ಲಿಂಗಾಯತರ ಒಂದು ವರ್ಗ ಸಿದ್ಧರಾಮಯ್ಯ ವಿರುದ್ಧ ಕೆಂಡ ಕಾರುತ್ತಿದೆ. ಮತ್ತೊಂದು ವರ್ಗಕ್ಕೆ ಸಿದ್ಧರಾಮಯ್ಯ ಡಾರ್ಲಿಂಗ್. ವೀರಶೈವರೇ ಬೇರೆ.. ಲಿಂಗಾಯತರೇ ಬೇರೆ ಎನ್ನುತ್ತಿರುವವರ ಜೊತೆ ನಿಂತಿರುವ ಸಿದ್ಧರಾಮಯ್ಯ, ನಾವೇ ಸಪರೇಟು.. ಎನ್ನುವ ವೀರಶೈವರ ಜೊತೆಯಲ್ಲಿ ಇಲ್ಲ. ವೀರಶೈವ, ಲಿಂಗಾಯತ.. ಇಬ್ಬರೂ ಒಂದೇ ಎನ್ನುವವರ ಜೊತೆಯಲ್ಲೂ ಇಲ್ಲ. ವೀರಶೈವ ಲಿಂಗಾಯತರು ಹಿಂದೂಗಳೇ. ಬಸವಣ್ಣ ಪರಿವರ್ತಕ ಎನ್ನುವ ಒಂದು ವರ್ಗ ಇದೆ. ಅವರ ಜೊತೆಯಲ್ಲೂ ಇಲ್ಲ. ಲಿಂಗಾಯತರೂ ಕೂಡ ಹಿಂದೂ ಧರ್ಮದ ಭಾಗ ಎನ್ನುವವರನ್ನು ಸಿದ್ಧರಾಮಯ್ಯ ಹತ್ತಿರಕ್ಕೆ ಬಿಟ್ಟುಕೊಳ್ಳಲ್ಲ. ಇದು ಲಿಂಗಾಯತರದ್ದಾಯ್ತು. ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಆಗ್ರಹಿಸುತ್ತಿರುವವರೂ ಅಷ್ಟೇ..ʻಬಸವ ಸಂಸ್ಕೃತಿʼ ಸಮಾವೇಶಕ್ಕೆ ಹೋಗಿ ಆ ವರ್ಗದ ಪ್ರೀತಿ ಗಿಟ್ಟಿಸಿದ್ಧ ಸಿದ್ಧರಾಮಯ್ಯ ಅವರಿಗೆ, ಅದನ್ನು ವಿರೋಧಿಸುವ ಇನ್ನೊಂದು ಬೃಹತ್ ವರ್ಗವನ್ನು ಎದುರು ಹಾಕಿಕೊಂಡಿರುವುದು ಅರಿವಾಗಿದೆ.
ಈ ನಡುವೆಯೇ.. ಸಿದ್ಧರಾಮಯ್ಯ ಕುರುಬ ಮತ್ತು ವಾಲ್ಮೀಕಿ ಸಮುದಾಯದ ವಿರೋಧವನ್ನೂ ಎದುರಿಸುವಂತಾಗಿದೆ. ಅದಕ್ಕೆ ಸಾಕ್ಷಿಯಾಗಿರುವುದು ವಿಧಾನಸೌಧದಲ್ಲಿಯೇ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮ. ಕುರುಬ ಸಮುದಾಯವನ್ನು ಎಸ್‌ಟಿ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ವಿಎಸ್ ಉಗ್ರಪ್ಪ ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸಿದರೆ ಸುಮ್ಮನ ಇರುವುದಿಲ್ಲ ಎಂದು ಸಿಎಂ ಎದುರೇ ಗುಡುಗಿದ್ದಾರೆ. ಅಂದಹಾಗೆ ಉಗ್ರಪ್ಪ ಅವರೂ ಸಿದ್ಧರಾಮಯ್ಯ ಅವರ ಬಣದಲ್ಲೇ ಇದ್ದವರು. ಇರುವವರು. ಅವರೇ ಸಿಎಂ ವಿರುದ್ಧ ಗರಂ ಆಗಿದ್ದಾರೆ.
