ನಟ ದರ್ಶನ್ ಅವರಿಗೆ ಏನಾದರೂ.. ಪ್ರಮಾದವಾದರೆ.. ಅವರಿಗಿಂತ ಹೆಚ್ಚು ನೊಂದುಕೊಳ್ಳೋದು ಅವರ ಪ್ಯಾನ್ಸ್. ಅಂತಹ ಅಭಿಮಾನಿಗಳಿಗೆ ಶಾಕ್ ಕೊಟ್ಟಿರೋದು ದರ್ಶನ್. ನಟ ದರ್ಶನ್ ಅವರ ಕೈಗೆ ಏನಾಗಿದೆ..? ಈ ಪ್ರಶ್ನೆ ಮಂಡ್ಯದಲ್ಲಿ ಸುಮಲತಾ ಅವರ ನಿಲುವಿಗಾಗಿ ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ಕಾಡುತ್ತಲೇ ಇದೆ.
ಏಕೆಂದರೆ.. ಸುಮಲತಾ ಅವರ ಜೊತೆಗಿದ್ದ ಅಷ್ಟೂ ಹೊತ್ತು ದರ್ಶನ್ ಕೈಗೆ ಹ್ಯಾಂಡ್ ಸ್ಲಿಂಗ್ ಹಾಕಿಕೊಂಡೇ ಇದ್ದರು. ಕಳೆದ ಬಾರಿ ಎಲೆಕ್ಷನ್ ಪ್ರಚಾರದ ವೇಳೆಯೂ ದರ್ಶನ್ ಕೈಗೆ ಪೆಟ್ಟು ಮಾಡಿಕೊಂಡಿದ್ದರು. ಆಗಲೂ ಹ್ಯಾಂಡ್ ಸ್ಲಿಂಗ್ ಹಾಕಿಕೊಂಡೇ ಪ್ರಚಾರ ಮಾಡಿದ್ದ ದರ್ಶನ್ ಅದನ್ನು ತಮ್ಮ ಮಾತಿನಲ್ಲಿ ನೆನಪಿಸಿಕೊಂಡರೂ ಕೂಡಾ.
ನಾನು ಕಳೆದ ಬಾರಿ ಬಂದಾಗ ಬಲಗೈ ಮುರಿದಿತ್ತು, ಈಗ ಎಡಗೈ. ಅಸಲಿಗೆ, ಏಪ್ರಿಲ್ 2ರಂದು ಆಪರೇಷನ್ ಇತ್ತು. ಆದರೆ ಡಾಕ್ಟರ್‌ಗೆ ಇಲ್ಲಪ್ಪ, ಅಮ್ಮನಿಗೆ ಡೇಟ್ ಕೊಟ್ಟುಬಿಟ್ಟಿದ್ದೀನಿ. ಅದು ಮುಗಿಸಿ ಬರ್ತಿನಿ ಅಂತ ಹೇಳಿ ಬಂದೆ ಎಂದಿರೋ ದರ್ಶನ್, ಮಂಡ್ಯದ ಸಭೆ ಮುಗಿಸಿ ಹೋಗಿ ನೇರವಾಗಿ ಆಸ್ಪತ್ರೆ ಸೇರಿದ್ಧಾರೆ.
ದರ್ಶನ್ ಅವರು ವೇದಿಕೆಯಲ್ಲೇ ಅಭಿಮಾನಿಗಳಿಗೆ ಮನವಿ ಮಾಡಿಕೊಂಡರು. ಕೈಗೆ ಪೆಟ್ಟಾಗಿದೆ. ದಯವಿಟ್ಟು ಜಾಗ ಮಾಡಿಕೊಡಿ ಎಂದರು. ಅಭಿಮಾನಿಗಳೂ ಅಷ್ಟೆ, ದರ್ಶನ್ ಅವರನ್ನು ಮುಗಿಬೀಳುವ ಮಂದಿ.. ಈ ಬಾರಿ ದರ್ಶನ್ ಅವರನ್ನು ಹುಷಾರಾಗಿ ಕಳಿಸಿಕೊಟ್ಟರು.
