ಸಾಹಸಸಿಂಹ, ಅಭಿನಯ ಭಾರ್ಗವ ಎಂದೆಲ್ಲ ಅಭಿಮಾನಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುವ ನಟ ವಿಷ್ಣುವರ್ಧನ್ ಅವರ ಸ್ಮಾರಕದ ಹೋರಾಟವೇನೋ ಒಂದು ಹಂತಕ್ಕೆ ಬಂದಾಯ್ತು. ಆದರೆ ಅವರ ಪುಣ್ಯಭೂಮಿ ವಿಷಯ ಇನ್ನೂ ಇತ್ಯರ್ಥವಾಗಿಲ್ಲ. ರಕ ಎಲ್ಲಿಯೇ ನಿರ್ಮಾಣ ಆಗಿದ್ದರೂ ಅಂತ್ಯಸಂಸ್ಕಾರ ಆಗಿರುವ ಜಾಗದಲ್ಲಿಯೇ ಪುಣ್ಯಭೂಮಿ ಇರಬೇಕು ಎಂದು ಅವರ ಅಭಿಮಾನಿಗಳ ಹಠ. ಹೀಗಾಗಿಯೇ ವಿಷ್ಣುವರ್ಧನ್ ಅವರ ಹುಟ್ಟುಹಬ್ಬ ಹಾಗೂ ಪುಣ್ಯತಿಥಿಯ ದಿನ ಅಭಿಮಾನಿಗಳೇ ಅಭಿಮಾನ್ ಸ್ಟುಡಿಯೋದ ಎದುರು ಆಚರಿಸುತ್ತಾರೆ. ಆದರೆ ಅದಕ್ಕೂ ಅಡ್ಡಿಯಾಗುತ್ತಿದೆ.
ವಿಷ್ಣುವರ್ಧನ್ ಅವರ ಅಂತ್ಯ ಸಂಸ್ಕಾರ ನಡೆದ ಅಭಿಮಾನ್ ಸ್ಟುಡಿಯೋದ ಒಳಗೆ ಪ್ರವೇಶಿಸಲು ಅಭಿಮಾನಿಗಳಿಗೆ ನಿರ್ಬಂಧಗಳನ್ನು ಹೇರಲಾಗುತ್ತಿದೆ. ಸ್ಟುಡಿಯೋದ ಮಾಲೀಕರಿಂದ ಈ ರೀತಿ ಆಗುತ್ತಿದೆ ಎನ್ನುವುದು ಅಭಿಮಾನಿಗಳ ಆರೋಪ. ಪ್ರತಿವರ್ಷದ ಹುಟ್ಟುಹಬ್ಬ ಹಾಗೂ ಪುಣ್ಯಸ್ಮರಣೆಗೆ ಹಲವಾರು ತೊಂದರೆಗಳನ್ನು ನೀಡಲಾಗುತ್ತಿದೆ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ.
ವಿಷ್ಣುವರ್ಧನ್ ಅವರಿಗೆ ಎರಡೆರಡು ಕಡೆ ಸ್ಮಾರಕ ಮತ್ತು ಪುಣ್ಯಭೂಮಿ ಮಾಡುವುದು ರಾಜ್ಯ ಸರ್ಕಾರಕ್ಕೆ ಕಷ್ಟವಾದರೆ, ಆ ಜಮೀನಿಗೆ ತಗಲುವ ಮತ್ತು ಪುಣ್ಯಭೂಮಿ ಅಭಿವೃದ್ಧಿ ಪಡಿಸಲು ಬೇಕಾಗುವ ಹಣವನ್ನು ಅಭಿಮಾನಿಗಳೇ ನೀಡುತ್ತೇವೆ ಎನ್ನುವುದು ಅಭಿಮಾನಿಗಳ ನಿರ್ಧಾರ. ಹಾಗಿದ್ದರೂ ಕೂಡ ಸರ್ಕಾರದ ಕಡೆಯಿಂದ ಸೂಕ್ತ ಪ್ರತಿಕ್ರಿಯೆ ಬಂದಿಲ್ಲ ಎಂಬ ಕಾರಣದಿಂದ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ. ಆ ಕುರಿತು ‘ಡಾ. ವಿಷ್ಣುವರ್ಧನ್ ಅಭಿಮಾನಿ ಸಂಘಗಳ ಒಕ್ಕೂಟ’ದ ಮುಖಂಡ ವೀರಕಪುತ್ರ ಶ್ರೀನಿವಾಸ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಪ್ರತಿಭಟನೆ ಕುರಿತ ಸಮಾಲೋಚನಾ ಸಭೆ ನಡೆಸಿದ್ಧಾರೆ. ಡಿಸೆಂಬರ್ 17ರಂದು ಡಾ. ವಿಷ್ಣುವರ್ಧನ್ ಅಭಿಮಾನಿ ಸಂಘಗಳ ಒಕ್ಕೂಟದಿಂದ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದ್ದು, ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ ಆರರ ತನಕ ಪ್ರತಿಭಟನೆ ನಡೆಯಲಿದೆ. ಇದರಲ್ಲಿ ಕನ್ನಡಪರ ಸಂಘಟನೆಗಳು, ಕಲಾವಿದರ ಸಂಘ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ವಿಷ್ಣುವರ್ಧನ್ ಅವರ ಒಡನಾಡಿಗಳೆಲ್ಲರೂ ಭಾಗವಹಿಸುತ್ತಿದ್ದಾರೆ ಎಂಬ ನಿರೀಕ್ಷೆ ಇದೆ. ಅಂದಾಜು 50 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಸೇರುವ ನಿರೀಕ್ಷೆ ಇದೆ ಎಂದು ವೀರಕಪುತ್ರ ಶ್ರೀನಿವಾಸ್ ಅವರು ತಿಳಿಸಿದ್ದಾರೆ.
ಒಂದು ವೇಳೆ ಈ ಪ್ರತಿಭಟನೆಗೂ ಸರ್ಕಾರ ಜಗ್ಗದೇ ಹೋದರೆ, ದೆಹಲಿಗೆ ಹೋಗಿ ಹೋರಾಟ ಮಾಡುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಇಷ್ಟೇ ಅಲ್ಲದೆ ಸರ್ಕಾರದ ಮಂತ್ರಿಗಳು ಭಾಗವಹಿಸುವ ಎಲ್ಲಾ ಕಾರ್ಯಕ್ರಮಗಳಲ್ಲಿ ಕಪ್ಪು ಬಾವುಟ ಪ್ರದರ್ಶನಕ್ಕೆ ಡಾ.ವಿಷ್ಣುವರ್ಧನ್ ಒಕ್ಕೂಟ ಮುಂದಾಗಲಿದೆ.
ಅಸಲಿಗೆ ಅಂತ್ಯಸಂಸ್ಕಾರಗೊಂಡ ಜಾಗವನ್ನು ಅಭಿವೃದ್ದಿಪಡಿಸುವ ಕೆಲಸವನ್ನು ಯಾವುದೇ ಸರ್ಕಾರ ಮಾಡಿಲ್ಲ ಅನ್ನೋದು ಅಭಿಮಾನಿಗಳ ಆಕ್ರೋಶ. ಹಾಗೇ ಹಿರಿಯ ಕಲಾವಿದ ಬಾಲಕೃಷ್ಣ ಅವರ ಕುಟುಂಬದ ಮೇಲೂ ಕಿಡಿಕಾರಿದ್ದಾರೆ. ಹಿರಿಯ ನಟ ಬಾಲಣ್ಣ ಅವರಿಗೆ ಸರ್ಕಾರ ಅನುದಾನವಾಗಿ ಅಭಿಮಾನ್ ಸ್ಟುಡಿಯೋ ನೀಡಿತ್ತು. ಬಾಲಣ್ಣ ಸ್ಟುಡಿಯೋ ಕಟ್ಟುವ ಕನಸಿಗಾಗಿ ಸರ್ಕಾರದ ಬಳಿ ಇಪ್ಪತ್ತು ಎಕರೆ ಜಾಗವನ್ನು 99 ವರುಷಕ್ಕೆ ಅನುದಾನವಾಗಿ ಪಡೆದು ಅಭಿಮಾನ್ ಸ್ಟುಡಿಯೋ ನಿರ್ಮಿಸಿದ್ದರು. ಅವರ ಅಗಲಿಕೆಯ ಬಳಿಕ 2004ರಲ್ಲಿ ಅವರ ಮಕ್ಕಳು ಹತ್ತು ಎಕರೆ ಜಾಗವನ್ನು ಮಾರಾಟ ಮಾಡಿ ದುರುಪಯೋಗಪಡಿಸಿಕೊಂಡಿದ್ದಾರೆಂದೂ ಆರೋಪಿಸಿದ್ದಾರೆ.



