ಅಭಿಮಾನಿಗಳಲ್ಲಿ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಅವರ ಮದುವೆ ವಿಷಯ ಸಂಚಲನ ಸೃಷ್ಟಿಸಿದೆ. ಐಶ್ವರ್ಯಾ, ಅರ್ಜುನ್ ಸರ್ಜಾ ಅವರ ದೊಡ್ಡ ಮಗಳು. ಹಿರಿಯ ನಟ ಕಲಾತಪಸ್ವಿ ರಾಜೇಶ್ ಅವರ ಮೊಮ್ಮಗಳು. ರಥಸಪ್ತಮಿ ಖ್ಯಾತಿಯ ಆಶಾರಾಣಿ ಅವರ ಮಗಳು. ಧ್ರುವ ಸರ್ಜಾ ಅವರ ಕುಟುಂಬದವರು. ಶಕ್ತಿಪ್ರಸಾದ್ ಅವರಿಗೂ ಮೊಮ್ಮಗಳು. ಸಹಜವಾಗಿಯೇ ಅಭಿಮಾನಿಗಳ ಪ್ರೀತಿಯೂ ಹೆಚ್ಚು. ಅಭಿಮಾನ, ಗೌರವವೂ ಹೆಚ್ಚು. ಇಂತಹ ಐಶ್ವರ್ಯಾ ಮದುವೆಯಾಗುತ್ತಿರೋದು ತಮಿಳು ನಟ ಉಮಪಾತಿ ರಾಮಯ್ಯ ಅವರನ್ನು.
ಇದೀಗ ಐಶ್ವರ್ಯಾ ಅರ್ಜುನ್ ಮತ್ತು ಉಮಾಪತಿ ರಾಮಯ್ಯ ಅವರ ಮದುವೆ ಅಂತೆ ಕಂತೆ ಅಲ್ಲ. ಖಚಿತವಾಗಿದೆ. ತಮಿಳು ಮೀಡಿಯಾಗಳಿಗೆ ಮಾತನಾಡಿರುವ ಉಮಾಪತಿ ಅವರ ತಂದೆ ತಂಬಿ ರಾಮಯ್ಯ ಸುದ್ದಿಯನ್ನು ಖಚಿತ ಪಡಿಸಿದ್ದಾರೆ.
ಉಮಾಪತಿ ಮತ್ತು ಐಶ್ವರ್ಯಾ ಪರಸ್ಪರ ಪರಿಚಿತರಾಗಿದ್ದು ತಮಿಳು ರಿಯಾಲಿಟಿ ಶೋವೊಂದರಲ್ಲಿ. `ಸರ್ವೈವರ್ ತಮಿಳ್’ ಅನ್ನೋ ರಿಯಾಲಿಟಿ ಶೋ ನಡೆಯುತ್ತಿತ್ತು. ಆ ಶೋನಲ್ಲಿ ಉಮಾಪತಿ ಕೂಡಾ ಸ್ಪರ್ಧಿ. ಅರ್ಜುನ್ ಸರ್ಜಾ ಹೋಸ್ಟ್ ಮಾಡುತ್ತಿದ್ದರು. ಈ ವೇಳೆ ಅರ್ಜುನ್ ಸರ್ಜಾ ಅವರಿಗೆ ಉಮಾಪತಿ ಇಷ್ಟವಾದರು. ಆ ನಂತರ ಎರಡೂ ಕುಟುಂಬಗಳವರು ಭೇಟಿ ಮಾಡಿದ್ದು ಅರ್ಜುನ್ ಸರ್ಜಾ ಅವರು ಕಟ್ಟಿಸಿರುವ ಆಂಜನೇಯ ದೇವಸ್ಥಾನದಲ್ಲಿ. ದೇವಸ್ಥಾನದಲ್ಲಿಯೇ ಎರಡೂ ಕುಟುಂಬಗಳವರು ಪರಸ್ಪರ ಮುಂದುವರೆಯಲು ಒಪ್ಪಿಕೊಂಡೆವು. ಶೀಘ್ರದಲ್ಲಿಯೇ ಮದುವೆ ದಿನಾಂಕ ಗೊತ್ತು ಪಡಿಸಲಾಗುವುದು. ನವೆಂಬರ್ 8ರಂದು ಉಮಾಪತಿಯ ಹುಟ್ಟುಹಬ್ಬ. ಆ ದಿನ ಮದುವೆ ದಿನಾಂಕವನ್ನೂ ತಿಳಿಸುತ್ತೇವೆ ಎಂದು ಹೇಳಿದ್ದಾರೆ ಉಮಾಪತಿ. ಸರ್ಜಾ ಕುಟುಂಬದವರು ಕೂಡಾ ಹೌದು ಎಂದಿದ್ದಾರೆ.



