ರಾಹುಲ್ ಗಾಂಧಿ ಬದಲಾಗಿದ್ದಾರೆ. ಕಳೆದ 10 ವರ್ಷಗಳಿಂದ 50ರ ಗಡಿಯಲ್ಲೇ ತಿಣುಕುತ್ತಿದ್ದ ಕಾಂಗ್ರೆಸ್, ಈ ಬಾರಿ 99 ಸ್ಥಾನ ಗೆದ್ದಿದ್ದೇ ತಡ, ಆಕ್ಸಿಜನ್ ತೆಗೆದುಕೊಂಡಂತೆ ರೊಚ್ಚಿಗೆದ್ದಿದ್ದಾರೆ. ಈ ಹಿಂದೆ ಎರಡು ಅವಧಿಯಲ್ಲಿ ನೋಡಿದ್ದ ರಾಹುಲ್ ಗಾಂಧಿಯೇ ಬೇರೆ.. ಈಗ ನೋಡುತ್ತಿರುವ ರಾಹುಲ್ ಗಾಂಧಿಯೇ ಬೇರೆ.
ನೇರವಾಗಿ ಮೋದಿಯನ್ನು ಹಾಗೂ ಮೋದೀ ಟೀಂನ್ನು ಅಟ್ಯಾಕ್ ಮಾಡುವ ವಿಚಾರದಲ್ಲಿ ರಾಹುಲ್ ಗಾಂಧಿ ಕಾಂಪ್ರೊಮೈಸ್ ಆಗುತ್ತಿಲ್ಲ. ಆದರೆ.. ಅ ಹಾದಿಯಲ್ಲಿ ಕೆಲವು ವಿಚಾರಗಳಲ್ಲಿ ಎಡವುತ್ತಿದ್ದಾರೆ ಎನ್ನುವುದೂ ಸತ್ಯ. ಅವರಿಗೀಗ ಬಜೆಟ್ ಮಂಡನೆಗೂ ಮುನ್ನ ಅಧಿಕಾರಿಗಳಿಗೆ ಹಲ್ವಾ ತಿನ್ನಿಸುವ ವಿಚಾರದಲ್ಲಿಯೂ ಜಾತಿ ಕಂಡಿದೆ.
ರಾಹುಲ್ ಗಾಂಧಿ ಹೇಳಿದ್ದೇನು..?
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ದೇಶದಲ್ಲಿ ಮಹಾಭಾರತದ ಚಕ್ರವ್ಯೂಹದ ಸ್ವರೂಪದ ಪರಿಸ್ಥಿತಿ ಈಗ ನಿರ್ಮಾಣವಾಗಿದೆ ಎಂದು ಟೀಕೆ ಮಾಡಿದ್ದಾರೆ. ಈ ವೇಳೆ ಭಾರತವನ್ನು ಚಕ್ರವ್ಯೂಹದಲ್ಲಿ ಬಂಧಿಸಲಾಗಿದ್ದು, ಅದು ಪದ್ಮವ್ಯೂಹ ಎಂದೂ ಹೇಳಿದ್ದಾರೆ. ಅದೆಲ್ಲವೂ ಒಂದು ಹಂತಕ್ಕೆ ಓಕೆ ಎನ್ನುತ್ತಿರುವಾಗಲೇ ಬಜೆಟ್ ಮಂಡನೆಗೂ ಮುನ್ನ ನೀಡುವ ಹಲ್ವಾ ಸಂಪ್ರದಾಯದಲ್ಲಿ ಜಾತಿಯನ್ನು ಎಳೆದು ತಂದಿದ್ದಾರೆ.
ಕೇಂದ್ರ ಬಜೆಟ್‌ಗೆ ಸಿದ್ದತೆ ನಡೆಯುವ ವೇಳೆ ಅಧಿಕಾರಿಗಳ ಜೊತೆ ಕೇಂದ್ರ ಹಣಕಾಸು ಸಚಿವರು ಸಂಪ್ರದಾಯದಂತೆ ಹಲ್ವಾ ಕಾರ್ಯಕ್ರಮ ಮಾಡುತ್ತಾರೆ. ಬಜೆಟ್ ಸಿದ್ದತೆ ವೇಳೆ ಅದರ ಗೌಪ್ಯತೆ ಹಾಗೂ ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ಬಜೆಟ್ ಸಿದ್ದತಾ ಕಾರ್ಯದಲ್ಲಿ ತೊಡಗುವ ಅಧಿಕಾರಿಗಳು ಕೆಲ ದಿನಗಳ ಕಾಲ ಮನೆಗೆ ಹೋಗದೆ, ಯಾರದ್ದೇ ಸಂಪರ್ಕಕ್ಕೂ ಸಿಗದೆ ಕಚೇರಿಯಲ್ಲಿ ಇರುತ್ತಾರೆ. ಅವರ ಊಟೋಪಚಾರಗಳ ಸಿದ್ದತೆಯ ಆರಂಭಕ್ಕಾಗಿ ಸೂಚ್ಯವಾಗಿ ಹಲ್ವಾ ಕಾರ್ಯಕ್ರಮ ನಡೆಯುತ್ತದೆ.
