ಬುಲ್ ಬುಲ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ರಚಿತಾ ರಾಮ್, ಆರಂಭದಲ್ಲಿ ಕೇವಲ ಹಿಟ್ ಸಿನಿಮಾಗಳ ಮೂಲಕ ಸದ್ದು ಮಾಡುತ್ತಿದ್ದವರು. ಸುದ್ದಿಯಾಗುತ್ತಿದ್ದವರು. ಇತ್ತೀಚಿನ ಕೆಲ ವರ್ಷಗಳಿಂದ ರಚಿತಾ ರಾಮ್ ಒಂದೂ ಹಿಟ್ ಕೊಟ್ಟಿಲ್ಲ. ಆದರೆ ಕಾಂಟ್ರವರ್ಸಿಗಳು ಬೆನ್ನು ಹತ್ತಿವೆ.ಇದೀಗ ನಿರ್ಮಾಪಕಿಯೊಬ್ಬರು ರಚಿತಾ ರಾಮ್ ಅವರಿಂದ ಮೋಸ ಹೋಗಿದ್ದನ್ನು ಪ್ರಶ್ನೆ ಮಾಡಿ, ನ್ಯಾಯ ಕೊಡಿಸಿ ಎಂದು ಫಿಲ್ಮ್ ಚೇಂಬರ್ ಮೆಟ್ಟಿಲು ಹತ್ತಿದ್ದಾರೆ. ಸಿನಿಮಾ
ಯಾರಿದು ನಿರ್ಮಾಪಕಿ ವಿಜಯಲಕ್ಷ್ಮಿ ಅರಸ್..?
ವಿಜಯಲಕ್ಷ್ಮಿ ಅರಸ್. ಉಪ್ಪಿ ರುಪ್ಪಿ ಅನ್ನೋ ಸಿನಿಮಾದ ನಿರ್ಮಾಪಕಿಯಾಗಿದ್ದವರು. ಹಿರಿಯ ನಿರ್ಮಾಪಕಿ. 8 ವರ್ಷಗಳ ಹಿಂದೆ ಸೆಟ್ಟೇರಿದ್ದ ಸಿನಿಮಾ ಅದು. ಉಪೇಂದ್ರ ಮತ್ತು ರಚಿತಾ ರಾಮ್ ಅಭಿನಯದಲ್ಲಿ ‘ಉಪ್ಪಿ ರುಪ್ಪಿ’ ಸಿನಿಮಾ ಸೆಟ್ಟೇರಿತ್ತು. ಒಂದಿಷ್ಟು ಶೂಟಿಂಗ್ ಕೂಡಾ ಆಗಿ ಸಿನಿಮಾ ಅರ್ಧಕ್ಕೇ ನಿಂತಿತ್ತು. ಆ ಸಿನಿಮಾಗೆ ಕೆ. ಮಾದೇಶ್ ನಿರ್ದೇಶಕ. 23 ಲಕ್ಷ ರೂಪಾಯಿ ಸಂಭಾವನೆಗೆ ಕಮಿಟ್ ಆಗಿದ್ದ ರಚಿತಾ ರಾಮ್, 13 ಲಕ್ಷ ಅಡ್ವಾನ್ಸ್ ಕೂಡಾ ಪಡೆದುಕೊಂಡಿದ್ದರು. ಆದರೆ ಚಿತ್ರೀಕರಣಕ್ಕೆ ಕಿರಿಕ್ ಮಾಡಿದ್ದರಂತೆ.
