ಲೋಕಸಭಾ ಚುನಾವಣೆ ನಂತರ ರಾಜ್ಯದಲ್ಲಿ 3 ಎಂಎಲ್ʻಎ ಸ್ಥಾನಗಳಿಗೆ ಬೈಎಲೆಕ್ಷನ್ ನಡೆಯಲಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ (ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರಿಂದ ತೆರವು), ಬಳ್ಳಾರಿ ಜಿಲ್ಲೆಯ ಸಂಡೂರು (ಸಂಸದ ತುಕಾರಾಂ ಅವರಿಂದ ತೆರವು) ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾಂವಿ (ಮಾಜಿ ಸಿಎಂ ಹಾಗೂ ಹಾಲಿ ಸಂಸದ ಬಸವರಾಜ ಬೊಮಮಾಯಿ ಅವರಿಂದ ತೆರವು)ಗಳಲ್ಲಿ ಆಗಲೇ ಉಪ ಚುನಾವಣೆಯ ಕಾವು ಹೆಚ್ಚಾಗಿದೆ. ಅದರಲ್ಲಿಯೂ ಚನ್ನಪಟ್ಟಣ ಕ್ಷೇತ್ರವನ್ನು ಪ್ರತಿಷ್ಠೆ ಕಣವಾಗಿ ಸ್ವೀಕರಿಸಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಪಕ್ಷಗಳ ಬಲಾಬಲ ಪ್ರದರ್ಶನಕ್ಕೆ ವೇದಿಕೆಯನ್ನಾಗಿ ಮಾಡಿಕೊಂಡಿದ್ದಾರೆ.
ಡಿಕೆ ಶಿವಕುಮಾರ್ ಅವರಂತೂ ಅಪರೂಪಕ್ಕೆ ಹೋಗುತ್ತಿದ್ದವರು ಈಗ ಅಲ್ಲಿ ವಾರಕ್ಕೊಮ್ಮೆ ಟೆಂಟ್ ಹಾಕ್ತಿದ್ದಾರೆ. ಚನ್ನಪಟ್ಟಣದ 14 ಪ್ರತಿಷ್ಠಿತ ದೇಗುಲಗಳಲ್ಲಿ ವಿಶೇಷ ಪೂಜೆ, ಜನತ್ ದರ್ಶನ ಮಾಡಿ ಸ್ವತಃ ತಾವೇ ಕಣಕ್ಕಿಳಿಯುವ ಸುಳಿವನ್ನೂ ನೀಡಿದ್ದ ಡಿಕೆ ಶಿವಕುಮಾರ್, ಆನಂತರ ಎಂದಿನಂತೆ ರಾಜಕೀಯ ದಾಳ ಉರುಳಿಸಿದ್ದರು.
ರಾಜ್ಯ ಸರ್ಕಾರದಿಂದ ವಿಶೇಷ ಅನುದಾನ ಕೊಡುವ ಭರವಸೆ ಕೊಟ್ಟಿರುವ ಡಿಕೆಶಿ, ಚನ್ನಪಟ್ಟಣದಿಂದ ತಾವು ಗೆದ್ದು, ತಮ್ಮನನ್ನು ಕನಕಪುರಕ್ಕೆ ಮತ್ತೆ ಶಾಸಕನನ್ನಾಗಿ ಮಾಡುವ ಯೋಜನೆಯಲ್ಲಿದ್ದಾರೆ ಎನ್ನಲಾಗಿತ್ತು. ಆದರೆ, ಅಣ್ಣನ ಈ ತಂತ್ರಗಾರಿಕೆಗೆ ಬಹಿರಂಗವಾಗಿಯೇ ನೋ ಎಂದ ಡಿಕೆ ಸುರೇಶ್, ಚನ್ನಪಟ್ಟಣಕ್ಕೆ ಅಚ್ಚರಿಯ ಅಭ್ಯರ್ಥಿಯನ್ನು ನಿಲ್ಲಿಸುತ್ತೇನೆ ಎಂದು ಹೇಳಿದ್ದರು. ಆಗ ಬೆಳಕಿಗೆ ಬಂದಿದ್ದು ಐಶ್ವರ್ಯ ಶಿವಕುಮಾರ್ ಹೆಸರು.
