ಮೊದಲಿಗೆ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಕೇಸ್‌ಗೆ ಸಂಬಂಧಪಟ್ಟಂತೆ ಅಮಾಯಕರನ್ನು ಕೈಬಿಡಿ ಎಂದು ತನ್ವೀರ್ ಸೇಠ್ ಪತ್ರ ಬರೆದಿದ್ದರು. ಅದೇ ದೊಡ್ಡ ಸುದ್ದಿಯಾಗಿತ್ತು. ಕ್ರಿಮಿನಲ್ ಕೇಸ್‌ನ್ನು ಅದು ಹೇಗೆ ಬಿಡ್ತಾರೆ ಅನ್ನೋ ಚರ್ಚೆ ಚಾಲ್ತಿಯಲ್ಲಿರೋವಾಗ್ಲೇ ಗೃಹ ಸಚಿವ ಪರಮೇಶ್ವರ್ ಸಂಪುಟ ಉಪಸಮಿತಿಗೆ ವರ್ಗಾಯಿಸಿದ್ದರು. ಇದೀಗ ಹುಬ್ಬಳ್ಳಿ ಗಲಭೆ ಕೇಸಿನಲ್ಲೂ ಇಂತಹುದೇ ಪ್ರಯತ್ನ ನಡೆದಿರುವುದು ಬೆಳಕಿಗೆ ಬಂದಿದೆ. ಈ ಬಾರಿ ಪತ್ರ ಬರೆದಿರುವುದು ಡಿಸಿಎಂ ಡಿಕೆ ಶಿವಕುಮಾರ್. ತನ್ವೀರ್ ಸೇಠ್ ಅವರು ತಮ್ಮ ಪತ್ರದಲ್ಲಿ ಅಮಾಯಕರನ್ನು ಕೈಬಿಡಿ ಎಂದು ಪತ್ರ ಬರೆದಿದ್ದರೆ, ಡಿಸಿಎಂ ಡಿಕೆ ಶಿವಕುಮಾರ್ ಎಲ್ಲ ಆರೋಪಿಗಳನ್ನೂ ಖುಲಾಸೆಗೊಳಿಸಿ ಎಂದು ಪತ್ರ ಬರೆದಿದ್ದಾರೆ.
ಡಿಕೆಶಿ ಅವರ ಪತ್ರ ಆಧರಿಸಿ ಪ್ರಕರಣದ ಮಾಹಿತಿಯನ್ನು ಸಲ್ಲಿಸುವಂತೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಿಗೆ ಎಡಿಜಿಪಿ ಸೂಚಿಸಿದ್ದಾರೆ. ಪ್ರಕರಣ ಹಿಂಪಡೆಯುವ ಬಗ್ಗೆ ದಾಖಲೆ ಸಹಿತ ಅಭಿಪ್ರಾಯವನ್ನು ಕೇಳಿದ್ದು, ಸೆಪ್ಟೆಂಬರ್ 30ರೊಳಗೆ ಪ್ರಕರಣದ ಪೂರ್ಣ ವಿವರವನ್ನು ನೀಡುವಂತೆ ಸೂಚನೆ ನೀಡಲಾಗಿತ್ತು. ಪ್ರಕರಣದ ಎಫ್ಐಆರ್, ಚಾರ್ಜ್‌ಶೀಟ್, ಸಾಕ್ಷಿಗಳ ಹೇಳಿಕೆಯನ್ನು ಸಲ್ಲಿಸಲಾಗಿದೆ.
ಏನಿದು ಹುಬ್ಬಳ್ಳಿ ಗಲಭೆ ಪ್ರಕರಣ?
ಮಸೀದಿ ಮೇಲೆ ಭಗವಾಧ್ವಜ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಕ್ಕೆ ಏಪ್ರಿಲ್ 16, 2022ರಂದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಎದುರು ಗಲಭೆ ನಡೆದಿತ್ತು. ಸಾವಿರಾರು ಮುಸ್ಲಿಮರು ಪೊಲೀಸ್ ಠಾಣೆ ಮುಂದೆ ಸೇರಿ ಗಲಾಟೆ ನಡೆಸಿದ್ದರು. ಈ ವೇಳೆ ಪೊಲೀಸ್ ಠಾಣೆ, ಆಸ್ಪತ್ರೆ, ದೇವಸ್ಥಾನ, ಮನೆಗಳ ಮೇಲೆ ಕಲ್ಲು ತೂರಾಟ ಕೂಡ ನಡೆದಿತ್ತು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಎಫ್‌ಐಆರ್ ದಾಖಲಾಗಿದ್ದು, 158 ಮಂದಿಯನ್ನು ಬಂಧಿಸಲಾಗಿತ್ತು. ಬರೋಬ್ಬರಿ 4 ಸಾವಿರ ಪುಟಗಳ ಚಾರ್ಜ್‌ಶೀಟ್ ಕೂಡ ಸಲ್ಲಿಕೆಯಾಗಿದೆ. ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಎಐಎಂಐಎಂ ಕಾರ್ಪೋರೇಟರ್ ನಜೀರ್ ಹೊನ್ಯಾಳ ಸೇರಿ 7 ಬಾಲಾಪರಾಧಿಗಳಿಗೆ ಜಾಮೀನು ಸಿಕ್ಕಿದೆ. ಉಳಿದ 151 ಆರೋಪಿಗಳು ಬಳ್ಳಾರಿ ಹಾಗೂ ಕಲಬುರಗಿ ಜೈಲಿನಲ್ಲಿದ್ದಾರೆ. ಉಳಿದವರನ್ನು ಪ್ರಕರಣದಿಂದ ಕೈಬಿಡುವಂತೆ ಡಿಸಿಎಂ ಡಿಕೆ ಶಿವಕುಮಾರ್ ಪತ್ರ ಬರೆದಿದ್ದಾರೆ.
