ಹಾಲಿನ ಬೆಲೆ ದುಬಾರಿಯಾಗಿದೆ. ಅರ್ಧ ಲೀಟರ್ ಹಾಲಿಗೆ 50 ಎಂಎಲ್ ಹೆಚ್ಚು ನೀಡಿ 2 ರೂ. ಹೆಚ್ಚು ಪಡೆಯುತ್ತಿದೆ ರಾಜ್ಯ ಸರ್ಕಾರ. ಒಂದು ಲೀಟರ್ ಹಾಲಿಗೂ ಕೂಡಾ ಅಷ್ಟೆ, 50 ಎಂಎಲ್ ಜಾಸ್ತಿ ಕೊಟ್ಟು, 2 ರೂ. ಜಾಸ್ತಿ ಪಡೀತಿದೆ. ಇದು ಬೆಲೆ ಏರಿಕೆ ಅನ್ನೋದು ನಿಜವಾದರೂ, ಇದು ಬೆಲೆ ಏರಿಕೆ ಅಲ್ಲ, ಹಾಲು ಜಾಸ್ತಿ ಕೊಟ್ಟು ಜಾಸ್ತಿ ಹಣ ಪಡೀತಿದ್ದೇವೆ ಅಷ್ಟೆ, ಇದು ರೈತರಿಗಾಗಿ ಎನ್ನುವ ಸಮರ್ಥನೆ ರಾಜ್ಯ ಸರ್ಕಾರದ್ದು. ಇಷ್ಟಕ್ಕೂ ರಾಜ್ಯದಲ್ಲಿ ಈಗಿನ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಗಿರುವ ಬೆಲೆ ಏರಿಕೆ ಎಷ್ಟು, ಯಾವ್ಯಾವ ವಿಭಾಗದಲ್ಲಿ ಎಷ್ಟೆಷ್ಟು ಬೆಲೆ ಏರಿಕೆ ಆಗಿದೆ ಅನ್ನೋದರ ಪಟ್ಟಿ ನೋಡುವುದಾದರೆ..
ವಿದ್ಯುತ್ ದರ ಏರಿಕೆ : ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ 2023ರ ಜೂನ್ ತಿಂಗಳಿಂದ ಅನ್ವಯವಾಗುವಂತೆ ಪ್ರತಿ ಯೂನಿಟ್ ವಿದ್ಯುತ್ ದರವನ್ನು 2 ರೂ. 89 ಪೈಸೆಗೆ ಹೆಚ್ಚಿಸಿತು.
ಇದು ಕಳೆದ ಬಿಜೆಪಿ ಸರ್ಕಾರವೇ ಮಾಡಬೇಕಿದ್ದ ನಿರ್ಧಾರ. ಬೆಲೆ ಏರಿಕೆ ಮಾಡದೇ ಕುಳಿತಿತ್ತು ಎಂದು ಹೇಳಿದ ಸರ್ಕಾರ, ಆಮೇಲೆ ಗೃಹಜ್ಯೋತಿ ಸ್ಕೀಂ ಜಾರಿಗೆ ತಂದಿತು.
ಮದ್ಯದ ಅಬಕಾರಿ ಸುಂಕ ಹೆಚ್ಚಳ : ಪ್ರತೀ ವರ್ಷದಂತೆ, ಬಜೆಟ್ಟಿನಲ್ಲಿಯೇ ಮದ್ಯದರ ಏರಿಕೆ ಮಾಡಿತ್ತು. ಶೇ.20ರಷ್ಟು ಅಬಕಾರಿ ಸುಂಕ ಹಾಗೂ ಬಿಯರ್ ಬೆಲೆಯನ್ನು ಶೇ.10ರಷ್ಟು ಏರಿಕೆ ಮಾಡಿತ್ತು. ಆದರೆ, ಸರ್ಕಾರ ಬೇರೆ ಬೇರೆ ರೀತಿಯ ಟ್ಯಾರಿಫ್ʻಗಳಲ್ಲಿ ಬೇರೆ ಬೇರೆ ಮದ್ಯದ ದರ ಏರಿಸಿದ್ದರಿಂದ.. ಕೆಲವು ಮದ್ಯದ ಬೆಲೆ ಏರಿಕೆ ಪ್ರಮಾಣ ಶೇ.20ಕ್ಕಿಂತ ಹೆಚ್ಚಿದ್ದರೆ, ಕೆಲವು ಕಡಿಮೆ ಇವೆ. ಒಟ್ಟಿನಲ್ಲಿ ಬೆಲೆ ಏರಿಕೆ ಸತ್ಯ.
