ಇವತ್ತಿಗೂ 18 ವರ್ಷಗಳೇ ಕಳೆದರೂ ಅದನ್ನು ಮರೆಯಲು ಸಾಧ್ಯವಿಲ್ಲ. ರಾರಾ.. ನಾಗವಲ್ಲಿ.. ಅನ್ನೋ ಆಪ್ತಮಿತ್ರದ ಸೌಂದರ್ಯ ಅವರನ್ನಾಗಲೀ, ಲಕಲಕಲಕಲಕ ಅನ್ನೋ ಚಂದ್ರಮುಖಿ ಜ್ಯೋತಿಕಾ ಅವರನ್ನಾಗಲೀ ಮರೆತಿಲ್ಲ. ಚಂದ್ರಮುಖಿ 2 ಚಿತ್ರಕ್ಕೆ ಆಪ್ತಮಿತ್ರ ಚಿತ್ರವೇ ಪ್ರೇರಣೆ. ಆಪ್ತಮಿತ್ರ ಚಿತ್ರ ಮಣಿಚಿತ್ರತಾಳ್ ಸಿನಿಮಾ ರೀಮೇಕ್.
ಮಲಯಾಳಂನಲ್ಲಿ ಸಿನಿಮಾ ಹಿಟ್ ಆದರೂ, ದೊಡ್ಡ ಮಟ್ಟದ ಸಕ್ಸಸ್ ಸಿಕ್ಕಿದ್ದು ಕನ್ನಡದಲ್ಲಿ. ಪಿ.ವಾಸು ನಿರ್ದೇಶನದಲ್ಲಿ ವಿಷ್ಣುವರ್ಧನ್-ಸೌಂದರ್ಯ-ರಮೇಶ್ ಅರವಿಂದ್-ಅವಿನಾಶ್ ನಟಿಸಿದ್ದರು. ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡಿದ್ದ ರಜನಿಕಾಂತ್, ಗೆಳೆಯ ವಿಷ್ಣುವರ್ಧನ್ ಸಿನಿಮಾವೊಂದು ದೊಡ್ಡ ಮಟ್ಟದ ಹಿಟ್ ಕಂಡಾಗ ನೋಡಿದ್ದರು. ತಮಿಳಿಗೆ ರೀಮೇಕ್ ಮಾಡಿದ್ದರು. ರಜನಿಕಾಂತ್ ರೀ-ಎಂಟ್ರಿಯಾಗಿದ್ದು ಹಾಗೆ. ಚಂದ್ರಮುಖಿ ಹೆಸರಲ್ಲಿ ಮಾಡಿದ್ದ ಸಿನಿಮಾ ರಜನಿಕಾಂತ್ ಅವರಿಗೆ ಭರ್ಜರಿ ಕಂಬ್ಯಾಕ್ ಕೊಟ್ಟಿತ್ತು. ತಮಿಳಿನಲ್ಲೂ ಪಿ.ವಾಸು ಅವರೇ ಡೈರೆಕ್ಟರ್.
ಇದಾದ ಮೇಲೆ ಆಪ್ತಮಿತ್ರದ ಸೀಕ್ವೆಲ್ ಆಗಿ ಆಪ್ತರಕ್ಷಕದಲ್ಲಿ ವಿಷ್ಣುವರ್ಧನ್ (ವಿಷ್ಣು ಅಭಿನಯದ ಕಟ್ಟಕಡೆಯ ಸಿನಿಮಾ), ತೆಲುಗಿನಲ್ಲಿ ವೆಂಕಟೇಶ್ ಸೀಕ್ವೆಲ್`ನಲ್ಲಿ ನಟಿಸಿದ್ದರು. ಆದರೆ ಇದೀಗ ಅದೇ ಪಿ.ವಾಸು ಚಂದ್ರಮುಖಿ 2 ಮಾಡುತ್ತಿದ್ದಾರೆ. ಹೀರೋ ಮತ್ತು ಹೀರೋಯಿನ್ ಆಗಿ ರಾಘವ ಲಾರೆನ್ಸ್ ಮತ್ತು ಕಂಗನಾ ರಣಾವತ್.
18 ವರ್ಷದ ಬಳಿಕ ಚಂದ್ರಮುಖಿ ಸೀಕ್ವೆಲ್ ಬರ್ತಿದ್ದು, ನಿರೀಕ್ಷೆಯನ್ನು ಹೆಚ್ಚಿಸಿದೆ. ಲೈಕಾ ಸಂಸ್ಥೆಯ ಒಡೆಯ ಸುಭಾಷ್ ಕರಣ್ ಬಹಳ ಅದ್ಧೂರಿಯಾಗಿ ಚಿತ್ರ ನಿರ್ಮಿಸಿದ್ದು, ಆಸ್ಕರ್ ಅವಾರ್ಡ್ ವಿನ್ನರ್ ಎಂ.ಎಂ ಕೀರವಾಣಿ ಸಂಗೀತ ನಿರ್ದೇಶನ, ಆರ್ ಡಿ ರಾಜಶೇಖರ್ ಛಾಯಾಗ್ರಹಣ, ಅಂಥೋನಿ ಸಂಕಲನ ಚಿತ್ರಕ್ಕಿದೆ. ಈ ಚಿತ್ರ ಸೆಪ್ಟಂಬರ್ 19ರ ಗಣೇಶ ಹಬ್ಬಕ್ಕೆ ಚಂದ್ರಮುಖಿ-2 ಸೀಕ್ವೆಲ್ ತೆಲುಗು, ತಮಿಳು, ಹಿಂದಿ, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಬಿಗ್ ಸ್ಕ್ರೀನ್ಗೆ ಲಗ್ಗೆ ಇಡಲಿದೆ. ವಡಿವೇಲು, ಲಕ್ಷ್ಮೀ ಮೆನನ್, ಮಹಿಮಾ ನಂಬಿಯಾರ್, ರಾಧಿಕಾ ಶರತ್ ಕುಮಾರ್, ಸುರೇಶ್ ಮೆನನ್ ತಾರಾಬಳಗದಲ್ಲಿದ್ದಾರೆ.
ಇದೀಗ ಚಂದ್ರಮುಖಿ 2ನಲ್ಲಿ ಏನಿರುತ್ತೆ? ಆಪ್ತರಕ್ಷಕ ಸಿನಿಮಾ ಬಂದಾಗಿದೆ. ಹಾಗಾದರೆ ಚಂದ್ರಮುಖಿ 2ನಲ್ಲಿರೋ ಕಥೆ ಎಂಥದ್ದು? ರಾಘವ ಲಾರೆನ್ಸ್ ಇತ್ತೀಚೆಗೆ ದೆವ್ವ ಓರಿಯಂಟೆಡ್ ಸಿನಿಮಾಗಳಲ್ಲೇ ಗೆದ್ದವರು. ಕಂಗನಾ ವಿವಾದಗಳೇನೇ ಇರಲಿ, ಪ್ರತಿಭೆಯ ಬಗ್ಗೆ ದೂಸ್ರಾ ಮಾತಿಲ್ಲ. ಇವರೆಲ್ಲ ಒಟ್ಟಾಗಿ ಸೇರಿ ಸೃಷ್ಟಿಸಿರುವ ಚಂದ್ರಮುಖಿ 2 ಬಗ್ಗೆ ನಿರೀಕ್ಷೆಗಳೂ ಭಯಂಕರವಾಗಿವೆ.