ಸಹಜವಾಗಿಯೇ ಬಿಜೆಪಿ ಕೆರಳಿ ನಿಂತಿದೆ. ಮುಸ್ಲಿಮರು ಕಾನೂನು ಉಲ್ಲಂಘಿಸಿ ಗಲಭೆ ಮಾಡುವುದು ಹಾಗೂ ಅವರನ್ನು ಕೇಸಿನಿಂದ ಮುಕ್ತಿಗೊಳಿಸುವುದೇ ಕಾಂಗ್ರೆಸ್ ಉದ್ದೇಶವೇ.. ಇಷ್ಟೊಂದು ಮುಸ್ಲಿಂ ಓಲೈಕೆ ಬೇಡ ಎಂದು ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಶಿವಮೊಗ್ಗ ಗಲಭೆ ಹಿನ್ನೆಲೆಯಲ್ಲಿ ಬೆಳಕಿಗೆ ಬಂದಿರುವ ಈ ಪತ್ರಕ್ಕೆ ಇನ್ನಷ್ಟು ರಾಜಕೀಯ ಬಣ್ಣ ಬಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಮಂತ್ರಿ ಪರಮೇಶ್ವರ್ ಇಬ್ಬರೂ ಪತ್ರ ಬರೆದದ್ದಕ್ಕೇ ಕೇಸ್ ವಾಪಸ್ ಆಗುವುದಿಲ್ಲ ಎಂದಿದ್ದಾರೆ. ಪತ್ರದ ಬಗ್ಗೆ ಮಾತನಾಡಿರುವ ಪರಮೇಶ್ವರ್ ಅದಕ್ಕೊಂದು ಪದ್ಧತಿಯಿದೆ. ಇದಕ್ಕಾಗಿಯೇ ಕ್ಯಾಬಿನೇಟ್ ಸಬ್ ಕಮಿಟಿ ಮಾಡಿದ್ದಾರೆ. ಆ ಸಬ್ ಕಮಿಟಿ ಮುಂದೆ ಈ ಪ್ರಕರಣವನ್ನು ಇಡುತ್ತೇವೆ. ಕಮಿಟಿ ಮುಂದೆ ಇಡುವ ಮೊದಲೇ ಗೃಹ ಇಲಾಖೆಯಲ್ಲಿ ಪರೀಕ್ಷೆ ಮಾಡಿಕೊಳ್ಳುತ್ತೇವೆ. ನಂತರ ಪರಿಶೀಲಿಸಿ, ಕಮಿಟಿ ಮುಂದೆ ತರಲಾಗುತ್ತದೆ. ಕಾನೂನು ಹಾಗೂ ಇಲಾಖೆಯ ತಜ್ಞರು ಚರ್ಚೆ ಮಾಡುತ್ತಾರೆ. ಕಾನೂನಿನ ಚೌಕಟ್ಟಿನಲ್ಲಿ ಪ್ರಕರಣ ವಾಪಸ್ ಪಡೆಯುವ ಬಗ್ಗೆ ತಿಳಿಸುತ್ತಾರೆ. ಗೃಹ ಸಚಿವರೇ ಅಧ್ಯಕ್ಷರಿರುತ್ತಾರೆ. ಮತ್ತೆ ಕ್ಯಾಬಿನೇಟ್ ನಲ್ಲಿ ಇಡಲಾಗುತ್ತದೆ. ಕ್ಯಾಬಿನೇಟ್‌ನಲ್ಲಿ ಸ್ಪಷ್ಟವಾದರೆ, ಪ್ರಕರಣ ತೆಗೆದು ಹಾಕಲಾಗುತ್ತದೆ. ಇಲ್ಲದಿದ್ದರೆ ವಾಪಸ್ ಕಳುಹಿಸಲಾಗುತ್ತದೆ ಎಂದಿದ್ದಾರೆ ಪರಮೇಶ್ವರ್.