ಈವರೆಗೂ ಉದ್ಯಮ, ಶಿಕ್ಷಣ ಸಂಸ್ಥೆಗಳನ್ನು ನಿರ್ವಹಣೆ ಮಾಡುತ್ತಾ ಬಂದಿರುವ ಐಶ್ವರ್ಯಾ ಅವರು ಈಗ ರಾಜಕೀಯ ಪ್ರವೇಶಕ್ಕೂ ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರತೊಡಗಿದ್ದವು. ಐಶ್ವರ್ಯಾ ರಾಜಕೀಯದಲ್ಲಿ ಇದ್ದರೂ ಇಲ್ಲದಂತಿದ್ದಾರೆ. ಅವರು ಪ್ರಚಾರ ಮಾಡುವುದು ಅಪ್ಪ-ಚಿಕ್ಕಪ್ಪನ ಚುನಾವಣಾ ಕ್ಷೇತ್ರಗಳಲ್ಲಿ ಮಾತ್ರ. ಕ್ಷೇತ್ರಗಳ ಹೊರಗೆ ಪೊಲಿಟಿಕಲಿ ಆಕ್ಟಿವ್ ಇಲ್ಲ. ಎಲೆಕ್ಷನ್ ಮುಗಿದ ಮೇಲೆ ರಾಜಕೀಯದಿಂದ ದೂರ ನಿಲ್ಲವ ಐಶ್ವರ್ಯಾ ಅವರನ್ನು ಎಲೆಕ್ಷನ್ನಿಗೆ ನಿಲ್ಲಿಸಲಿದ್ದಾರೆ ಎಂಬ ಮಾತುಗಳಿಗೆ ಈಗ ಸ್ವತಃ ಡಿಕೆ ಶಿವಕುಮಾರ್ ಅವರೇ ಬ್ರೇಕ್ ಹಾಕಿದ್ದಾರೆ.
ನಮ್ಮ ಕುಟುಂಬದ ಯಾವುದೇ ಸದಸ್ಯರು ಚುನಾವಣಾ ರಾಜಕೀಯಕ್ಕೆ ಬರುವುದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
‘ನಮ್ಮ ಕುಟುಂಬದ ಯಾವುದೇ ಸದಸ್ಯರು ಚುನಾವಣಾ ರಾಜಕೀಯಕ್ಕೆ ಬರುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ನಾನು ಬಹಳ ಹಿಂದೆಯೇ ಸ್ಪಷ್ಟಪಡಿಸಿದ್ದೇನೆ. ಆದರೂ, ಈ ಬಗ್ಗೆ ಆಗಾಗ ಸೃಷ್ಟಿಯಾಗುವ ವದಂತಿಗಳಿಗೆ ಯಾರೂ ಕಿವಿಗೊಡಬಾರದು ಎಂದು ವಿನಂತಿಸುತ್ತಿದ್ದೇನೆ’ ಎಂದು ಅವರು ತಿಳಿಸಿದ್ದಾರೆ. ಡಿಕೆ ಶಿವಕುಮಾರ್ ಅವರಿಗಷ್ಟೇ ಅಲ್ಲ, ತಮ್ಮ ಡಿಕೆ ಸುರೇಶ್ ಅವರಿಗೂ ಅಣ್ಣನ ಮಕ್ಕಳು ರಾಜಕೀಯಕ್ಕೆ ಬರುವುದು ಇಷ್ಟವಿಲ್ಲ. ಅಣ್ಣನ ಮಕ್ಕಳನ್ನು ಸ್ವಂತ ಮಕ್ಕಳಂತೆ ನೋಡಿಕೊಳ್ಳುವ ಸುರೇಶ್ ಅವರಿಗೆ, ಮಕ್ಕಳನ್ನು ರಾಜಕೀಯಕ್ಕೆ ಕರೆತರುವುದು ಇಷ್ಟವಿಲ್ಲವಂತೆ.
ಡಿಕೆ ಶಿವಕುಮಾರ್ ತಮ್ಮನ ರಾಜಕೀಯ ಪ್ರವೇಶಕ್ಕೂ ವಿರೋಧ ಇದ್ದವರು. ಆದರೆ ರಾಜಕೀಯ ಅನಿವಾರ್ಯತೆಗಳ ಹಿನ್ನೆಲೆಯಲ್ಲಿ ತಮ್ಮನನ್ನು ಅಖಾಡಕ್ಕೆ ಇಳಿಸಿದ್ದರು ಡಿಕೆ ಶಿವಕುಮಾರ್.
ಅಣ್ಣ ಡಿಸಿಎಂ ಆಗಿದ್ದರೂ ಸೋತಿರುವ ಡಿಕೆ ಸುರೇಶ್ ಅವರಿಗೆ ಸೋಲನ್ನು ಅರಗಿಸಿಕೊಳ್ಳಲು ಆಗಿಲ್ಲ. ಕಳೆದ ಚುನಾವಣೆಯಲ್ಲಿ ದೇಶಾದ್ಯಂತ, ರಾಜ್ಯಾದ್ಯಂತ ಬಿಜೆಪಿ ಪರ ಅಲೆಯಿದ್ದರೂ, ಅವುಗಳನ್ನೆಲ್ಲ ಹಿಮ್ಮೆಟ್ಟಿಸಿ ಗೆದ್ದಿದ್ದ ಡಿಕೆ ಸುರೇಶ್, ಈ ಬಾರಿ ತಮ್ಮದೇ ಸರ್ಕಾರ ಇದ್ದರೂ, ಅಣ್ಣ ಡಿಸಿಎಂ ಆಗಿದ್ದರೂ.. ಗೆಲ್ಲಲು ಆಗಿಲ್ಲ. ಹೀಗಾಗಿ ಚನ್ನಪಟ್ಟಣ ಕ್ಷೇತ್ರವನ್ನು ಚಾಲೆಂಜಾಗಿಯೇ ತಗೊಂಡಿದ್ದಾರೆ ಕನಕಪುರ ಬ್ರದರ್ಸ್.



