ನಟ ದರ್ಶನ್, ನಟಿ ಪವಿತ್ರಾ ಗೌಡ ಹಾಗೂ ಸಹಚರರ ಮೇಲೆ ಕೊಲೆ ಆರೋಪ ಇದೆ. ಅಶ್ಲೀಲ ಸಂದೇಶ ಕಳಿಸಿದ ಎಂಬ ಕಾರಣಕ್ಕೆ ರೇಣುಕಾಸ್ವಾಮಿ ಎಂಬಾತನನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದು ಹತ್ಯೆ ಮಾಡಿದ ಆರೋಪದಲ್ಲಿ ಡಿ-ಗ್ಯಾಂಗ್ನವರು ಜೈಲು ಸೇರಿದ್ದಾರೆ. ರೇಣುಕಾಸ್ವಾಮಿ ನಿವಾಸಕ್ಕೆ ಕೆಲವು ಸೆಲೆಬ್ರಿಟಿಗಳು ಭೇಟಿ ನೀಡಿ ಈಗಾಗಲೇ ಸಾಂತ್ವನ ಹೇಳಿದ್ದಾರೆ. ಈಗ ನಟ ಪ್ರಥಮ್ ಕೂಡ ಚಿತ್ರದುರ್ಗಕ್ಕೆ ತೆರಳಿ ರೇಣುಕಾ ಸ್ವಾಮಿಯ ಮನೆಯವರಿಗೆ ಧೈರ್ಯ ತುಂಬಲು ಪ್ರಯತ್ನಿಸಿದ್ದಾರೆ.
ಈ ವೇಳೆ ದರ್ಶನ್ ಅಭಿಮಾನಿಗಳನ್ನುದ್ದೇಶಿಸಿ ‘ನನ್ನ ಒಂದು ಮಾತಿನಿಂದ ನಿಮಗೆ ನೋವಾಗಿದೆ ಎಂಬುದಾದರೆ ಸಹನಾ ಅವರಿಗೆ ಆಗಿರುವ ನೋವು ಏನು? ನೂರು, ಸಾವಿರ ಪಟ್ಟು ನೋವು ಅವರಿಗೆ ಆಗಿದೆ. ಈ ಕುಟುಂಬ ಹೇಗೆ ಚೇತರಿಸಿಕೊಳ್ಳಬೇಕು? ಅದರ ಬಗ್ಗೆ ಚೂರು ಯೋಚನೆ ಮಾಡಿ’ ಎಂದು ಬುದ್ದಿಮಾತು ಹೇಳಿದ್ದಾರೆ. . ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ತಳಿ ಉದ್ಘಾಟನೆಗೆ ಬಂದಿದ್ದೆ. ಮನಸ್ಸು ನೋಯಿಸಲು ಅಥವಾ ಯಾರನ್ನೋ ಸಮರ್ಥನೆ ಮಾಡಿಕೊಳ್ಳಲು ನಾನು ಇಲ್ಲಿಗೆ ಬಂದಿಲ್ಲ. ನನ್ನ ಮನಸ್ಸಿನಲ್ಲಿ ಒಂದು ವಿಚಾರ ಕಾಡುತ್ತಿತ್ತು. ತುಂಬಾ ಹೀನಾಯವಾಗಿ ಸಾವಾಗಿತ್ತು. ಸಹನಾ ಅವರನ್ನು ಮಾತನಾಡಿಸಬೇಕು ಎಂಬುದು ನನ್ನ ತಲೆಯಲ್ಲಿತ್ತು. ಈಗ ಸತತ ಆರು ವಾರದಿಂದ ಹೊಸ ಶೋ ಮಾಡುತ್ತಿದ್ದೇನೆ. ಅದರಿಂದ ನನಗೆ ವಿಶ್ರಾಂತಿ ಇಲ್ಲದಂತೆ ಆಗಿತ್ತು. ಈ ಕುಟುಂಬದವರನ್ನು ನೋಯಿಸಲು ಅಥವಾ ಇನ್ನಾವುದೋ ಹೇಳಿಕೆ ನೀಡಲು ನಾನು ಬಂದಿಲ್ಲ’ ಎಂದಿದ್ದಾರೆ ಪ್ರಥಮ್.
ಸ್ವಾತಂತ್ರ್ಯ ದಿನಾಚರಣೆಯ ಒಂದು ದಿನದ ಹಿಂದಷ್ಟೇ ಬೆಂಗಳೂರಿನ ಕಲಾವಿದರ ಸಂಘದ ಕಟ್ಟಡದಲ್ಲಿ ಕನ್ನಡ ಚಿತ್ರರಂಗಕ್ಕಾಗಿ ಏಳ್ಗೆಗಾಗಿ ಹೋಮ ಹವನಗಳು ನಡೆದಿದ್ದವು. ಹೋಮಕ್ಕೆ ಕೆಲವೇ ಕೆಲವು ಕಲಾವಿದರು, ತಂತ್ರಜ್ಞರು ಬಂದಿದ್ದರು ಬಿಟ್ಟರೆ.. ಉಳಿದವರು ಬರಲೇ ಇಲ್ಲ. ಹಾಗೆ ಬರದೇ ಹೋದವರಲ್ಲಿ ನಟ ಪ್ರಥಮ್ ಕೂಡಾ ಒಬ್ಬರು.
