ಪ್ರಭಾಸ್-ಸೈಫ್ ಅಲಿ ಖಾನ್-ಕೃತಿ ಸನೂನ್ ಅಭಿನಯದ ಓಂರಾವತ್ ನಿರ್ದೇಶನದ ಆದಿಪುರುಷ್ ಸಿನಿಮಾ ಇದೀಗ ರಿಲೀಸ್ ಆಗಿ, ಫ್ಲಾಪ್ ಆಗುವ ಹಾದಿಯಲ್ಲಿದೆ. ಈ ನಡುವೆಯೇ ಆದಿಪುರುಷ್ ಸಿನಿಮಾ ವಿವಾದವನ್ನೂ ಎದುರು ಹಾಕಿಕೊಂಡಿದೆ. ಅತ್ತ ರಾಮಾಯಣಕ್ಕೂ ನಿಷ್ಠರಾಗದೆ, ಇತ್ತ ವಿನಾಕಾರಣ ಗ್ಲಾಮರ್ ತೋರಿಸಿದ್ದಾರೆ ಎಂಬ ಆರೋಪ ಎದುರಿಸುತ್ತಿದೆ. ಇದೇ ವಿಷಯವನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟಿಗೆ ಅರ್ಜಿ ಸಲ್ಲಿಸಲಾಗಿದ್ದು, ಹಿಂದೂಗಳ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಲಾಗಿತ್ತು. ವಿಚಾರಣೆ ಕೈಗೆತ್ತಿಕೊಂಡಿರುವ ಅಲಹಾಬಾದ್ ಹೈಕೋರ್ಟ್ ಆದಿಪುರುಷ್ ಚಿತ್ರತಂಡವನ್ನು ತರಾಟೆಗೆ ತೆಗೆದುಕೊಂಡಿದೆ.
ಪದೇ ಪದೇ ಹಿಂದುಗಳ ತಾಳ್ಮೆಯನ್ನು ಅವರ ಸಹಿಷ್ಣುತೆಯ ಮಟ್ಟವನ್ನು ಪರೀಕ್ಷೆ ಯಾಕೆ ಮಾಡ್ತೀರಿ? ಅದೃಷ್ಟವಶಾತ್ ಅವರು (ಹಿಂದುಗಳು) ಕಾನೂನು ಉಲ್ಲಂಘನೆ ಮಾಡಿಲ್ಲ. ಅದೇ ಪುಣ್ಯ . ಹಿಂದೂ ಧರ್ಮದವರು ಯಾವುದೇ ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡಿಲ್ಲ. ಅದಕ್ಕಾಗಿ ನಾವು ಅವರಿಗೆ ಥ್ಯಾಂಕ್ಸ್ ಹೇಳಬೇಕಿದೆ. ಸಿನಿಮಾ ಹಾಲ್ಗೆ ನುಗ್ಗಿ ಜನರನ್ನು ಹೊರಹಾಕಿ, ಇಡೀ ಸಿನಿಮಾ ಮಂದಿರವನ್ನೇ ಮುಚ್ಚಿದ ಕೇಸ್ಗಳನ್ನೂ ನಾವು ನೋಡಿದ್ದೇವೆ. ಇದೇ ರೀತಿ ಈ ಬಾರಿಯೂ ಆಗಬಹುದಿತ್ತು. ಅದೃಷ್ಟವಶಾತ್ ಹಾಗಾಗಿಲ್ಲ ಎಂದು ಹೇಳಿರುವ ಅಲಹಾಬಾದ್ ಹೈಕೋರ್ಟ್ ಆದಿಪುರುಷ್ ಸಿನಿಮಾ ಹಾಗೂ ಸೆನ್ಸಾರ್ ಮಂಡಳಿ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದೆ.
ನ್ಯಾಯಮೂರ್ತಿ ರಾಜೇಶ್ ಸಿಂಗ್ ಚೌಹಾಣ್ ಮತ್ತು ನ್ಯಾಯಮೂರ್ತಿ ಪ್ರಕಾಶ್ ಸಿಂಗ್ ಅವರ ಪೀಠ ಆದಿಪುರುಷ್ ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ಪ್ರಮಾಣಪತ್ರ ನೀಡುವ ಮುನ್ನ ಇದೆಲ್ಲವನ್ನೂ ಯೋಚನೆ ಮಾಡಬೇಕಿತ್ತು ಎಂದಿದೆ. ಆದಿಪುರುಷ್ ಚಿತ್ರದ ಓಪನಿಂಗ್‍ನಲ್ಲಿ ಡಿಸ್`ಕ್ಲೇಮರ್ ತೋರಿಸುತ್ತಾರೆ. ಇದು ರಾಮಯಣ ಅಲ್ಲ ಎಂದು ತೋರಿಸಲಾಗಿದೆ ಎಂಬ ಚಿತ್ರತಂಡದ ವಾದಕ್ಕೆ ಮತ್ತೂ ಆಕ್ರೋಶ ವ್ಯಕ್ತಪಡಿಸಿದ ನ್ಯಾಯಾಲಯ, ಎಂದು ಡಿಸ್ಕ್ಲೈಮರ್ ಹಾಕಿದರೆ ಆಗುತ್ತಾ? ನಮ್ಮ ಯುವಕರೇನು ಮೂರ್ಖರೇ ಎಂದು ಪ್ರಶ್ನೆ ಮಾಡಿದೆ.