ದರ್ಶನ್ ಅವರ ಕೈಗೆ ಅಷ್ಟೊಂದು ಪೆಟ್ಟಾಗುವುದಕ್ಕೆ ಕಾರಣ ಏನು? ಆಪರೇಷನ್ ಮಾಡುವಂಥದ್ದು ಏನಾಯ್ತು ಎಂಬುದಕ್ಕೆ ಕಾರಣ ಗೊತ್ತಾಗಿಲ್ಲ.
ಇನ್ನು ಸುಮಲತಾ ಅವರ ಸಭೆಯಲ್ಲಿ ಯಶ್ ಇರಲಿಲ್ಲ. ಆದರೆ ಅಭಿಷೇಕ್ ಅಂಬರೀಷ್ ಇದ್ದರು. ಅಮ್ಮ ಏನ್ ಹೇಳುತ್ತಾರೋ, ಅದನ್ನು ಮಾಡುತ್ತೇನೆ. ಕಣ್ಣ ಮುಚ್ಚಿಕೊಂಡು ಹಾಳು ಬಾವಿಗೆ ಬೀಳು ಅಂದ್ರು ಬೀಳುವುದಕ್ಕೂ ರೆಡಿ ನಾನು. ಅಮ್ಮ ಏನೇ ನಿರ್ಧಾರ ತೆಗೆದುಕೊಂಡರೂ, ನಾನು ಮತ್ತು ನನ್ನ ತಮ್ಮ ಅಭಿಷೇಕ್ ಬದ್ಧರಾಗಿರುತ್ತೇವೆ ಎಂದ ದರ್ಶನ್ ನಾನು ರಾಜಕೀಯ ಮಾತನಾಡುವುದಿಲ್ಲ. ಅಮ್ಮ ಏನೇ ನಿರ್ಧಾರ ತೆಗೆದುಕೊಂಡರೂ ಕೂಡ ನಾನು ಅವರ ಹಿಂದೆ ನಿಂತೇ ಇರ್ತಿನಿ. ಯಾಕೆಂದರೆ, ಮನೆ ಮಕ್ಕಳು ಎಂದಾಗ, ನಾವು ಮನೆ ಮಕ್ಕಳ ಥರವೇ ಇರಬೇಕು. ತಾಯಿ ಯಾವತ್ತಿದ್ರೂ ತಾಯಿನೇ. ಸಾಯೋವರೆಗೂ ತಾಯಿನೇ ಎಂದಿದ್ದಾರೆ.
ಎಲ್ಲ ಓಕೆ.. ಆಸ್ಪತ್ರೆಯಿಂದ ಬೇಗ ಗುಣಮುಖರಾಗಿ ಬನ್ನಿ ಎಂದು ಹಾರೈಸುತ್ತಿರೋದು ದರ್ಶನ್ ಫ್ಯಾನ್ಸ್. ನಟ ದರ್ಶನ್ ಅವರು ಹ್ಯಾಂಡ್ ಸ್ಲಿಂಗ್ ಹಾಕುವಷ್ಟರ ಮಟ್ಟಿಗೆ ಆದ ಎಡವಟ್ಟಾದರೂ ಏನು..? ಉತ್ತರ ಇಲ್ಲ. ಅದೂ.. ಆಪರೇಷನ್ ಮಾಡುವಷ್ಟರ ಮಟ್ಟಿಗೆ ಸಮಸ್ಯೆ ಎದುರಾಗಿದೆ. ಕಳೆದ ಬಾರಿ ಒಂದು ಆಕ್ಸಿಡೆಂಟ್ʻನಿಂದಾಗಿ ಸಮಸ್ಯೆಯಾಗಿತ್ತು. ಈ ಬಾರಿ ಏನಾಯ್ತು.. ಗೊತ್ತಿಲ್ಲ. ಒಟ್ಟಿನಲ್ಲಿ ಗುಣಮುಖರಾಗಿ.. ಹುಷಾರಾಗಿ ಬನ್ನಿ ಎಂದು ಹೇಳುವುದಷ್ಟೇ ಅಭಿಮಾನಿಗಳಿಗೆ ಉಳಿದಿರೋದು.



