ವೇದ, ಭಜರಂಗಿ, ಮಾರುತಿ 800 ಸೇರಿದಂತೆ ಹಲವು ಚಿತ್ರಗಳಲ್ಲಿ ಪುಟ್ಟ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದ ನಟಿ ಕೊಲೆಯಾಗಿದ್ಧಾರೆ. ಆಕೆಯ ಹೆಸರು ವಿದ್ಯಾ ನಂದೀಶ್. ಈಕೆ ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದವರುವರು. ಕಾಂಗ್ರೆಸ್ ಕಾರ್ಯಕರ್ತೆಯೂ ಆಗಿದ್ದವರು. ವಿದ್ಯಾ ನಂದೀಶ್ ಪತಿಯಿಂದಲೇ ಕೊಲೆಯಾಗಿದ್ಧಾರೆ. ಹೀಗೆಲ್ಲ ಸುದ್ದಿ ಬಂದಾಗ.. ಎಲ್ಲರಿಗೂ ಕಾಡಿದ್ದ ಮೊದಲ ಪ್ರಶ್ನೆಯೇ ಅದು. ಯಾರಿವರು..?
ಇವರು ನಟಿಸಿದ್ಧಾರೆ ಎಂಬ ಚಿತ್ರಗಳೇನೂ ಗೊತ್ತಿಲ್ಲದ್ದಲ್ಲ. ಶಿವಣ್ಣ ಅಭಿನಯಿಸಿದ್ದ ಭಜರಂಗಿ ಸೂಪರ್ ಹಿಟ್ ಆದರೆ.., ಅದೇ ಶಿವಣ್ಣರ ವೇದ, ಅವರ ವೃತ್ತಿ ಜೀವನದ 125ನೇ ಚಿತ್ರವಾಗಿ ಗೆದ್ದಿತ್ತು. ಮಾರುತಿ 800 ಚಿತ್ರಕ್ಕೂ ಶರಣ್ ಹೀರೋ. ಆವರೇಜ್ ಹಿಟ್ ಆಗಿದ್ದ ಸಿನಿಮಾ. ಈ ಎಲ್ಲ ಚಿತ್ರಗಳ ಡೈರೆಕ್ಟರ್ ಮಾತ್ರ ಒಬ್ಬರೇ.. ಹರ್ಷ.
ಆದರೆ.. ಯಾರಿವರು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ವಿದ್ಯಾ ನಂದೀಶ್ ಹಲವು ಚಿತ್ರಗಳಲ್ಲಿ ನಟಿಸಿದ್ದರೂ.. ಗುರುತಿಸಿಕೊಳ್ಳುವಂತಾಗಿದ್ದು ಮಾರುತಿ 800 ಚಿತ್ರದಲ್ಲಿ. ನಾಯಕಿ ಶೃತಿ ಹರಿಹರನ್ ಗೆಳತಿಯಾಗಿ, ಶರಣ್ ಮೇಲೆ ಎಗರಾಡುವ ಹುಡುಗಿಯಾಗಿ ನಟಿಸಿದ್ಧಾರಲ್ಲ.. ಆಕೆಯೇ ವಿದ್ಯಾ. ಗಂಡುಭೀರಿ ಪಾತ್ರಗಳಿಂದಲೇ ಹೆಸರು ಮಾಡಿದ್ದರೂ.. ಈಕೆಯನ್ನು ಈ ಪಾತ್ರದಲ್ಲಿ ನಟಿಸಿದ್ಧಾರೆ ಎಂದು ಜನ ಗುರುತಿಸುವಂತೆ ಇರೋದು ಈ ಚಿತ್ರದ ಪಾತ್ರವೊಂದೇ. ಉಳಿದ ಚಿತ್ರಗಳಲ್ಲಿ ನಟಿಸಿದ್ದ ದೃಶ್ಯಗಳು ಅಷ್ಟಾಗಿ ನೆನಪಿನಲ್ಲಿ ಉಳಿಯುವುದಿಲ್ಲ.
ಪ್ರಕರಣ ಏನಾಯ್ತು..?