ಕಮರ್ಷಿಯಲ್ ವಾಹನಗಳ ಸಾರಿಗೆ ಸೆಸ್ ಏರಿಕೆ : ಕಮರ್ಷಿಯಲ್ ವಾಹನಗಳ ಮೇಲಿನ ಟ್ರಾನ್ಸ್ʻಪೋರ್ಟ್ ಸೆಸ್ʻನ್ನು ಶೇ.3ರಷ್ಟು ಏರಿಕೆ ಮಾಡಿದೆ. ಕ್ಯಾಬ್, ಆಟೋರಿಕ್ಷಾ, ಲಾರಿ ಸೇರಿದಂತೆ ಎಲ್ಲ ಟ್ರಾನ್ಸ್ʻಪೋರ್ಟ್ ವೆಹಿಕಲ್ʻಗಳ ಮೇಲೆ ಶೇ.3ರಷ್ಟು ಸೆಸ್ ಹೆಚ್ಚುವರಿಯಾಗಿ ವಿಧಿಸಲಾಗಿದೆ.
ಆಸ್ತಿಗಳ ಮೇಲಿನ ಗೈಡೆನ್ಸ್ ವ್ಯಾಲ್ಯೂ ಏರಿಕೆ : ಆಸ್ತಿಗಳ ಕನಿಷ್ಠ ಮೌಲ್ಯ ಅಥವಾ ಗೈಡೆನ್ಸ್ ವ್ಯಾಲ್ಯೂ ಏರಿಕೆ ಮಾಡುವುದು. ಅಂದರೆ ಒಂದು ಜಾಗವನ್ನು ರಿಜಿಸ್ಟರ್ ಮಾಡಿಸಿಕೊಳ್ಳೋಕೆ ಕನಿಷ್ಠ ಮೊತ್ತಕ್ಕೆ ರಿಜಿಸ್ಟರ್ ಆಗಬೇಕಿರುತ್ತೆ. ಇದನ್ನು ಹೆಚ್ಚಿಸುವ ಮೂಲಕ ತೆರಿಗೆ ಹೆಚ್ಚಿಸಿತು ಸರ್ಕಾರ. ಬಹಳಷ್ಟು ಸಾರಿ ಹೆಚ್ಚಿನ ಮೌಲ್ಯಕ್ಕೆ ಖರೀದಿ ಮಾಡಿದರೂ, ರಿಜಿಸ್ಟ್ರಾರ್ ಪತ್ರದಲ್ಲಿ ಕಡಿಮೆ ಮೌಲ್ಯ ಬರೆಸಿ ಟ್ಯಾಕ್ಸ್ ತಪ್ಪಿಸುವ ಪರಿಪಾಠಕ್ಕೆ ಬ್ರೇಕ್ ಬಿತ್ತು.
ವಾಹನಗಳ ಲೈಫ್ ಟೈಂ ಟ್ಯಾಕ್ಸ್ ಏರಿಕೆ : ಒಂದು ವಾಹನ ಖರೀದಿ ಮಾಡಿದಾಗ ಅದಕ್ಕೆ ಲೈಫ್ ಟೈಂ ಟ್ಯಾಕ್ಸ್ ಕೂಡಾ ಸೇರುತ್ತದೆ. ಆದರೆ ಇದನ್ನು ಕಂತಿನಲ್ಲಿ ಕಟ್ಟಬಹುದು. ಆದರೆ ಈಗಿನ ಸರ್ಕಾರ ಆ ಲೈಫ್ ಟೈಂ ಟ್ಯಾಕ್ಸ್ʻನ್ನು ಒಟ್ಟಿಗೇ ಕಟ್ಟಬೇಕು ಎಂದು ಆದೇಶ ನೀಡಿತು. ಎಲೆಕ್ಟ್ರಿಕ್ ವಾಹನಗಳಿಗೆ ರಿಯಾಯಿತಿ ನೀಡಲಾಯಿತು. ಲಾರಿ, ಬಸ್ಸುಗಳ ಮಾಲೀಕರು ಪ್ರತಿಭಟನೆ ನಡೆಸಿದರೂ, ವಿನಾಯಿತಿಯೇನೂ ಸಿಗಲಿಲ್ಲ.