ಈ ಕಾರ್ಯಕ್ರಮದ ಫೋಟೋವನ್ನು ಲೋಕಸಭಾ ಕಲಾಪದಲ್ಲಿ ಪ್ರದರ್ಶನ ಮಾಡಿದ ರಾಹುಲ್ ಗಾಂಧಿ, ಈ ಫೋಟೋವನ್ನು ಗಮನಿಸಿ. ಇದರಲ್ಲಿ ಇರುವ 20 ಅಧಿಕಾರಿಗಳ ಪೈಕಿ ಯಾರೊಬ್ಬರೂ ಹಿಂದುಳಿದ ವರ್ಗ, ದಲಿತ ಹಾಗೂ ಆದಿವಾಸಿ ಸಮುದಾಯಕ್ಕೆ ಸೇರಿದವರು ಇಲ್ಲ. ನಾನು ಬೇಕಿದ್ದರೆ ಅವರ ಹೆಸರುಗಳನ್ನೂ ಹೇಳಬಲ್ಲೆ ಎಂದರು. ಈ ವೇಳೆ ರಾಹುಲ್ ಗಾಂಧಿ ಅವರ ಮಾತಿನ ದಾಟಿಗೆ ನಿರ್ಮಲಾ ಸೀತಾರಾಮನ್ ಅವರು ಹಣೆ ಹಣೆ ಚಚ್ಚಿಕೊಂಡು, ತಮ್ಮ ಎರಡೂ ಕೈಗಳಿಂದ ಮುಖ ಮುಚ್ಚಿಕೊಂಡು ನಕ್ಕರು.
ಆ 20 ಮಂದಿಯಲ್ಲಿ ಒಬ್ಬ ದಲಿತ, ಒಬ್ಬ ಅಲ್ಪಸಂಖ್ಯಾತ ಅಷ್ಟೇ ಇದ್ದಾರೆ ಎಂದರು. ಆನಂತರ ನಿರ್ಮಲಾ ಸೀತಾರಾಮನ್ ನಕ್ಕಿದ್ದನ್ನೂ ಅಟ್ಯಾಕ್ ಮಾಡುತ್ತಿದ್ದಾರೆ.
ಅಗ್ನಿವೀರ್, ಸೈನಿಕರಲ್ಲಿಯೂ ಜಾತಿ ಹುಡುಕಿದ್ದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್, ಈಗ ಬಜೆಟ್ ಒಳಗೂ ಜಾತಿ ಹುಡುಕುತ್ತಿದೆ. ಅಂದಹಾಗೆ ಬಜೆಟ್ ಮಂಡನೆಗೆ ಮುನ್ನ ನಡೆಯುವ ಸಿದ್ಧತೆಗಳಲ್ಲಿ ಅಧಿಕಾರಿಗಳು ಸೀನಿಯಾರಿಟಿ ಆಧಾರದ ಮೇಲೆ ಇರುತ್ತಾರೆಯೇ ಹೊರತು, ಅದನ್ನು ನಿರ್ಧರಿಸುವುದು ಹಣಕಾಸು ಸಚಿವರಲ್ಲ.
ಸೈನಿಕರ ಜಾತಿ ಹುಡುಕೋಕೆ ಹೋದಾಗ ಸೈನ್ಯಾಧಿಕಾರಿಗಳು ʻನಿಮ್ಮ ರಾಜಕೀಯವನ್ನು ಇಲ್ಲಿಗೆ ತರಬೇಡಿʼ ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದರು. ಆದರೆ ಅಧಿಕಾರಿಗಳು ʻಆ ರೀತಿ ಹೇಳುವಂತಿಲ್ಲʼ. ಒಟ್ಟಿನಲ್ಲಿ ಕಾಂಗ್ರೆಸ್ ʻಜಾತಿಗಳ ಬುಡಗಳಲ್ಲಿ ಮತಗಳ ಬೇಟೆʼ ಮಾಡಲು ಹೊರಟಿರುವಂತಿದೆ.



