ನಟ ಯಶ್ ಅವರಿಗೆ ಜಂಬದ ಹುಡುಗಿ ಚಿತ್ರದಲ್ಲಿ ಅವಕಾಶ ಕೊಡಿಸಿದ್ದೇ ನಾನು. ಯಶ್ ಅವರಿಗೆ ಆಗ ಊಟ ಹಾಕಿಸಿದ್ದೆ. ಯಶ್ ನನ್ನ ಬಳಿ ಕಣ್ಣೀರು ಹಾಕಿದ್ದ.. ಎಂದೆಲ್ಲ ಹೇಳಿಕೆ ನೀಡಿದ್ದ ತಮಿಳು ನಟ ಜೈಆಕಾಶ್ ಇದೀಗ ಯಶ್ ಅಭಿಮಾನಿಗಳ ಕ್ಷಮೆ ಕೇಳಿದ್ದಾರೆ.
ನಟನ ಈ ಹೇಳಿಕೆಯ ಬೆನ್ನಲ್ಲೇ ಯಶ್ ಅಭಿಮಾನಿಗಳು ಆಕ್ರೋಶ ಹೊರಹಾಕುವ ಮೂಲಕ ತಿರುಗಿ ಬಿದ್ದಿದ್ದರು. ಇದೀಗ ನಟ ಜೈ ಆಕಾಶ್ ವಿಡಿಯೋ ಮಾಡುವ ಮೂಲಕ ರಾಕಿಂಗ್ ಸ್ಟಾರ್ ಯಶ್ ಹಾಗೂ ಅವರ ಅಭಿಮಾನಿಗಳಿಗೆ ಕ್ಷಮೆ ಕೋರಿದ್ದಾರೆ. ನಾನು ಯಶ್ ಜಂಬದ ಹುಡುಗಿ ಅನ್ನೋ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದೆವು. ನನ್ನ ತಮ್ಮನಾಗಿ ಯಶ್ ಸಿನಿಮಾದಲ್ಲಿ ನಟಿಸಿದ್ದರು. ಪತ್ರಕರ್ತರ ಪ್ರಶ್ನೆಗಳಿಗೆ ಮಾತನಾಡಿದ ವಿಡಿಯೋವನ್ನು ಹೀಗೆ ಕಟ್ ಮಾಡಿ ವೈರಲ್ ಮಾಡಿದ್ದಾರೆ. ಯಶ್ ನನಗೆ ತಮ್ಮ ಇದ್ದಂತೆ. ನಾನು ಯಶ್ ಬಗ್ಗೆ ಆ ರೀತಿ ಮಾತನಾಡಿದ್ದು ತಪ್ಪು. ಹೀಗಾಗಿ ನಾನು ಯಶ್ ಹಾಗೂ ಅವರ ಅಭಿಮಾನಿಗಳಲ್ಲಿ ಕ್ಷಮೆ ಕೋರುತ್ತೇನೆ ಎಂದು ವಿಡಿಯೋ ಮೂಲಕ ತಿಳಿಸಿದ್ದಾರೆ.
ಈಗ ಯಶ್ ಅವರ ಬಗ್ಗೆ ಹೇಳಿದ್ದಕ್ಕೆ ತರಾಟೆಗೆ ತೆಗೆದುಕೊಂಡಿದ್ದ ಜನ್ಮ ಜಾಲಾಡಿದ್ದ ಯಶ್ ಅಭಿಮಾನಿಗಳೇ ಈಗ ಕ್ಷಮಿಸಬೇಕು. ಜಂಬದ ಹುಡುಗಿ ಸಿನಿಮಾದಲ್ಲಿ ಯಶ್ ಏನೇನೂ ಅಲ್ಲದ ನಟ. ಆಗಿನ್ನೂ ಚಿತ್ರರಂಗಕ್ಕೆ ಪರಿಚಯವಾಗಿದ್ದ ನಟ. ಜಂಭದ ಹುಡುಗಿ ಚಿತ್ರದಲ್ಲಿ ಯಶ್, ಹೀರೋ ಕೂಡಾ ಅಲ್ಲ. ಆದರೆ ಇದೀಗ ಯಶ್ ಅವರು ಬೆಳೆದಿರುವ ಎತ್ತರವೇ ಬೇರೆ. ಯಶ್ ಅವರ 19ನೇ ಚಿತ್ರಕ್ಕೆ ಇಡೀ ಇಂಡಿಯನ್ ಸಿನಿಮಾ ಫ್ಯಾನ್ಸ್ ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಇಂತಹ ಸಮಯದಲ್ಲಿ ಜೈ ಆಕಾಶ್ ಈ ರೀತಿ ಮಾತನಾಡುವ ಅಗತ್ಯತೆ ಇತ್ತಾ ಎನ್ನುವುದು ಒಂದು ವಾದವಾದರೆ, ಯಶ್ ಅವರ ಬಗ್ಗೆ ಜೈ ಆಕಾಶ್ ನೆಗೆಟಿವ್ ಆಗಿಯೇನೂ ಮಾತನಾಡಿಲ್ಲ. ಇದ್ದುದ್ದನ್ನ ಇದ್ದಂತೆ ಹೇಳಿದ್ದಾರೆ. ಯಶ್ ಅವರಿಗೆ ಅಗೌರವ ತೋರಿಸಿಲ್ಲ. ಜೈ ಆಕಾಶ್ ಮಾಡಿದ ತಪ್ಪಾದರೂ ಏನು? ಎನ್ನುವುದು ಇನ್ನೊಂದು ವಾದ.



