ಸಾಯಿಕುಮಾರ್ ಅವರ ಸಹೋದರ ರವಿಶಂಕರ್ ಅವರ ವೃತ್ತಿ ಜೀವನದ ಟರ್ನಿಂಗ್ ಪಾಯಿಂಟ್ ಕೆಂಪೇಗೌಡ. ಅದ್ಭುತ ನಟನಾ ಕೌಶಲ್ಯ ಇದ್ದರೂ.. ಅವಕಾಶ ಸಿಗದೆ ಪರದಾಡುತ್ತಿದ್ದ ರವಿಶಂಕರ್ ಅವರಿಗೆ ಕೆಂಪೇಗೌಡ ಚಿತ್ರದಲ್ಲಿ ಮುಖ್ಯ ವಿಲನ್ ಪಾತ್ರ ಕೊಟ್ಟಿದ್ದರು ಸುದೀಪ್. ಅದಾದ ನಂತರ ಆರ್ಮುಗಂ ಕ್ಯಾರೆಕ್ಟರ್ ಅದ್ಯಾವ ಮಟ್ಟಿಗೆ ಜನಪ್ರಿಯವಾಯಿತು ಎಂದರೆ.. ಅದರ ಲೆವೆಲ್ಲೇ ಬೇರೆ. ಅದಾದ ನಂತರ ರವಿಶಂಕರ್.. ತಾನು ಕೇವಲ ವಿಲನ್ ಮಾತ್ರ ಅಲ್ಲ.. ಕಾಮಿಡಿಗೂ ಸೈ.. ಭಾವಾಭಿನನಯಕ್ಕೂ ಸೈ.. ಕಣ್ಣೀರು ಕೂಡಾ ಹಾಕಿಸ್ತೇನೆ ಅನ್ನೋದನ್ನ ಸಾಬೀತು ಪಡಿಸಿದ್ದಾಗಿದೆ. ಈಗ ತಮ್ಮ ವಿಲನ್ ಆಗಿದ್ದ ಹೀರೋ ಎದುರು ಅಣ್ಣ ಸಾಯಿಕುಮಾರ್ ಕೂಡಾ ವಿಲನ್ ಆಗೋಕೆ ಬರ್ತಿದ್ದಾರೆ. ಕಿಚ್ಚ ಸುದೀಪ್ ಅಭಿನಯದ ಬಿಲ್ಲ ರಂಗ ಬಾಷಾ ಚಿತ್ರದ ಒಂದೊಂದೇ ಅಪ್ ಡೇಟ್ ಲಭ್ಯವಾಗುತ್ತಿದೆ.
BRBಯಲ್ಲಿ ಸುದೀಪ್ ಎದುರು ವಿಲನ್ ಆಗಿ ನಟಿಸುತ್ತಿರುವುದು ಡೈಲಾಗ್ ಕಿಂಗ್ ಸಾಯಿಕುಮಾರ್. ಬಿಲ್ಲ ರಂಗ ಭಾಷ ಚಿತ್ರದ ಬಗ್ಗೆ ಇಡೀ ಚಿತ್ರರಂಗವೇ ಕುತೂಹಲದಿಂದ ಕಾಯುತ್ತಿದೆ. ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಅವರಿಗೆ ಸಾಯಿಕುಮಾರ್ ಹೊಸಬರಲ್ಲ.
ವಿಶೇಷ ಎಂದರೆ.. ಸಾಯಿಕುಮಾರ್ ಕಂಬ್ಯಾಕ್ ಮಾಡಿದ್ದೇ ರಂಗಿತರಂಗ ಚಿತ್ರದ ಮೂಲಕ. ಹೀರೋ ಆಗಿ ಮಾರ್ಕೆಟ್ ಕುಸಿದಿದ್ದ ಸಂದರ್ಭದಲ್ಲಿ ರಂಗಿತರಂಗ ಚಿತ್ರದ ಮೂಲಕ ವಿಲನ್ ಆಗಿ ಗೆದ್ದ ಸಾಯಿಕುಮಾರ್, ಆನಂತರ ಪೋಷಕ ಪಾತ್ರಗಳು, ವಿಲನ್ ಪಾತ್ರಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿ ಬಿಟ್ಟರು.
