ಹಾವೇರಿ ಸುತ್ತಮುತ್ತ ನಡೆಯುತ್ತಿರುವ ಮೆಕ್ಕೆಜೋಳ ಹೋರಾಟಕ್ಕೆ ವಿಜಯೇಂದ್ರ ಎಂಟ್ರಿ ಕೊಡುತ್ತಿದ್ದಂತೆ ರಾಜ್ಯ ಸರ್ಕಾರ ಅಲರ್ಟ್ ಆಗಿದೆ. ವಿರೋಧ ಪಕ್ಷಗಳು ಹೋರಾಟ ಮಾಡಿದರೆ ಏನಾಗುತ್ತದೆ ಎನ್ನುವುದು ಈಗಲಾದರೂ ಬಿಜೆಪಿಗೆ ಅರ್ಥವಾಗಿರಬೇಕು. ಅಂದಹಾಗೆ ಕಬ್ಬು ಬೆಳೆಗಾರರ ಹೋರಾಟಕ್ಕೆ ಸರ್ಕಾರ ಕಿವಿ ಕೊಟ್ಟಿದ್ದು, ವಿಜಯೇಂದ್ರ ಕಾಲಿಟ್ಟ ಮೇಲೆ.. ಅದಕ್ಕೆ ಮೊದಲು ಸುಮಾರು ಹತ್ತು ಹನ್ನೆರಡು ದಿನ ರೈತರು ರಸ್ತೆಯಲ್ಲಿದ್ದರೂ.. ಸರ್ಕಾರ ಕ್ಯಾರೇ ಎಂದಿರಲಿಲ್ಲ.
ಈಗ ಮೆಕ್ಕೆ ಜೋಳ ಹೋರಾಟಗಾರರ ಸಮಸ್ಯೆಗೂ ಬಿಜೆಪಿ ಪ್ರವೇಶವಾಗುತ್ತಿದ್ದಂತೆ ರಾಜ್ಯ ಸರ್ಕಾರ ಅಲರ್ಟ್ ಆಗಿದೆ. ಕೇಂದ್ರ ಸರ್ಕಾರದ ಮೇಲೆ ಸಮಸ್ಯೆಯ ಸಂಪೂರ್ಣ ಹೊರೆ ಹೊರಿಸುತ್ತಿದ್ದ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ.
ಕೆಎಂಎಫ್, ಡಿಸೆಂಬರ್ 1, 2025 ರಿಂದ ರಾಜ್ಯದಾದ್ಯಂತ 50,000 ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ನೇರವಾಗಿ ರೈತರಿಂದಲೇ ಖರೀದಿಸಲಿದೆ. ಪ್ರತಿ ಟನ್‌ಗೆ ₹2,400 ದರವನ್ನು ನಿಗದಿಪಡಿಸಲಾಗಿದ್ದು, ರೈರಿಗೆ ಉತ್ತಮ ಬೆಲೆ ಸಿಗುವ ನಿರೀಕ್ಷೆ ಇದೆ. ರೈತರಿಗೆ ಸುಮಾರು ಒಂದೂವರೆ ತಿಂಗಳ ಹಿಂದೆ ಕ್ವಿಂಟಲ್ʻಗೆ 2800 ರೂ.ವರೆಗೂ ದರ ಇತ್ತು. ಒಳ್ಳೆಯ ಲಾಭ ಇತ್ತು. ಸಡನ್ ಆಗಿ ಒಂದೂವರೆ ಸಾವಿರಕ್ಕೆ ಕುಸಿದಾಗ ನಷ್ಟ ಎದುರಿಸಲಾಗದೆ ರೈತರು ಬೀದಿಗೆ ಇಳಿದಿದ್ದರು.