ಆಗಿನ್ನೂ ಉಪೇಂದ್ರ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದ ಹೊಸದು. ಪ್ರಜಾಕೀಯವೂ ಆಗಿನ್ನೂ ಸ್ಥಾಪನೆಯಾಗಿತ್ತು. ಉಪ್ಪಿ ರುಪ್ಪಿ ಚಿತ್ರ ಮಾದೇಶ್ ಅವರ ರೀಮೇಕ್ ಚಟ ಬಿಟ್ಟು ವೊರಿಜಿನಲ್ ಕಥೆಯಿಂದ ಸಿದ್ಧವಾಗಿತ್ತು. ಚಿತ್ರದಲ್ಲಿ ನೋಟ್ ಬಂದಿ, ಭ್ರಷ್ಟಾಚಾರ, ರಾಜಕೀಯದ ಕಥೆಯಿತ್ತು. ಉಪ್ಪಿ ನೆಗೆಟಿವ್ ರೋಲ್‌ನಲ್ಲಿದ್ದರು. ಉಪೇಂದ್ರ ಅವರ 50ನೇ ಸಿನಿಮಾ ಆಗಬೇಕಿದ್ದ ಉಪ್ಪಿ ರುಪ್ಪಿ ಅರ್ಧಕ್ಕೇ ಗಂಟು ಮೂಟೆ ಕಟ್ಟಿತು.
ಅದಕ್ಕೆ ಕಾರಣ ರಚಿತಾ ರಾಮ್ ಎನ್ನುವುದು ನಿರ್ಮಾಪಕಿ ವಿಜಯಲಕ್ಷ್ಮಿ ಅರಸ್ ಅವರ ದೂರು. 2017ರಲ್ಲಿ ಬ್ಯಾಂಕಾಕ್ನಲ್ಲಿ ಶೂಟಿಂಗ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿತ್ತು. ಅಲ್ಲಿಗೆ ಬರುವುದಾಗಿ ರಚಿತಾ ರಾಮ್ ಒಪ್ಪಿಕೊಂಡಿದ್ದ ರಚಿತಾ ರಾಮ್, ಬರಲೇ ಇಲ್ಲ. ವಿಮಾನದ ಟಿಕೆಟ್ ಬುಕ್ ಮಾಡಿಸಿಕೊಟ್ಟಿದ್ದರೂ.. ಒಪ್ಪಿಕೊಂಡಿದ್ದರೂ ಬರಲಿಲ್ಲ. ರಚಿತಾ ರಾಮ್ ಅವರಿಗಾಗಿ 15 ದಿನಗಳ ಕಾಲ, ಪ್ರತದಿನ ಟಿಕೆಟ್ ಬುಕ್ ಮಾಡಿ, ಚಿತ್ರತಂಡವನ್ನು ನಿಭಾಯಿಸಿದ್ದ ವಿಜಯಲಕ್ಷ್ಮಿ ಅರಸ್ ಅವರಿಗೆ ಅಲ್ಲಿನ ನಷ್ಟವೇ ಕೋಟಿಯನ್ನೂ ಮೀರಿತ್ತಂತೆ. ಏಕೆಂದರೆ ರಚಿತಾ ರಾಮ್ ಹೋಗಲೇ ಇಲ್ಲ. ಬೇರೆ ಆಯ್ಕೆ ಇಲ್ಲದೇ, ಕೇವಲ ಹೀರೋ ದೃಶ್ಯಗಳ ಚಿತ್ರೀಕರಣವನ್ನು ಮಾಡಿಕೊಂಡು ಚಿತ್ರತಂಡ ವಾಪಸ್ ಆಗಿತ್ತು.