ಹನುಮಂತ, ಸೀತೆಯನ್ನು ಈ ರೀತಿ ತೋರಿಸಿ ನೀವು ಸಮಾಜಕ್ಕೆ ಯಾವ ಸಂದೇಶ ಕೊಡಬೇಕು ಎಂದು ಬಯಸುತ್ತಿದ್ದೀರಿ? ರಾಮ, ಸೀತೆ, ರಾವಣ, ಹನುಮಂತನನ್ನೇ ತೋರಿಸಿ, ಇದು ರಾಮಾಯಣ ಅಲ್ಲ ಎಂದರೆ ಏನರ್ಥ. ಚಿತ್ರದ ಕೆಲವು ದೃಶ್ಯಗಳಂತೂ ಎ ಸರ್ಟಿಫಿಕೇಟ್ ಸಿನಿಮಾದಂತೆ ಕಾಣುತ್ತವೆ ಎಂದು ಹೇಳಿದೆ. ಅರ್ಜಿದಾರ ಪ್ರಿನ್ಸ್ ಲೆನಿನ್ ಮತ್ತು ರಂಜನಾ ಅಗ್ನಿಹೋತ್ರಿ ಅವರ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ರಾಜೇಶ್ ಸಿಂಗ್ ಚೌಹಾಣ್ ಮತ್ತು ಪ್ರಕಾಶ್ ಸಿಂಗ್ ಅವರ ಪೀಠವು ಸೆನ್ಸಾರ್ ಮಂಡಳಿಯು ಸೆನ್ಸಾರ್ ಮಂಡಳಿಗೆ ಈ ಚಿತ್ರಕ್ಕೆ ಹೇಗೆ ಸರ್ಟಿಫಿಕೇಟ್ ನೀಡಿದ್ದೀರಿ ಎಂದು ಕೇಳಬಹುದೇ, ಏಕೆಂದರೆ ಈ ವಿಷಯದಲ್ಲಿ ರಾಜ್ಯ ಸರ್ಕಾರ ಏನೂ ಮಾಡಲು ಸಾಧ್ಯವಿಲ್ಲ ಎಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸಾಲಿಸಿಟರ್ ಜನರಲ್ ಅವರಿಗೆ ಸೂಚನೆ ಕೊಟ್ಟಿದೆ. ದೇಶದ ಬಹುತೇಕ ಜನ ಇವತ್ತಿಗೂ ರಾಮಚರಿತ ಮಾನಸ, ರಾಮಾಯಣವನ್ನು ಓದಿಕೊಂಡೇ ಮನೆಯಿಂದ ಹೊರಗೆ ಬರುತ್ತಾರೆ. ಅಷ್ಟು ಪವಿತ್ರ ಗ್ರಂಥದ ಬಗ್ಗೆ ಗೌರವ ಬೇಡವೇ ಎನ್ನುವುದು ನ್ಯಾಯಪೀಠದ ಪ್ರಶ್ನೆ.
ಭಗವಾನ್ ರಾಮ ಮತ್ತು ಹನುಮಾನ್ ಸೇರಿದಂತೆ ಧಾರ್ಮಿಕ ಪಾತ್ರಗಳನ್ನು ಆಕ್ಷೇಪಾರ್ಹ ರೀತಿಯಲ್ಲಿ ಪ್ರಸ್ತುತಪಡಿಸಿದ್ದಕ್ಕಾಗಿ ಆದಿಪುರುಷ ಚಿತ್ರದ ನಿರ್ಮಾಪಕರನ್ನು ನ್ಯಾಯಾಲಯ ಟೀಕೆ ಮಾಡಿದೆ. ಚಿತ್ರದ ಸಹ ಬರಹಗಾರ ಮನೋಜ್ ಮುಂತಶಿರ್ ಶುಕ್ಲಾ ಅವರನ್ನು ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಮಾಡುವಂತೆ ನ್ಯಾಯಾಲಯ ಇದೇ ವೇಳೆ ಸೂಚಿಸಿದೆ. ಅವರಿಗೆ ನೋಟಿಸ್ ಜಾರಿ ಮಾಡುವುದರ ಜೊತೆಗೆ ವಾರದೊಳಗೆ ಉತ್ತರಿಸುವಂತೆ ಸೂಚಿಸಲಾಗಿದೆ.



