ ಅವರಿಗೆ ಡಾ.ರಾಜ್ ಕುಟುಂಬದವರು ಇದೇ ರೀತಿಯ ಗೌರವ ಕೊಡುತ್ತಾರೆ. ಬಚ್ಚನ್ ಕುಟುಂಬಕ್ಕೆ ಬಾಲಿವುಡ್ʻನಲ್ಲಿ ದೊಡ್ಮನೆ ಸ್ಥಾನ ಇದೆ. ಅಷ್ಟೇ ಅಲ್ಲ, ಆರಾಧ್ಯ ಅವರಿಗೆ ಈ ರೀತಿಯ ಹಿರಿಯರನ್ನು ಗೌರವಿಸಿರುವ ಸಂಸ್ಕೃತಿ ಕಲಿಸಿರುವ ಐಶ್ವರ್ಯಾ ರೈ ಅವರನ್ನೂ ಕೂಡಾ ಎಲ್ಲೆಡೆ ಹೊಗಳುತ್ತಿದ್ದಾರೆ.
ಚಿತ್ರರಂಗದಲ್ಲಿ ಸಾಮಾನ್ಯವಾಗಿ ಅನೇಕರು ತಮ್ಮ ಮಕ್ಕಳನ್ನು ಬೇರೆ ಯಾವುದೋ ಲೋಕದಲ್ಲಿ ಜನ್ಮ ಪಡೆದು ಬಂದವರಂತೆ ಬೆಳೆಸುವ ಸಂಪ್ರದಾಯ ಇದೆ. ಹೈ ಫೈ ಜೀವನ, ಮೋಜು ಮಸ್ತಿಯಲ್ಲಿಯೇ ಸ್ಟಾರ್ ಮಕ್ಕಳು ಕಳೆದು ಹೋಗುತ್ತಾರೆ. ಮೊದಲಿಂದ ಪಾಪರಾಜಿಗಳ ಕ್ಯಾಮರಾದಿಂದ ತಮ್ಮ ಮಗಳ ರಕ್ಷಣೆಯನ್ನು ಮಾಡುತ್ತಾನೇ ಬಂದ ಐಶ್ವರ್ಯ ರೈ, ತಮ್ಮ ಮಗಳಿಗೆ ಸಂಸ್ಕಾರ-ಆಚಾರ-ವಿಚಾರ-ಸಂಪ್ರದಾಯಗಳನ್ನು ಹೇಳಿ ಕೊಟ್ಟಿದ್ದಾರೆ. ಬದುಕು ಮತ್ತು ಭ್ರಮೆಯ ನಡುವೆ ಇರುವ ವ್ಯತ್ಯಾಸಗಳನ್ನು ಕೂಡ ಹೇಳಿದ್ದಾರೆ. ಇದಕ್ಕೆ ಇನ್ನೊಂದು ಉದಾಹರಣೆ ಎಂಬಂತೆ ಐಶ್ವರ್ಯ ರೈ ಮಗಳು ಆರಾಧ್ಯ ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅವರ ಕಾಲಿಗೆ ನಮಸ್ಕರಿಸಿದ್ದಾರೆ. ಈ ಮೂಲಕ ಅನೇಕರ ಹೃದಯವನ್ನು ಗೆದ್ದಿದ್ದಾರೆ. ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಮಗಳ ಸಂಸ್ಕಾರ ಮತ್ತು ಶಿವಣ್ಣ ಅವರ ವಿನಯವಂತಿಕೆಯ ಕುರಿತು ಚರ್ಚೆಯಾಗುತ್ತಿದೆ. ಅಷ್ಟು ದೊಡ್ಡ ಸ್ಟಾರ್ ಆದರೂ ಮೈ ಮರಿಯದೇ ತಮ್ಮ ಮಗಳಿಗೆ ಸಂಸ್ಕಾರ-ವಿನಯವನ್ನು ಕಲಿಸಿ ಕೊಟ್ಟಿದ್ದಕ್ಕೆ ಐಶ್ವರ್ಯ ರೈ ಅವರನ್ನು ಅನೇಕರು ಹೊಗಳುತ್ತಿದ್ದಾರೆ.
ಇನ್ನು ದೊಡ್ಮನೆ ಅಭಿಮಾನಿಗಳ ಖುಷಿಯೇ ಬೇರೆ. ಇದು ದೊಡ್ಮನೆಯ ಶಕ್ತಿ, ದೊಡ್ಮನೆ ಹೆಸರಿಗೆ ಇರುವ ಗೌರವ ಎಂದು ಹಾಡಿ ಹೊಗಳುತ್ತಿದ್ದಾರೆ. ಶಿವಣ್ಣ ಚಿತ್ರರಂಗಕ್ಕೆ ಚಾಕಲೇಟ್ ಬಾಯ್ ಆಗಿ ಎಂಟ್ರಿ ಕೊಟ್ಟಿದ್ದು ನಿನ್ನೆ ಮೊನ್ನೆ ಅಂತಿರುವಾಗಲೇ.. ಶಿವಣ್ಣ ಎಲ್ಲರೂ ಕಾಲಿಗೆ ನಮಸ್ಕರಿಸುವಷ್ಟು ಸೀನಿಯರ್ ಆಗಿಬಿಟ್ಟಿದ್ದಾರೆ.



