Pulmonary Fibrosis. ಇದೊಂದು ಅಪರೂಪದ ಕಾಯಿಲೆ. ಯಾರಿಗೆ ಬೇಕಾದರೂ ಬರಬಹುದು. ಇಂಥಾದ್ದೊಂದು ಕಾಯಿಲೆಗೆ ಕಿರುತೆರೆ ನಟಿ ರಶ್ಮಿ ಲೀಲಾ ಪ್ರಾಣ ಹೋಗಿದೆ. Pulmonary Fibrosis ಕಾಯಿಲೆ ಬಂದರೆ.. ಶ್ವಾಸಕೋಶ ಊದಿಕೊಳ್ಳುತ್ತದೆ. ದಪ್ಪಗಾಗುತ್ತದೆ. ಆದರೆ.. ಕಾಯಿಲೆ ಬರುವುದು ಏಕೆ.. ಅದು ವಿಚಿತ್ರ. ವಿಶೇಷ ಎಂದರೆ.. ಆಪರೇಷನ್ ಆಗಿ, ಸಕ್ಸಸ್ ಎಂದು ವೈದ್ಯರು ಹೇಳಿದ ಕೆಲವು ದಿನಗಳ ಬಳಿಕ ಜೀವ ಹೋಗಿರುವುದು.
ಸರಳವಾಗಿ ಹೇಳ್ಬೇಕಂದ್ರೆ.. ಆಪರೇಷನ್ ಸಕ್ಸಸ್ ಪೇಷೆಂಟ್ ಡೆಡ್. ರಶ್ಮಿ ಲೀಲಾ ಅವರಿಗೆ ಇದ್ದ ಕಾಯಿಲೆಯ ಹೆಸರು Pulmonary Fibrosis. Pulmonary Fibrosis ಎಂದರೆ..ಶ್ವಾಸಕೋಶದ ಅಂಗಾಂಶಗಳು ದಪ್ಪಗಾಗಿ, ಗಾಯಗೊಂಡು ಉಸಿರಾಟದ ತೊಂದರೆ ಎದುರಾಗುತ್ತದೆ. ದೇಹದಲ್ಲಿರುವ ಆಕ್ಸಿಜನ್ ಲೆವೆಲ್ ಕಡಿಮೆ ಮಾಡುತ್ತದೆ. ರಕ್ತಕ್ಕೆ ಆಕ್ಸಿಜನ್ ಸಿಕ್ಕೋದಿಲ್ಲ. ಏದುಸಿರು ಬಿಡಬೇಕು. ಗುಣವಾಗದ ಒಣ ಕೆಮ್ಮು, ಆಯಾಸ, ವಿವರಿಸಲಾಗದ ತೂಕ ನಷ್ಟ, ಮತ್ತು ಬೆರಳುಗಳ ತುದಿಯು ಉಬ್ಬುವುದು.. ಇತ್ಯಾದಿಗಳ ಮೂಲಕ ಈ ಕಾಯಿಲೆ ಸಿಗ್ನಲ್ ಕೊಡುತ್ತದೆ. ವೈದ್ಯರು ಹೈ-ರೆಸಲ್ಯೂಶನ್ ಕಂಪ್ಯೂಟರ್ ಟೊಮೊಗ್ರಫಿ (HRCT) ಸ್ಕ್ಯಾನ್, ಪಲ್ಮನರಿ ಫಂಕ್ಷನ್ ಟೆಸ್ಟ್ (PFT), ಮತ್ತು ಕೆಲವೊಮ್ಮೆ ಶ್ವಾಸಕೋಶದ ಬಯಾಪ್ಸಿ ಮೂಲಕ ಇದನ್ನು ಪತ್ತೆಹಚ್ಚುತ್ತಾರೆ.