ಕೇಂದ್ರ ಸರ್ಕಾರವೂ ಮೆಕ್ಕೆಜೋಳ ಖರೀದಿಗೆ MSP ದರದಲ್ಲಿ ಮೆಕ್ಕೆ ಜೋಳ ಖರೀದಿ ಮಾಡಲಿದೆ. ಇದರಿಂದ ರೈತರಿಗೆ ಉತ್ತಮ ಬೆಲೆ ಸಿಗುವ ನಿರೀಕ್ಷೆ ಇದೆ. ಗುಣಮಟ್ಟದ ಆಧಾರದ ಮೇಲೆ ದರದಲ್ಲಿ ಅಲ್ಪ ವ್ಯತ್ಯಾಸವಿರಬಹುದು, ಆದರೆ ಮೆಕ್ಕೆಜೋಳದ ತೇವಾಂಶವು ಕಡ್ಡಾಯವಾಗಿ 14 ಡಿಗ್ರಿ ಇರುವಂತೆ ನೋಡಿಕೊಳ್ಳಬೇಕು. ಪ್ರತಿಯೊಬ್ಬ ರೈತರಿಂದ ಗರಿಷ್ಠ 25 ಟನ್ ಮೆಕ್ಕೆಜೋಳವನ್ನು ಮಾತ್ರ ಖರೀದಿಸಲಾಗುತ್ತದೆ. ಈ ಹಿಂದೆ ಟೆಂಡರ್ ಮೂಲಕ ₹2,150-₹2,250 ದರದಲ್ಲಿ ಖರೀದಿಸಲಾಗುತ್ತಿತ್ತು. ಆದರೆ, ಸರ್ಕಾರದ ಸೂಚನೆಯಂತೆ ಈ ಬಾರಿ ದರವನ್ನು ಹೆಚ್ಚಿಸಲಾಗಿದೆ.
ಅಷ್ಟೇ ಅಲ್ಲ, ಡಿಸ್ಟಿಲರಿಗಳು ನೇರವಾಗಿ ರೈತರಿಂದ ಕನಿಷ್ಠ ಬೆಂಬಲ ದರ ನೀಡಿ ಮೆಕ್ಕೆಜೋಳ ಖರೀದಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಸೂಚನೆ ನೀಡಿದ್ದಾರೆ. ಷಿ ಮಾರುಕಟ್ಟೆ ಇಲಾಖೆ ಈಗಾಗಲೇ ಸೂಚನೆಗಳನ್ನು ನೀಡಿದ್ದು, ಇದರ ಪ್ರಕಾರ ಡಿಸ್ಟಿಲರಿಗಳು ಮೆಕ್ಕೆಜೋಳ ಖರೀದಿಸಿ ರೈತರ ನೆರವಿಗೆ ಬರಬೇಕು ಎಂದು ಹೇಳಿದ್ದಾರೆ.
ಸರ್ಕಾರವೇನೋ ಸ್ಪಂದಿಸಿದೆ. ಆದರೆ.. ಇಲ್ಲಿಯೂ ರಾಜಕೀಯ ನಾಯಕರ ಬಗ್ಗೆ ಅಪಸ್ವರವಂತೂ ಇದೆ. ಹೋರಾಟಕ್ಕೆ ಹೋಗುವುದು.. ರೈತರ ಜೊತೆ ನಿಂತುಕೊಳ್ಳುವುದು.. ಟಿವಿ ಚಾನೆಲ್ಲಿನವರ ಕವರೇಜ್ ಮುಗಿದ ನಂತರ ನಾಪತ್ತೆಯಾಗುವ ರಾಜಕಾರಣಿಗಳ ಆಟವೂ ಇದೆ. ವಿಜಯೇಂದ್ರ ಕೂಡಾ ಅದಕ್ಕೆ ಹೊರತಾಗಿಲ್ಲ. ಜವಾಬ್ದಾರಿಯುತ ಪ್ರತಿಪಕ್ಷವಾಗಿ ಇನ್ನೂ ಕೂಡಾ ಬಿಜೆಪಿ ಎಚ್ಚೆತ್ತುಕೊಂಡಿಲ್ಲ. ಇನ್ನಷ್ಟು ಜವಾಬ್ದಾರಿಯಿಂದ ಕೆಲಸ ಮಾಡಿದರೆ, ಸರ್ಕಾರಕ್ಕೆ ಚಾಟಿ ಬೀಸಬಹುದು. ಆದರೆ, ಬಿಜೆಪಿ, ವಿಜಯೇಂದ್ರ ಸೇರಿದಂತೆ ಬಹುತೇಕರು ಸಿಕ್ಕ ಅವಕಾಶಗಳನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ.



