ಶಿವಣ್ಣ (Dr̤ Shiva Rajkuar) ಈಗಂತೂ ಸಿಕ್ಕಾಪಟ್ಟೆ ಬ್ಯುಸಿ. ಇದೀಗ ತಾನೇ ಘೋಸ್ಟ್ (Ghost) ರಿಲೀಸ್ ಆಗಿ ಒಂದು ಲೆವೆಲ್ಲಿಗೆ ಹಿಟ್ ಕೂಡಾ ಆಗಿದೆ. ಕೈತುಂಬಾ ಚಿತ್ರಗಳೂ ಇವೆ. ಪ್ರಭುದೇವ (Prabhudeva), ಉಪೇಂದ್ರ (Upendra), ಗಣೇಶ್ (Ganesh), ಡಾಲಿ ಧನಂಜಯ (Dolly Dhananjaya) ಜೊತೆಯಲ್ಲೆಲ್ಲ ಸಿನಿಮಾ ಮಾಡ್ತಿದ್ದಾರೆ. ತಮ್ಮದೇ ಪ್ರೊಡಕ್ಷನ್ ಹೌಸ್ ಸಿನಿಮಾದಲ್ಲೂ ಬ್ಯುಸಿ. ಹೊಸಬರು ಹಳಬರು ಎನ್ನದೆ ಕಥೆ ಇಷ್ಟವಾದರೆ ಎಲ್ಲರೊಂದಿಗೆ ಕೆಲಸಕ್ಕೆ ಸೈ ಎನ್ನೋ ಹೀರೋ ಶಿವ ರಾಜ್ ಕುಮಾರ್. ಇಂತಹ ಶಿವಣ್ಣ ಪರಭಾಷೆ ಚಿತ್ರಗಳಲ್ಲಿ ಸಂಚಾರ ಶುರು ಮಾಡಿದ್ಧಾರೆ.
ರಜನಿಕಾಂತ್ (Rajanikanth) ಜೊತೆ ಜೈಲರ್ (Jailor) ಚಿತ್ರದಲ್ಲಿ ನರಸಿಂಹ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಶಿವಣ್ಣ, ಸಖತ್ ಹವಾ ಎಬ್ಬಿಸಿದ್ದರು. ಇದೀಗ ಕಮಲ್ ಹಾಸನ್ ಚಿತ್ರದಲ್ಲೂ ನಟಿಸೋಕೆ ಸಿದ್ಧರಾಗಿದ್ಧಾರೆ.
ಉಳಗ ನಾಯಗನ್ ಕಮಲ್ ಹಾಸನ್ (Kamalhassan) ಹಾಗು ಮಣಿರತ್ನಂ (Manirathnam) ಕಾಂಬಿನೇಷನ್ನಲ್ಲಿ ಥಗ್ ಲೈಫ್ (Thug life) ಸಿನಿಮಾ ಬರ್ತಿದೆ. ಈ ಸಿನಿಮಾದ ಪ್ರಮುಕ ಪಾತ್ರವೊಂದಕ್ಕೆ ಶಿವಣ್ಣನೇ (Shivanna) ಬೇಕು ಅಂತ ಕೂತಿದ್ದಾರಂತೆ ನಟ ಕಮಲ್ ಹಾಸನ್. ಶಿವಣ್ಣ ಜೈಲರ್ನಲ್ಲಿ ನಟಿಸಿದ ಮೇಲೆ ಕಾಲಿವುಡ್ನಲ್ಲಿ ಶಿವಣ್ಣ ಕ್ರೇಜ್ ಹೆಚ್ಚಾಗಿದೆ. ಇದನ್ನ ಗಮನದಲ್ಲಿಟ್ಟುಕೊಂಡಿರೋ ಕಮಲ್ ಹಾಸನ್ ತನ್ನ ಸಿನಿಮಾದಲ್ಲೂ ಶಿವರಾಜ್ ಕುಮಾರ್ ನಟಿಸಲಿ ಅಂದಿದ್ದಾರಂತೆ. ಜೈಲರ್ ಸಿನಿಮಾದಲ್ಲಿ 11 ನಿಮಿಷ ಬರೋ ಶಿವಣ್ಣನ ನರಸಿಂಹ ಪಾತ್ರ, ರಜನಿ ಫ್ಯಾನ್ಸ್‌ಗೂ ಸಖತ್ ಇಷ್ಟವಾಗಿತ್ತು.