ಹೀಗಾಗಿ ಆ ರಂಗಿತರಂಗದ ಬಾಂಧವ್ಯ ಈಗ ಬಿಲ್ಲ ರಂಗ ಭಾಷ ಚಿತ್ರದಲ್ಲೂ ಕಂಟಿನ್ಯೂ ಆಗುತ್ತಿದೆ. ರಂಗಿತರಂಗದ ವಿಲನ್ ಕ್ಯಾರೆಕ್ಟರ್ ಸಾಯಿ ಕುಮಾರ್ ಅವರಿಗೆ ಹೊಸ ಇಮೇಜ್ ಸೃಷ್ಟಿಸಿಕೊಟ್ಟಿತ್ತು.
ವಿಶೇಷ ಎಂದರೆ ಸಾಯಿಕುಮಾರ್ ಅವರ ಪ್ರೀತಿಯ ತಮ್ಮ ರವಿಶಂಕರ್ ಅವರಿಗೆ ಆರ್ಮುಗಂ ಪಾತ್ರ ಕೊಟ್ಟವರು ಸುದೀಪ್. ಕೆಂಪೇಗೌಡ ಚಿತ್ರವನ್ನು ರವಿಶಂಕರ್ ಮರೆಯೋದೇ ಇಲ್ಲ. ಇದೀಗ ಅಣ್ಣ ಸಾಯಿಕುಮಾರ್, ಸುದೀಪ್ ಎದುರು ವಿಲನ್ ಆಗಿ ಅಬ್ಬರಿಸುತ್ತಿದ್ದಾರೆ. ಅಂದಹಾಗೆ ಇದೇ ಮೊದಲ ಬಾರಿಗೆ ಸಾಯಿ-ಸುದೀಪ್ ಒಂದಾಗುತ್ತಿದ್ದಾರೆ.
ಸುದೀಪ್ ಅವರಿಗೆ ಆಕಸ್ಮಿಕವಾಗಿ ಫ್ಲೈಟ್ʻನಲ್ಲಿ ಸಿಕ್ಕಿದ್ದ ಸಾಯಿ ಕುಮಾರ್ ನಿಮ್ಮ ಜೊತೆ ಕೆಲಸ ಮಾಡೋ ಆಸೆ ಇದೆ ಅನ್ನೋದನ್ನ ಹೇಳಿಕೊಂಡಿದ್ರಂತೆ. ಕೆಲವೇ ದಿನಗಳಲ್ಲಿ ಅನೂಪ್ ಭಂಡಾರಿ ಅವರ ಮೂಲಕ ಬಿಲ್ಲ ರಂಗ ಭಾಷಾ ಚಿತ್ರಕ್ಕೆ ಕಾಲ್ ಹೋಗಿದೆ. ಸಾಯಿಕುಮಾರ್ ಓಕೆ ಎಂದಿದ್ದಾರೆ.
ಸಾಯಿಕುಮಾರ್ ಅವರು ಸುದೀಪ್ ಎದುರು ವಿಕ್ರಾಂತ್ ರೋಣ ಚಿತ್ರದಲ್ಲೇ ನಟಿಸಬೇಕಿತ್ತಂತೆ. ಯಾವಾಗ ಚಿತ್ರದ ಹೀರೋ ಆಗಿ ಸುದೀಪ್ ಎಂಟ್ರಿ ಕೊಟ್ಟರೋ.. ಆಗ ಕಥೆ, ಚಿತ್ರಕಥೆ ಚೇಂಜ್ ಆಗಿ ಸಾಯಿಕುಮಾರ್ ಅವರೇ ಹೊರಹೋಗಬೇಕಾಯ್ತು. ಆದರೆ, ಸುದೀಪ್ ಮತ್ತು ಸಾಯಿಕುಮಾರ್ ಇಬ್ಬರಿಗೂ ತಾವಿಬ್ಬರೂ ಒಟ್ಟಿಗೇ ನಟಿಸಬೇಕು ಎಂಬ ಆಸೆಯಿತ್ತು. ಅದೀಗ ಈಡೇರುತ್ತಿದೆ.



