ಸರ್ಕಾರದ ಸಂಸ್ಥೆಗಳು ರೈತರು, ಕಾರ್ಮಿಕರಿಗೆ ಸಹಕಾರಿಯಾಗುವ ಹಲವು ಯೋಜನೆ ಮಾಡುತ್ತಾರೆ. ಅಂತಹದ್ದರಲ್ಲಿ ಒಂದು ಕೆಎಂಎಫ್. ಈ ಕೆಎಂಎಫ್ ಗೆದ್ದರೆ ಕರ್ನಾಟಕದ ಹೈನು ಉದ್ದಿಮೆದಾರರು ಗೆಲುತ್ತಾರೆ. ರೈತರು ಗೆಲ್ಲುತ್ತಾರೆ. ಅಂತಹ ನಂದಿನಿ ಬ್ರಾಂಡ್ʻಗೆ ಈಗ ಶಿವಣ್ಣ ರಾಯಭಾರಿ.
ಕರ್ನಾಟಕ ಹಾಲು ಒಕ್ಕೂಟವಾದ ನಂದಿನಿ ಬ್ರಾಂಡ್‌ನ ಹೊಸ ಉತ್ಪನ್ನಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಂದಿನ ಮೊಸರು, ನಂದಿನಿ ಎಮ್ಮೆ ಹಾಲು ಮತ್ತಿತರ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದಾರೆ. ಇದರ ಜೊತೆಗೆ ನಂದಿನಿ ಉತ್ಪನ್ನಗಳ ಜಾಹೀರಾತು ಕೂಡಾ ಬಿಡುಗಡೆಯಾಗಿದೆ. ನಂದಿನಿ ಉತ್ಪನ್ನಗಳಿಗೆ ಶಿವಣ್ಣ ರಾಯಭಾರಿಯಾಗುತ್ತಿರುವ ಸುದ್ದಿ ಹಳೆಯದಾಗಿದ್ದರೂ, ಈಗ ಜಾಹೀರಾತು ಕೂಡಾ ರಿಲೀಸ್ ಆಗಿದೆ.
ನಂದಿನಿ ಜಾಹೀರಾತಿನಲ್ಲಿ ಡಾ.ರಾಜ್ ಮತ್ತು ಪುನೀತ್ ಅವರ ಭಾವಚಿತ್ರಗಳೂ ಕಾಣಿಸುತ್ತವೆ. ಇದು ಜಾಹೀರಾತಿನ ವಿಷಯವಾದರೆ ಇದೇ ವೇಳೆ ನಂದಿನಿಯ ಹೊಸ ಉತ್ಪನ್ನಗಳನ್ನೂ ಶಿವಣ್ಣ ಬಿಡುಗಡೆ ಮಾಡಿದ್ಧಾರೆ. ಜೊತೆಯಲ್ಲಿ ಸಚಿವ ಮಧು ಬಂಗಾರಪ್ಪ, ಗೀತಾ ಶಿವರಾಜ್ ಕುಮಾರ್, ಕೆ.ಎಂ.ಎಫ್ ಅಧ್ಯಕ್ಷ ಭೀಮಾ ನಾಯ್ಕ್ ಮೊದಲಾದವರೆಲ್ಲ ಇದ್ದರು.
ಡಾ.ರಾಜ್ ಕುಟುಂಬ ಹಾಗೂ ಕೆಎಂಎಫ್‌ಗೆ ಹತ್ತಿರದ ನಂಟಿದೆ. 1996ರಲ್ಲಿ ಡಾ.ರಾಜ್ ಕುಮಾರ್ ಅವರು ನಂದಿನಿ ಉತ್ಪನ್ನಗಳಿಗೆ ಉಚಿತವಾಗಿಯೇ ರಾಯಭಾರಿಯಾಗಲು ಒಪ್ಪಿಕೊಂಡಿದ್ದರು. ಅದು ಅವರ ಮೊದಲ ಜಾಹೀರಾತು ಆಗಿತ್ತು. ಅವರ ನಂತರ 2009ರಲ್ಲಿ ಪುನೀತ್ ರಾಜಕುಮಾರ್ ಆಯ್ಕೆಯಾಗಿದ್ದರು. ಇದೀಗ ಶಿವರಾಜ್ ಕುಮಾರ್ ಅವರು ರಾಯಭಾರಿಯಾಗಿ ನೇಮಕವಾಗಿದ್ದಾರೆ. ಅಂದಹಾಗೆ ಶಿವಣ್ಣ ಕೂಡಾ ನಂದಿನಿಯ ಪ್ರಚಾರಕ್ಕೆ ಹಣ ತೆಗೆದುಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.
ಜನೋಪಯೋಗಿ ಕೆಲಸಗಳಿಗೆ ಹಣ ತೆಗೆದುಕೊಳ್ಳಬಾರದು ಎನ್ನುವುದು ಡಾ.ರಾಜ್ ಹಾಕಿಕೊಟ್ಟಿರುವ ಸಂಪ್ರದಾಯ. ಈಗ ಅದೇ ಹಾದಿಯಲ್ಲಿ ಹಲವರು ನಡೆಯುತ್ತಿದ್ದಾರೆ. ನಟ ದರ್ಶನ್ ಪರಿಸರ ಇಲಾಖೆಗೆ ರಾಯಭಾರಿ. ಹಣ ತೆಗೆದುಕೊಳ್ಳಲ್ಲ. ಡಾಲಿ ಧನಂಜಯ ಲಿಡ್ಕರ್ ಸಂಸ್ಥೆಗೆ ರಾಯಭಾರಿ. ಹಣ ತೆಗೆದುಕೊಂಡಿಲ್ಲ. ಖಾಸಗಿ ಸಂಸ್ಥೆ, ಉತ್ಪನ್ನಗಳ ಜಾಹೀರಾತು ಬೇರೆ. ಅವುಗಳಿಗೆ ಹಣ ತೆಗೆದುಕೊಂಡೇ ನಟಿಸಬೇಕು. ಆದರೆ ಇಂತಹ ಕೆಲಸಗಳಿಂದ ಸಂಸ್ಥೆಗಳು ಉಳಿದು ಬೆಳೆದರೆ, ಅದರ ಲಾಭವಾಗುವುದು ಆ ಉದ್ಯಮ, ಸಂಸ್ಥೆಗಳನ್ನೇ ನಂಬಿಕೊಂಡಿರುವ ರೈತರಿಗೆ. ಕಾರ್ಮಿಕರಿಗೆ. ಇನ್ನು ಶಿವಣ್ಣ ಕೂಡಾ ಈ ರೀತಿ ಉಚಿತವಾಗಿ ಪ್ರಚಾರ ಮಾಡುತ್ತಿರುವುದು ನಂದಿನಿಗೆ ಹೊಸತು. ಆದರೆ ಈ ಹಿಂದೆಯೂ ಶಿವಣ್ಣ ಇಂತಹ ಜನೋಪಯೋಗಿ ಕೆಲಸಗಳಿಗೆ ಹಣ ತೆಗೆದುಕೊಂಡಿಲ್ಲ.