ಮುದ್ರಾಂಕ ಮತ್ತು ರಿಜಿಸ್ಟ್ರೇಷನ್ ಶುಲ್ಕ ಏರಿಕೆ : ಆಸ್ತಿಗಳ ಗೈಡೆನ್ಸ್ ವ್ಯಾಲ್ಯೂ ಹೆಚ್ಚಳ ಮಾಡಿದ್ದ ಸರ್ಕಾರ, ಮುದ್ರಾಂಕ ಮತ್ತು ರಿಜಿಸ್ಟ್ರೇಷನ್ ಶುಲ್ಕವನ್ನೂ ಏರಿಸಿತು. ಕನಿಷ್ಠರಿಂದ 2ರಿಂದ 6 ಪಟ್ಟು ಹೆಚ್ಚಳ ಮಾಡಲಾಯಿತು. ಅಂದರೆ ಈ ಮೊದಲು 20 ರೂ. ಸ್ಟಾಂಪ್ ಪೇಪರ್ʻನ್ನು 100 ರೂ.ಗೆ.. ಈ ಮಾದರಿಯಲ್ಲಿ ಏರಿಸಲಾಯ್ತು. ಬಾಡಿಗೆ ಕರಾರು ಪತ್ರ, ವಿಚ್ಚೇದನ ಪತ್ರ, ನೋಟರಿ ಪ್ರಮಾಣ ಪತ್ರ, ಹಕ್ಕು ಸ್ವಾಧೀನ ಪತ್ರ, ಬ್ಯಾಂಕ್ ಅಗ್ರಿಮೆಂಟ್ಸ್, ಅಡಮಾನ ಪತ್ರ, ನಗದೀಕರಣ ಪತ್ರ.. ಹೀಗೆ ಪ್ರತಿ ಪತ್ರಗಳ ಮೇಲಿನ ಶುಲ್ಕವನ್ನೂ ಹೆಚ್ಚಳ ಮಾಡಲಾಯಿತು.
ಬಿತ್ತನೆ ಬೀಜ ದರ ಏರಿಕೆ : ರೈತರಿಗೆ ಕಡಿಮೆ ದರದಲ್ಲಿ ಸಿಗುತ್ತಿದೆ ಬಿತ್ತನೆ ಬೀಜಗಳ ದರವನ್ನು ಶೇ.50ರಿಂದ ಶೇ.60ರಷ್ಟು ಏರಿಕೆ ಮಾಡಲಾಯ್ತು. ರಾಗಿ, ಭತ್ತ, ಜೋಳ, ಹತ್ತಿ, ಗೋಧಿ.. ಹೀಗೆ ಎಲ್ಲ ಬಿತ್ತನೆ ಬೀಜಗಳ ದರವೂ ಏರಿಕೆಯಾಯ್ತು. ಬರದಿಂದ ತತ್ತರಿಸಿದ್ದ ರೈತರಿಗೆ ಶಾಕ್ ಆಯ್ತು. ರೈತ ಸಂಘಟನೆಗಳ ಪ್ರತಿಭಟನೆಗೆ ಜಗ್ಗಲಿಲ್ಲ.
ಪೆಟ್ರೋಲ್/ಡೀಸೆಲ್ ದರ ಏರಿಕೆ : ಲೀಟರ್ ಪೆಟ್ರೋಲ್ʻಗೆ 3 ರೂ. ಹಾಗೂ ಡೀಸೆಲ್ʻಗೆ ಮೂರೂವರೆ ರೂಗಳಷ್ಟು ಹೆಚ್ಚಳ ಮಾಡಿತು ಸರ್ಕಾರ. ರಾಜ್ಯದ ಅಭಿವೃದ್ಧಿ ಯೋಜನೆಗಳು ಹಾಗೂ ಗ್ಯಾರಂಟಿ ಯೋಜನೆಗಳಿಗೆ ಹಣ ಬೇಕು ಎಂದು ಹೇಳಿದ ಸರ್ಕಾರ, ಈಗಲೂ ಕೂಡಾ ಕರ್ನಾಟಕದ ದರ ಬೇರೆ ರಾಜ್ಯಗಳಿಗಿಂತ ಕಡಿಮೆ ಇದೆ ಎಂದು ಸಮರ್ಥನೆ ಮಾಡಿಕೊಂಡಿತು.
ನಂದಿನಿ ಹಾಲಿನ ದರ : ಅರ್ಧ ಲೀಟರ್ ಹಾಗೂ ಒಂದು ಲೀಟರ್ ಹಾಲಿಗೆ 2 ರೂ. ಏರಿಕೆ ಮಾಡಿದೆ. 50 ಎಂಎಲ್ ಜಾಸ್ತಿ ಕೊಡ್ತಿದ್ದೇವೆ ಎನ್ನುವುದು ಸರ್ಕಾರದ ಸಮರ್ಥನೆ. ನೀವು ಕೊಡುವ ಹಣ ರೈತರಿಗೆ ಹೋಗುತ್ತೆ ಎನ್ನುವುದು ಸರ್ಕಾರದ ವಾದ.
