ನಾಗಮಂಡಲ ಖ್ಯಾತಿಯ (Nagamandala) ನಟಿ ವಿಜಯಲಕ್ಷ್ಮಿ (Actress Vijayalakshmi) ಮತ್ತೊಮ್ಮೆ ವಿವಾದದಿಂದಲೇ ಸುದ್ದಿಯಾಗಿದ್ದಾರೆ. ಆದರೆ ಈ ಬಾರಿಯ ಆರೋಪ ಗಂಭೀರವಾದದ್ದು. ಈ ಹಿಂದೆಲ್ಲ ಕಷ್ಟ ಎಂದೋ.. ಮೋಸವಾಯಿತೂ ಎಂದೋ.. ಕೀಳಾಗಿ ನಡೆಸಿಕೊಳ್ತಿದ್ದಾರೆ ಎಂದೋ.. ಆರ್ಥಿಕ ಸಹಾಯ ಬೇಕು ಎಂದೋ.. ಸುದ್ದಿ ಮಾಡುತ್ತಿದ್ದ ನಟಿ ವಿಜಯಲಕ್ಷ್ಮಿ(Actress Vijayalakshmi), ಈ ಬಾರಿ ಲೈಂಗಿಕ ದೌರ್ಜನ್ಯ, ಗರ್ಭಪಾತ (abortion) ಮಾಡಿಸಿದ ಆರೋಪ ಮಾಡಿದ್ದಾರೆ. ಅದೂ ಒಂದಲ್ಲ ಎರಡಲ್ಲ, ಏಳು ಬಾರಿ. ಆರೋಪ ಮಾಡಿರುವುದು ತಮಿಳು ನಟ ಕಂ ರಾಜಕಾರಣಿ ಸೀಮನ್ (Actor politician seeman) ವಿರುದ್ಧ.
2008ರಲ್ಲಿ ಸೀಮನ್ ಹಾಗೂ ತಮಗೆ ಮದುವೆಯಾಗಿದೆ ಎಂದಿದ್ದ ನಟಿ ವಿಜಯಲಕ್ಷ್ಮಿ ಇದೀಗ ತಮಗೆ ಏಳು ಬರಿ ಬಲವಂತವಾಗಿ ಗರ್ಭಪಾತ ಮಾಡಿಸಲಾಗಿದೆ ಎಂದು ರಾಜಕಾರಣಿ, ನಟ, ನಿರ್ದೇಶಕ ಸೀಮನ್ ವಿರುದ್ಧ ಆರೋಪ ಮಾಡಿದ್ದಾರೆ. ತಿರುವಳ್ಳೂರಿನಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ದಾಖಲಿಸಿದ್ದಾರೆ. ಹಣ ಹಾಗೂ ಚಿನ್ನಾಭರಣ ಪಡೆದು ವಂಚಿಸಿರುವುದಲ್ಲದೆ, ಲೈಂಗಿಕ ದೌರ್ಜನ್ಯ ಎಸಗಿ, ಬಲವಂತವಾಗಿ 7 ಬಾರಿ ಗರ್ಭಪಾತ ಮಾಡಿಸಿದ್ದಾರೆ . ಸೀಮನ್ ತಮಗೆ ಮೋಸ ಮಾಡಿದಲ್ಲದೆ ಅವರ ಕಡೆಯವರಿಂದ ಬೆದರಿಕೆ ಹಾಕಲಾಗುತ್ತಿದೆ ಎಂದಿರುವ ನಟಿ ಕೆಲ ದಿನಗಳ ಹಿಂದೆ ಈ ಮೋಸದ ಕುರಿತು ಗ್ರೇಟರ್ ಚೆನ್ನೈ ಪೊಲೀಸ್ ಆಯುಕ್ತರ ಸಹಾಯ ಪಡೆದುಕೊಂಡು ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಸೀಮನ್ ಅವರಿಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ. ಬರುವ ಮಂಗಳವಾರ ಹಾಜರಾಗುವಂತೆ ನಿರ್ದೇಶಿಸಲಾಗಿದೆ.