ಮೈಸೂರು ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿದ್ಯಾ ನಂದೀಶ್ ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲ್ಲೂಕಿನ ತುರಗನೂರು ಗ್ರಾಮದಲ್ಲಿ ಕೊಲೆಯಾಗಿದ್ಧಾರೆ. ಪತಿ ನಂದೀಶ್ ಕೊಲೆ ಮಾಡಿದ್ದಾನೆ ಎನ್ನಲಾಗಿದ್ದು, ನಂದೀಶ್ ಎಸ್ಕೇಪ್ ಆಗಿದ್ಧಾನೆ.
ವಿದ್ಯಾ ಮತ್ತು ನಂದೀಶ್ ಅವರಿಗೆ 2018ರಲ್ಲಿಯೇ ಮದುವೆಯಾಗಿತ್ತು. ವಿದ್ಯಾ ನಂದೀಶ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ಧಾರೆ. ಮದುವೆಯಾದಂದಿನಿಂದಲೂ ಗಂಡ ಹೆಂಡತಿ ಮಧ್ಯೆ ಜಗಳವೇ ನಡೆಯುತ್ತಿದ್ದವು. ವಿಚ್ಛೇದನದ ಹಂತಕ್ಕೂ ಹೋಗಿ, ಹಿರಿಯರ ಮಧ್ಯ ಪ್ರವೇಶದೊಂದಿಗೆ ಡೈವೋರ್ಸ್ʻಗೆ ಬ್ರೇಕ್ ಬಿದ್ದಿತ್ತು. ಮೇ 20ರಂದು ಕೂಡ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಈ ಕೃತ್ಯ ನಡೆದಿದೆ. ವಿದ್ಯಾ ಅವರು ಮೈಸೂರಿನ ಶ್ರೀರಾಂಪುರದವರು. ನಿನ್ನೆ ರಾತ್ರಿ ಮಾತನಾಡುತ್ತಿದ್ಧಾಗ ಗಂಡ ಹೆಂಡತಿ ನಡುವೆ ಫೋನ್ʻನಲ್ಲಿಯೇ ಜಗಳ ಶುರುವಾಗಿದೆ. ರಾತ್ರಿಯೇ ಗಂಡನ ಮನೆಗೆ ಹೋಗಿ ಮತ್ತೆ ಜಗಳಕ್ಕಿಳಿದಾಗ ಪರಿಸ್ಥಿತಿ ವಿಕೋಪಕ್ಕೆ ಹೋಗಿ ವಿದ್ಯಾ ಅವರ ಕೊಲೆಯಾಗಿದೆ. ಸುತ್ತಿಗೆಯಿಂದ ಹೊಡೆದು ಕೊಂದಿದ್ದಾನೆ ನಂದೀಶ್.
ಬನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ. ಬನ್ನೂರು ಠಾಣೆ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಬಂದು ಮಹಜರು ನಡೆಸಿದ್ದಾರೆ. ಸ್ಥಳೀಯರಿಂದ, ಸಂಬಂಧಿಗಳಿಂದ ಮಾಹಿತಿಗಳನ್ನು ಪಡೆದಿದ್ದಾರೆ. ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಹೆಚ್ಚುವರಿ ಎಸ್‌ಪಿ ಡಾ ನಂದಿನಿ, ನಂಜನಗೂಡು ಡಿವೈಎಸ್ಪಿ ಗೋವಿಂದರಾಜು ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪರಾರಿಯಾಗಿರುವ ಆರೋಪಿ ನಂದೀಶ್ಗಾಗಿ ಹುಡುಕಾಟ ಜಾರಿಯಲ್ಲಿದೆ.
ನಟಿಯಾಗಿದ್ದ ವಿದ್ಯಾ ರಾಜಕೀಯದಲ್ಲಿಯೂ ಸಕ್ರಿಯರಾಗಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆಯಾಗಿ ಕೆಲಸ ಮಾಡಿದ್ದ ವಿದ್ಯಾ, ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಸಕ್ರಿಯವಾಗಿದ್ದರು.