ʻʻಸಿದ್ದರಾಮಯ್ಯ ನವರೇ, ನಮ್ಮ ತಟ್ಟೆಯನ್ನು ಕಿತ್ತುಕೊಳ್ಳೋಕೆ ಹೋಗಬೇಡಿ. ನಮ್ಮ ಜೊತೆ ಸಹಪಂಥಿಯಲ್ಲಿ ಕೂರಬೇಕಾದರೆ ಕುಲಶಾಸ್ತ್ರೀಯ ಅಧ್ಯಯನ ಮಾಡಿಸಿ. ಕುರುಬರನ್ನು ಎಸ್‌ಟಿಗೆ ಸೇರಿಸಿದರೆ ಸುಮ್ಮನೆ ಇರುವುದಿಲ್ಲ. ಕೇಂದ್ರ ಸರ್ಕಾರವನ್ನು ಒತ್ತಾಯ ಮಾಡುತ್ತೇನೆ. 14 ಪರ್ಸೆಂಟ್ ಮೀಸಲಾತಿ ಮಾಡಿದರೆ ನಮಗೇನು ಅಭ್ಯಂತರವಿಲ್ಲ. ನಮಗೂ ರಾಜಕೀಯ ಮೀಸಲಾತಿ ಬೇಕು. ನಿಮಗೆ ಕೈ ಮುಗಿತ್ತೀನಿ. ಎಷ್ಟು ವರ್ಷ ಆದರೂ ನೀವು ಕೂಡಾ ಮುಂದೊಂದು ದಿನ ಮಾಜಿ ಆಗಲೇಬೇಕು. ನಮ್ಮ ತಟ್ಟೆಗೆ ಕೈ ಹಾಕಿದರೆ, ಜನರ ಜೊತೆಯಲ್ಲಿ ನಿಂತು ಹೋರಾಟ ಮಾಡುತ್ತೇವೆʼʼ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಇಷ್ಟಾಗುತ್ತಿದ್ದಂತೆಯೇ ಜಾಗೃತರಾದ ಸಿದ್ಧರಾಮಯ್ಯ ʻಕುರುಬರನ್ನು ವಾಲ್ಮೀಕಿ ಸಮುದಾಯಕ್ಕೆ ಸೇರಿಸುವಂತೆ ಹೋರಾಟ ಮಾಡಿದ್ದು ಬಿಜೆಪಿಯಲ್ಲಿದ್ದ ಈಶ್ವರಪ್ಪ. ಕುರುಬರನ್ನು ಪರಿಶಿಷ್ಟ ಜಾತಿ (ಎಸ್‌ಟಿ) ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದು ಬೊಮ್ಮಾಯಿ ಸರ್ಕಾರ. ಶಿಫಾರಸ್ಸಿನ ಬಗ್ಗೆ ಕೆಲವು ಸ್ಪಷ್ಟನೆಗಳನ್ನು ಕೇಂದ್ರ ಸರ್ಕಾರ ಕೇಳಿದೆ. ಅದಷ್ಟೇ ನಮ್ಮೆದುರಿಗಿದೆ ʼʼ ಎಂದು ನುಣುಚಿಕೊಳ್ಳುವ ಪ್ರಯತ್ನ ಮಾಡಿದರು.
ಇತ್ತ ಕುರುಬ ಸಮುದಾಯದ ಕೆಲವರಲ್ಲಿ ಎಸ್‌ಟಿಗೆ ಸೇರಿಸುವುದರ ಬಗ್ಗೆ ಅಸಮಾಧಾನವಿದೆ. ನಾಯಕರು ಒಂದು ಕಡೆ ಹೋರಾಟ ಮಾಡುತ್ತಿದ್ದರೂ, ಏಕೆ.. ಹೇಗೆ.. ಎಂಬ ಬಗ್ಗೆ ಸಮುದಾಯದವರಿಗೆ ಮಾಹಿತಿಯೇ ಇರುವುದಿಲ್ಲ. ಹೀಗಾಗಿ ಕುರುಬ ಸಮುದಾಯದವರಲ್ಲಿ ಇರುವ ಮೀಸಲಾತಿಯೂ ಹೋದರೆ.. ಮುಂದೇನೋ.. ಹೇಗೋ.. ಎಂಬ ಆತಂಕ ಮೂಡಿದೆ. ಒಟ್ಟಿನಲ್ಲಿ ಸಿದ್ಧರಾಮಯ್ಯ ಮತ್ತೆ ಮತ್ತೆ ಇರಲಾರದೆ ಇರುವೆ ಬಿಟ್ಟುಕೊಳ್ಳುತ್ತಿದ್ದಾರೆ.