ಇನ್ನೂ ವಿಶೇಷ ಎಂದರೆ ಖುದ್ದು ಶಿವಣ್ಣ ಕಮಲ್ ಹಾಸನ್ ಅವರ ಅಭಿಮಾನಿ. ಈಗ ಕಮಲ್ ಸಿನಿಮಾದಲ್ಲೇ ಶಿವಣ್ಣ ಕಾಣಿಸಿಕೊಳ್ಳಬೇಕು ಅಂತ ಮಾತುಕತೆ ಕೂಡ ಮಾಡಿದ್ದಾರೆ. ಸಧ್ಯ ತಮಿಳಿನಲ್ಲಿ ಧನುಷ್ ಜೊತೆ ಶಿವಣ್ಣ ನಟಿಸಿರೋ ಕ್ಯಾಪ್ಟರ್ ಮಿಲ್ಲರ್ ಸಿನಿಮಾ ಬಿಡುಗಡೆ ಆಗಬೇಕಿದೆ. ಧನುಶ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾವು ಪಕ್ಕಾ ಆಕ್ಷನ್ ಕತೆಯುಳ್ಳದ್ದಾಗಿದ್ದು ಸಿನಿಮಾದ ಕೆಲವು ಪೋಸ್ಟರ್ಗಳು ಮಾತ್ರವೇ ಈ ವರೆಗೆ ಬಿಡುಗಡೆ ಆಗಿದ್ದವು. ಪೋಸ್ಟರ್ಗಳಲ್ಲಿ ಬಂದೂಕು ಹಿಡಿದು ಖಡಕ್ ಲುಕ್ನಲ್ಲಿ ಶಿವರಾಜ್ ಕುಮಾರ್ ಕಾಣಿಸಿಕೊಂಡಿದ್ದು, ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆ ಹುಟ್ಟಿಸಿದೆ.
ಈ ಹಿಂದೆ ಹರಿದಾಡಿದ ಕೆಲವು ಸುದ್ದಿಗಳ ಪ್ರಕಾರ, ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದ ಶೂಟಿಂಗ್ ಈಗಾಗಲೇ ಮುಗಿದಿದೆ, ಆದರೆ ಬಿಡುಗಡೆ ದಿನಾಂಕವನ್ನು ಉದ್ದೇಶಪೂರ್ವಕವಾಗಿ ತಡಮಾಡಲಾಗಿದೆ ಎನ್ನಲಾಗುತ್ತಿತ್ತು, ಅದಕ್ಕೆ ಮುಖ್ಯ ಕಾರಣ ಕಾವೇರಿ ವಿವಾದ ಎಂಬ ಸುದ್ದಿಯೂ ಹರಿದಾಡುತ್ತಿತ್ತು. ಆದರೆ ಇದೀಗ ಕೊನೆಗೂ ಅಧಿಕೃತವಾಗಿ ಸಿನಿಮಾ ದಿನಾಂಕ ಘೋಷಣೆ ಮಾಡಲಾಗಿದೆ.
ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗುತ್ತದೆ ಎಂದು ನಿರೀಕ್ಷಿಸಲಾಗಿದ್ದ ‘ಕ್ಯಾಪ್ಟನ್ ಮಿಲ್ಲರ್’ (Captain miller) ಸಿನಿಮಾವನ್ನು 2024ರ ಸಂಕ್ರಾಂತಿಗೆ ಬಿಡುಗಡೆ ಮಾಡಲಾಗುತ್ತಿದೆ. ಅಂದರೆ ಜನವರಿ 15ಕ್ಕೆ ಅಥವಾ 14 ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾದ ಬಿಡುಗಡೆ ದಿನಾಂಕವನ್ನು ನಿರ್ಮಾಣ ಸಂಸ್ಥೆಯಾದ ಸತ್ಯಜ್ಯೋತಿ ಫಿಲಮ್ಸ್ ಘೋಷಣೆ ಮಾಡಿದೆ. ಸಿನಿಮಾವನ್ನು ಅರುಣ್ ಮತ್ತೇಶ್ವರನ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಧನುಶ್̈(Dhanush), ಶಿವರಾಜ್ ಕುಮಾರ್ ಜೊತೆಗೆ ಪ್ರಿಯಾಂಕಾ ಅರುಲ್ ಮೋಹನ್, ಜಾನ್ ಕೊಕ್ಕೆನ್, ನಾಸರ್ ಇನ್ನೂ ಕೆಲವು ಉತ್ತಮ ನಟರಿದ್ದಾರೆ.