ಇದುವರೆಗೆ ಒಟ್ಟು 9 ವಿಭಾಗಗಳಲ್ಲಿ ಬೆಲೆ ಏರಿಕೆ ಆಗಿದೆ. ಇನ್ನುಳಿದಂತೆ ಈಗಾಗಲೇ ಬೆಲೆ ಏರಿಕೆಯ ಸಾಧ್ಯತೆ ಇರುವ ಕ್ಷೇತ್ರಗಳೆಂದರೆ.. ಅವುಗಳಲ್ಲಿ ಮೊದಲನೆಯದ್ದು ಸಾರಿಗೆ ಬಸ್ ದರ.
ಬಸ್ ಟಿಕೆಟ್ ರೇಟ್ ಜಾಸ್ತಿಯಾಗುತ್ತಾ..?
ಪೆಟ್ರೋಲ್/ಡೀಸೆಲ್ ದರ ಏರಿಕೆಯಿಂದ ರಾಜ್ಯ ಸಾರಿಗೆ ಸಂಸ್ಥೆಗಳಿಗೆ ಪ್ರತಿದಿನ ಕೆಎಸ್‌ಆರ್‌ಟಿಸಿ ಬಸ್ಸುಗಳಿಗೆ (ಬಿಎಂಟಿಸಿ ಹೊರತುಪಡಿಸಿ) 6.2 ಲಕ್ಷ ಲೀಟರ್ ಡೀಸೆಲ್ ಬೇಕು. ಬಸ್ ಅಥವಾ ಕಿಲೋಮೀಟರ್ ಹೆಚ್ಚಿಸದೇ ಹೋದರೂ, ಇದರಿಂದಾಗಿ ಈಗ ಖರ್ಚಾಗುತ್ತಿರುವುದಕ್ಕಿಂತ ಪ್ರತಿದಿನ 18.5 ಲಕ್ಷ (ತಿಂಗಳಿಗೆ 5.5 ಕೋಟಿ, ವಾರ್ಷಿಕವಾಗಿ 65 ಕೋಟಿಗೂ ಹೆಚ್ಚು) ಹೆಚ್ಚು ಖರ್ಚಾಗಲಿದೆ. ಹೀಗಾಗಿ ಬಸ್ ಟಿಕೆಟ್ ದರ ಏರಿಕೆ ಅನಿವಾರ್ಯ.
ಆಟೋ ಮೀಟರ್ ದರ ಏರಿಕೆ ಸಾಧ್ಯತೆ :
ಈಗಾಗಲೇ ಆಟೋ/ಟ್ಯಾಕ್ಸಿ ಚಾಲಕರ ಸಂಘಟನೆಗಳು ಮಿನಿಮಮ್ ದರ ಏರಿಕೆಗೆ ಹಕ್ಕೊತ್ತಾಯ ಮಂಡಿಸಿವೆ. ಶೀಘ್ರದಲ್ಲೇ ಇವುಗಳ ದರವೂ ಹೆಚ್ಚುವುದರಲ್ಲಿ ಅನುಮಾನವೇನೂ ಇಲ್ಲ.
ಹೋಟೆಲ್ ಟೀ/ಕಾಫಿ/ತಿಂಡಿ ದರ :
ಒಂದು ಕಡೆ ಪೆಟ್ರೋಲ್/ಡೀಸೆಲ್ ದರ, ಮತ್ತೊಂದೆಡೆ ಹಾಲಿನ ದರ ಏರಿಕೆ ಬೆನ್ನಲ್ಲೇ ಹೋಟೆಲ್ ಮಾಲೀಕರು ದರ ಏರಿಕೆಗೆ ಒತ್ತಾಐ ಮಂಡಿಸುತ್ತಿದ್ದಾರೆ.
ಒಟ್ಟಿನಲ್ಲಿ ಒಂದಕ್ಕೊಂದು ಲಿಂಕ್ ಇದ್ದು, ಒಂದು ದರ ಹೆಚ್ಚಳವಾದರೆ, ಉಳಿದವುಗಳ ಬೆಲೆಯೂ ಹೆಚ್ಚುವುದರಲ್ಲಿ ಅನುಮಾನವಿಲ್ಲ.