ನನಗೆ ಅದಕ್ಕೆ ಸಮಯ ಇಲ್ಲ, ನಾನು ಬೆಳಗ್ಗೆ ಈಶ್ವರನ ಪೂಜೆ ಮಾಡ್ತೀನಿ. ಮನೆದೇವ್ರು ಕಬ್ಬಾಳಮ್ಮಗೆ ನಮಸ್ಕಾರ ಮಾಡ್ತೀನಿ. ಪೂಜೆ ಜೊತೆ ನಾನು ಉರುಳು ಸೇವೆ ಬೇಕಾದ್ರೂ ಮಾಡ್ತೀನಿ. ಆದ್ರೆ ಇವರ ಕುಟುಂಬಕ್ಕೆ ಆದ ನೋವನ್ನು ತುಂಬಿಕೊಡೋಕೆ ಸಾಧ್ಯವಾ? ರೇಣುಕಾಸ್ವಾಮಿ ಪತ್ನಿ ಸಹನಾಗೆ ಆದ ಅನ್ಯಾಯ ಸರಿಪಡಿಸಲು ಸಾಧ್ಯವಾ ಎಂದು ಪ್ರಶ್ನೆ ಮಾಡಿರುವ ಪ್ರಥಮ್ ʻಕಲಾವಿದರ ಸಂಘ ನನ್ನ ಮನೆಯಿಂದ 4 ಕಿ.ಮೀ ದೂರದಲ್ಲೇ ಇದೆ. ನಾನು ಆ ಪೂಜೆಗೆ ಹೋಗಕ್ಕಾಗಲಿಲ್ಲ. ಆದ್ರೆ 350 ಕಿಮಿ ದೂರದಲ್ಲಿರುವ ಇವರನ್ನು ಕಾಣಲು ಮನಸ್ಸು ಬಯಸುತ್ತಿತ್ತುʼʼ ಎಂದು ಹೇಳಿದ್ದಾರೆ.
ಜಗ್ಗೇಶ್ ಸರ್ ಪೂಜೆಯ ಬಗ್ಗೆ ತುಂಬಾ ಮಾರ್ಮಿಕವಾಗಿ ಹೇಳಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕಳೆದ ಒಂದು ವರ್ಷದಿಂದ ಸಕ್ಸಸ್ ಇಲ್ಲ. ಆ ಕಾರಣಕ್ಕೆ ಮಾಡಿದ ಪೂಜೆ ಅಂತಾ ಗೊತ್ತಾಗಿತ್ತು. ಯಾವುದೇ ವ್ಯಕ್ತಿಗಿಂತ ನಮಗೆ ಚಿತ್ರರಂಗ ದೊಡ್ಡದು. ರಾಜಕುಮಾರ್, ವಿಷ್ಟು ಸರ್ ರಂಥ ಕಲಾವಿದರು ಚಿತ್ರರಂಗದಲ್ಲಿದ್ರು. ಹಲವು ಕಲಾವಿದರು ಅಲ್ಲಿ ಊಟ ಮಾಡಿ, ಭವಿಷ್ಯ ಕಟ್ಟಿಕೊಂಡಿದ್ದಾರೆ. ಹಾಗಾಗಿ ಚಿತ್ರರಂಗದ ಭವಿಷ್ಯಕ್ಕಾಗಿ ಪೂಜೆ ಮಾಡಿದಾರೆ ಅಂದುಕೊಳ್ಳೋಣ ಎಂದಿದ್ದಾರೆ ಪ್ರಥಮ್.
ಈ ಕುಟುಂಬ ಮಗನನ್ನು ಕಳೆದುಕೊಂಡಿದೆ. ಸಹನಾ ಅವರು ಪತಿಯನ್ನು ಕಳೆದುಕೊಂಡಿದ್ದಾರೆ. ಇನ್ನೂ ಹುಟ್ಟಬೇಕಿರುವ ಮಗುವಿಗೆ ಅಪ್ಪ ಇಲ್ಲ. ರೇಣುಕಾಸ್ವಾಮಿ ಬಗ್ಗೆ ಬೈಯ್ಯುವವರು ಇವರ ಬಗ್ಗೆ ಒಂದು ಸಾರಿ ಯೋಚಿಸಬೇಕು. ಕಾಮೆಂಟ್ ಹಾಕೋರು ನಿಮ್ಮ ಕುಟುಂಬದಲ್ಲೇ ಹೀಗಾಗಿದ್ರೆ ಅಂತಾ ಯೋಚಿಸಿ ಹಾಕೋದು ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ.