ಸೀಮನ್ ಅವರು, ನಾಮ್ ತಮಿಳರ್ ಕಟ್ಚಿ (ಎನ್ಟಿಕೆ) ಪಕ್ಷದ ನಾಯಕ ಕೂಡ. ಇವರ ವಿರುದ್ಧ ಇದಾಗಲೇ ವಿಜಯಲಕ್ಷ್ಮಿ ಅವರು ಮಾಧ್ಯಮಗಳ ಎದುರೂ ನೋವು ತೋಡಿಕೊಂಡಿದ್ದರು. ನ್ಯಾಯ ಕೊಡಿಸಿ ಎಂದು ಬೇಡಿಕೊಂಡಿದ್ದರು. ಅವರ ಜೊತೆ ತಮಗೆ ಮದುವೆಯಾಗಿದ್ದು, ಏಳು ಬಾರಿ ಗರ್ಭಪಾತ ಮಾಡಿಸಿದ್ದಾರೆ ಎಂಬ ಆರೋಪವನ್ನು ಮಾಡಿದ್ದಾರೆ ನಟಿ. ತಮಿಳರ್ ಮುನ್ನೇಟ್ರ ಪಡೈ ವ್ಯವಸ್ಥಾಪಕ ಅಧ್ಯಕ್ಷೆ ವೀರಲಕ್ಷ್ಮಿ ಅವರು ನಟಿಗೆ ಸಹಕಾರ ನೀಡಿದ್ದಾರೆ. ಕೆಲವು ವರ್ಷಗಳಿಂದ ನಾನು ವಿಜಯಲಕ್ಷ್ಮಿ ಪರ ನಿಂತು ಸೀಮನ್ ವಿರುದ್ಧ ಹೋರಾಟ ಮಾಡುತ್ತಿದ್ದೇನೆ ಆದರೆ ಯಾರೂ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಈಗ ತಮಿಳು ನಾಡು ಸರ್ಕಾರ ಹಾಗೂ ಪೊಲೀಸ್ ವ್ಯವಸ್ಥೆಯ ಮೇಲೆ ಅಪಾರ ನಂಬಿಕೆ ಇರಿಸಿದ್ದೇನೆ. ಆತನನ್ನು ಬಂಧಿಸಿ ನಮಗೆ ನ್ಯಾಯ ಕೊಡಿಸಬೇಕು ಎಂದು ವೀರಲಕ್ಷ್ಮಿ ಹೇಳಿದ್ದಾರೆ.
ವಿಜಯಲಕ್ಷ್ಮಿ ಅವರು ಈ ಬಾರಿ ಕೋರ್ಟಿನಲ್ಲಿಯೇ ಹೇಳಿಕೆ ಕೊಟ್ಟಿದ್ದರೂ, ಯಾರೊಬ್ಬರೂ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಅದಕ್ಕೆ ಕಾರಣ ಏನೆಂದರೆ ಒನ್ಸ್ ಎಗೇನ್ ವಿಜಯಲಕ್ಷ್ಮಿ. ವಿಜಯಲಕ್ಷ್ಮಿ ಇದುವರೆಗೆ ಮಾಡಿರುವ ಯಾವ ಆರೋಪಗಳಿಗೂ ಗಟ್ಟಿಯಾಗಿ ನಿಂತಿಲ್ಲ. ಜೊತೆಗೆ ನೆರವಿಗೆ ಕೈಚಾಚಿದವರಿಗೂ ಅವಮಾನವನ್ನೇ ಗಿಫ್ಟ್ ಆಗಿ ಕೊಟ್ಟಿದ್ದಾರೆ. ಹೀಗಾಗಿ.. ಯಾಕ್ ಬೇಕು ಸಹವಾಸ ಎಂಬ ಧೋರಣೆಯೇ ಎಲ್ಲರಲ್ಲೂ ಕಾಣ್ತಾ ಇದೆ.