ರಚಿತಾ ಕಾರಣದಿಂದ ನಿರ್ಮಾಪಕಿ ವಿಜಯಲಕ್ಷ್ಮಿ ಅರಸ್ ಅವರು ಒಂದೂವರೆ ಕೋಟಿ ರೂಪಾಯಿ ಕಳೆದುಕೊಂಡರು. ಮೈಸೂರಿನಲ್ಲಿ ನಡೆದ ಚಿತ್ರೀಕರಣಕ್ಕೆ ರಚಿತಾ ರಾಮ್ ಒಂದು ದಿನ ಮಾತ್ರ ಬಂದಿದ್ದರಂತೆ. ರಚಿತಾ ಕಾರಣದಿಂದ ‘ಉಪ್ಪಿ ರುಪ್ಪಿ’ ಅರ್ಧಕ್ಕೆ ನಿಂತು ಹೋಯಿತು. ಶೇ.35ರಷ್ಟು ಸಿನಿಮಾ ಮಾತ್ರ ಸಿದ್ಧವಾಗಿರುವ ಚಿತ್ರಕ್ಕೆ ದುಡ್ಡು ಸುರಿದು, ಅತ್ತ ಕೆಲಸವೂ ಆಗದೆ.. ಸಿನಿಮಾ ನಿಂತೇ ಹೋಯ್ತು. ರಚಿತಾ ರಾಮ್ ನಿರ್ಮಾಪಕರ ಸಂಪರ್ಕಕ್ಕೂ ಸಿಗುತ್ತಿಲ್ಲ.
ಹೀಗಾಗಿ ಕೊನೆಯ ಪ್ರಯತ್ನ ಎಂಬಂತೆ ಫಿಲ್ಮ್ ಚೇಂಬರ್ಗೆ ನಿರ್ಮಾಪಕಿ ವಿಜಯಲಕ್ಷ್ಮಿ ಅರಸ್ ದೂರು ನೀಡಿದ್ದಾರೆ. 2 ತಿಂಗಳ ಹಿಂದೆಯೇ ದೂರು ದಾಖಲಾಗಿದೆ. ಚಿತ್ರರಂಗದಲ್ಲೊಂದು ಅಲಿಖಿತ ಕಾನೂನಿದೆ. ಅದೇನು ಎಂದರೆ ಕೊಟ್ಟಿರುವ ಅಡ್ವಾನ್ಸ್ ವಾಪಸ್ ಸಿಗೋದಿಲ್ಲ ಅನ್ನೋದು. ಹಾಗೇನಾದರೂ.. ಅಡ್ವಾನ್ಸ್ ಹಣವನ್ನು ಯಾರಾದರೂ ರಿಟರ್ನ್ ಮಾಡಿದರೆ.. ಆತ ದೇವತಾಮನುಷ್ಯ ಕಣ್ರೀ ಅಂತಾರೆ ಚಿತ್ರರಂಗದವರು.
ನಟಿ ರಚಿತಾ ರಾಮ್ ಇತ್ತೀಚೆಗೆ ದೊಡ್ಡದಾಗಿ ಸುದ್ದಿಯಾಗುತ್ತಿದ್ದಾರೆ. ಹಿಟ್ ಸಿನಿಮಾಗಳ ವಿಷಯದಲ್ಲಿ ಸುದ್ದಿಯಾಗಿಲ್ಲ. ಬದಲಾಗಿ ಕಾಂಟ್ರವರ್ಸಿಗಳಿಂದ ಸುದ್ದಿಯಾಗಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಸಂಜು ವೆಡ್ಸ್ ಗೀತಾ 02 ಚಿತ್ರತಂಡದ ಡೈರೆಕ್ಟರ್ ನಾಗಶೇಖರ್ ಮತ್ತು ಹೀರೋ ಶ್ರೀನಗರ ಕಿಟ್ಟಿ, ರಚಿತಾ ರಾಮ್ ಸಿನಿಮಾ ಪ್ರಚಾರಕ್ಕೆ ಬಂದಿಲ್ಲ ಎಂದು ಆರೋಪಿಸಿದ್ದರು. ಫಿಲ್ಮ್ ಚೇಂಬರಿಗೆ ದೂರು ಕೊಟ್ಟಿದ್ದರು. ಇದೀಗ ಮತ್ತೊಬ್ಬ ನಿರ್ಮಾಪಕಿ ರಚಿತಾ ರಾಮ್ ವಿರುದ್ಧ ಫಿಲ್ಮ್ ಚೇಂಬರ್ ಮೆಟ್ಟಿಲೇರಿದ್ದಾರೆ.