ಇದಕ್ಕೆ ಕಾರಣ ಎಂದು ಪರಿಸರ ಮಾಲಿನ್ಯ, ಕೆಲವು ಔಷಧಿಗಳು, ಧೂಮಪಾನ.. ಇತ್ಯಾದಿಗಳನ್ನು ವೈದ್ಯರು ತೋರಿಸುತ್ತಾರೆ. ಆದರೆ.. ಇಂಥದ್ದೇ ಕಾರಣಕ್ಕೆ ಈ ಕಾಯಿಲೆ ಬರುತ್ತದೆ ಎಂದು ಇದುವರೆಗೆ ತಿಳಿದಿಲ್ಲ. ಔಷಧಿಗಳ ಮೂಲಕ ನಿಯಂತ್ರಿಸಬಹುದು ಆದರೆ ಶ್ವಾಸಕೋಶ ಬದಲಾವಣೆಯಷ್ಟೇ ಪರಿಹಾರ. ಈಗ ರಶ್ಮಿ ಲೀಲಾ ಅವರ ಶ್ವಾಸಕೋಶ ಬದಲಿಸಿದ ನಂತರ, ಚಿಕಿತ್ಸೆ ಯಶಸ್ವಿಯಾದ ನಂತರ ರಶ್ಮಿ ಲೀಲಾ ವಿಧಿವಶರಾಗಿದ್ದಾರೆ.
ಜನವರಿಯಲ್ಲಿ ರಶ್ಮಿ ಲೀಲಾ ಅವರೇ ಶ್ವಾಸಕೋಶ ದಾನಿಗಳು ಸಿಕ್ಕಿದ್ದಾರೆ ಎಂದು ಬರೆದುಕೊಂಡಿದ್ದರು. ಚಿಕಿತ್ಸಾ ವೆಚ್ಚಕ್ಕಾಗಿ ಆರ್ಥಿಕ ಸಹಾಯವನ್ನೂ ಕೇಳಿದ್ದರು ರಶ್ಮಿ ಲೀಲಾ. ಇವರ ಪತಿ ಸಾರಕ್ಕಿ ಮಂಜು. ಆಪರೇಷನ್ ಸಕ್ಸಸ್ ಆಗಿದೆ ಎಂದು ಹೇಳಿದ್ದರು. ʻʻವೈದ್ಯರು ದೇವರಾದರು. ಮನುಷ್ಯರು ದೇವರಾದರು. ಇನ್ನು… ದೇವರು ದೇವರಾಗಬೇಕಿದೆ. ಸರ್ಜರಿ ಯಶಸ್ವಿಯಾಗಿದೆ. ಆದರೆ ಸಾಗಬೇಕಾದ ದಾರಿ ಇನ್ನೂ ತುಂಬಾ ದೂರ ಇದೆ ಎಂದು ಡಾಕ್ಟರ್‌ಗಳು ಹೇಳಿದ್ದಾರೆʼʼ ಎಂದು ಬರೆದುಕೊಂಡಿದ್ದರು. ಇದಾಗಿ ಇನ್ನೂ ಒಂದು ತಿಂಗಳು ಕಳೆದಿಲ್ಲ. ರಶ್ಮಿ ಲೀಲಾ ವಿಧಿವಶರಾಗಿದ್ದಾರೆ.
ರಶ್ಮಿ ಲೀಲಾ ಅವರು ಪ್ರಾಣ, ಗ್ರಾಮದೇವತೆ, ಕೆಂಪು ದೀಪ, ಸಿಹಿ ಮೊದಲಾದ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ಬಾಂಧವ್ಯ, ಕಾವ್ಯಾಂಜಲಿ, ಗಗನ ಕುಸುಮ, ಪಾಪ ಪಾಂಡು, ಗೋಧೂಳಿ, ಕವಲುದಾರಿ, ಮಗಳು ಜಾನಕಿ, ಕನ್ನಡಿ, ಹೋಗ್ಲಿ ಬಿಡಿ ಸಾರ್, ಆನಂದ ಸಾಗರ.. ಹೀಗೆ ಹಲವು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದರು. ರಶ್ಮಿ ಲೀಲಾ ಪತಿ ಸಾರಕ್ಕಿ ಮಂಜು ಕನ್ನಡ ಕಿರುತೆರೆಯಲ್ಲಿ ಬರಹಗಾರರಾಗಿ, ಸಂಭಾಷಣೆಕಾರರಾಗಿ ಗುರುತಿಸಿಕೊಂಡಿದ್ದು, ಒಬ್ಬ ಮಗಳಿದ್ದಾರೆ.



