ಟೊಮ್ಯಾಟೋ (Tomato) ರೇಟ್ 100ರ ಗಡಿ ದಾಟಿ, ಈಗಾಗಲೇ 150ರ ಸಮೀಪ ಇದೆ. ದೇಶದ ವಿವಿಧೆಡೆ ಟೊಮ್ಯಾಟೋ (Tomato) ರೇಟ್ ಆಗಲೇ 150 ರೂ. ಗಡಿ ದಾಟಿಯೂ ಆಗಿದೆ. ಇದೀಗ ಇನ್ನಷ್ಟು ತರಕಾರಿಗಳು 100ರ ಗಡಿ ದಾಟುತ್ತಿವೆ. ಟೊಮ್ಯಾಟೋ ನಂತರ ಬೀನ್ಸ್ (Beans) ಹುರುಳಿಕಾಯಿ, ಕ್ಯಾರೆಟ್ (Carret) 100ರ ಗಡಿ ದಾಟಿವೆ.
ನಾಟಿ ಟೊಮೆಟೋ ಸ್ಥಳೀಯ ಮಾರುಕಟ್ಟೆಗಳಲ್ಲಿ ಕೇಜಿಗೆ 120-125 ದರದಲ್ಲಿ ಮಾರಾಟವಾಗಿದೆ. ಹಾಪ್ಕಾಮ್ಸ್ನಲ್ಲಿ 124ಕ್ಕೆ ಮಾರಾಟವಾಗಿದೆ. ಹಿಂದಿನ ವಾರಕ್ಕಿಂತಲೂ ಕಡಿಮೆ ಪ್ರಮಾಣದ ಟೊಮೆಟೋ ಬರುತ್ತಿರುವುದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ನಗರದ ನಂದಿನಿ ಲೇಔಟ್, ಮಲ್ಲೇಶ್ವರ, ಜೆ.ಪಿ.ನಗರ, ಯಶವಂತಪುರ ಸ್ಥಳೀಯ ಮಾರುಕಟ್ಟೆ, ತಳ್ಳುಗಾಡಿಗಳಲ್ಲಿ ಮಾರುವವರು 130 ರವರೆಗೂ ಟೊಮೆಟೋ ಮಾರುತ್ತಿದ್ದಾರೆ. ಕೆ.ಆರ್.ಮಾರುಕಟ್ಟೆಯಲ್ಲಿ ಸಾಧಾರಣ 24 ಕೇಜಿ ಬಾಕ್ಸ್ ಟೊಮೆಟೋ 1800 ರವರೆಗೆ ಮಾರಾಟವಾಗಿದೆ.
ಇನ್ನು ಕಳೆದ ವಾರದವರೆಗೆ 90ರ ಆಸುಪಾಸಿಲ್ಲಿದ್ದ ಬೀನ್ಸ್ ಕೂಡ ಸೋಮವಾರ 30ನಷ್ಟು ಬೆಲೆಯನ್ನು ಹೆಚ್ಚಿಸಿಕೊಂಡಿದ್ದು 120 ರವರೆಗೆ ಮಾರಾಟವಾಗಿದೆ. ಸಗಟು ವ್ಯಾಪಾರಿಗಳಿಗೆ ಇದು 80-90 ನಂತೆ ಸಿಗುತ್ತಿದೆ. ಆದರೆ, ಟೊಮೆಟೋನಷ್ಟು ಬೀನ್ಸ್ ಕೊರತೆಯಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಾರೆ. ಇನ್ನು, ಕ್ಯಾರೆಟ್ ಬೆಲೆ ಕೂಡ ಏರುಗತಿಗೆ ಬಂದಿದ್ದು, ಕೇಜಿಗೆ 100 -110 ನಂತೆ ಮಾರಾಟವಾಗುತ್ತಿದೆ. ಹಾಪ್ಕಾಮ್ಸ್ನಲ್ಲಿ ಮಾರುಕಟ್ಟೆಗಿಂತ 5-10 ದರ ವ್ಯತ್ಯಾಸವಾಗಿದೆ.
ಬೆಲೆ ಏರಿಕೆಯಿಂದ ತರಕಾರಿ ಕೊಳ್ಳಲು ಬರುವವರು ಒಂದು ಕೇಜಿ ಬದಲಾಗಿ ಅರ್ಧ ಕೇಜಿ ಖರೀದಿ ಮಾಡುವ ಸ್ಥಿತಿಯಿದೆ ಎಂದು ಗ್ರಾಹಕರು ಬೇಸರ ತೋಡಿಕೊಂಡರು.
ಅಂದಹಾಗೆ ಈರುಳ್ಳಿ ಬೆಲೆಯೂ ಏರಿಕೆ ಕಾಣುತ್ತಿದೆ. ಈಗಾಗಲೇ 50ರ ಗಡಿ ದಾಟಿರುವ ಈರುಳ್ಳಿ ಬೆಲೆ, ನಾಗಾಲೋಟದಲ್ಲಿದೆ. ಕೆಲವೇ ದಿನಗಳಲ್ಲಿ 100ರ ಗಡಿ ದಾಟಿದರೂ ಅಚ್ಚರಿಯಿಲ್ಲ. ಮಳೆ ಬಾರದೇ ಹೋದರೆ, ಇದೇ ರೀತಿ ಬೆಲೆ ಏರಿಕೆಯಾಗುತ್ತಲೇ ಹೋಗುತ್ತದೆ ಎನ್ನುತ್ತಾರೆ ವ್ಯಾಪಾರಿಗಳು.
ಇನ್ನೊಂದು ಹದಿನೈದು ದಿನಗಳಲ್ಲಿ ಬೆಲೆ ಏರಿಕೆ ನಿಯಂತ್ರಣಕ್ಕೆ ಬರಲಿದೆ. ಆಮದು ಹೆಚ್ಚು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಶತಕ ದಾಟಿದ ತರಕಾರಿಗಳು
ಟೊಮೆಟೋ (ನಾಟಿ) 125
ಟೊಮೆಟೋ (ಜಾಮುನ್) 120
ಬೀನ್ಸ್ 120
ಬೀನ್ಸ್ಕಾಳು 110
ಕ್ಯಾರೇಟ್ 110
ಹಸಿ ಮೆಣಸಿನ ಕಾಯಿ 170
ಹಸಿರು ಬಟಾಣಿ 190
ಶತಕದ ಅಂಚಿನಲ್ಲಿರುವ ತರಕಾರಿಗಳು
ಚಪ್ಪರದ ಅವರೆ 86
ಗೋರೆಕಾಯಿ 80
ದಪ್ಪ ಮೆಣಸಿನಕಾಯಿ 84
ಗೆಡ್ಡೆ ಕೋಸು 90
ಸೋರೆ ಕಾಯಿ 75
ಹಾಗಲ ಕಾಯಿ 98
ಬದನೆಕಾಯಿ 85



