ಡಿಜಿಟಲ್ ನ್ಯೂಸ್ ವೆಬ್‌ಸೈಟ್ ನ್ಯೂಸ್‌ಕ್ಲಿಕ್‌ನ ಸುದ್ದಿಗಳಿಗೂ ಚೀನಾಕ್ಕೂ ಲಿಂಕ್ ಇರುವ ವಿಚಾರಕ್ಕೆ ಸಂಬಂಧಿಸಿದಂತೆ, ದೆಹಲಿ ಪೊಲೀಸರು ಮಂಗಳವಾರ (ಅಕ್ಟೋಬರ್ 3) ಅದರ ಸಂಸ್ಥಾಪಕರಾದ ಪ್ರಬೀರ್ ಪುರ್ಕಾಯಸ್ಥ ಮತ್ತು ಅಮಿತ್ ಚಕ್ರವರ್ತಿ ಅವರನ್ನು ಬಂಧಿಸಿದ್ದಾರೆ. ವಿದೇಶಿ ನಿಧಿಯ ತನಿಖೆಗೆ ಸಂಬಂಧಿಸಿದಂತೆ ದಾಳಿ ನಡೆಸಿದ ನಂತರ ನ್ಯೂಸ್‌ಕ್ಲಿಕ್ ನ್ಯೂಸ್ ಪೋರ್ಟಲ್‌ನ ಕಚೇರಿಯನ್ನು ದೆಹಲಿ ಪೊಲೀಸ್‌ನ ಸ್ಪೆಷಲ್ ಸೆಲ್ ಸೀಜ್ ಮಾಡಿದೆ. ಸ್ಪೆಷಲ್ ಸೆಲ್‌ನಲ್ಲಿ ದಾಖಲಾದ ಯುಎಪಿಎ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಿದ ದಾಳಿ, ವಶಪಡಿಸಿಕೊಳ್ಳುವಿಕೆ ಮತ್ತು ಕಸ್ಟಡಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಇಬ್ಬರು ಆರೋಪಿಗಳಾದ ಪ್ರಬೀರ್ ಪುರ್ಕಾಯಸ್ಥ ಮತ್ತು ಅಮಿತ್ ಚಕ್ರವರ್ತಿ ಅವರನ್ನು ಬಂಧಿಸಲಾಗಿದೆ. ನ್ಯೂಸ್‌ಕ್ಲಿಕ್ ಹಾಗೂ ಅದರ ಕನಿಷ್ಠ 10 ಪತ್ರಕರ್ತರ ವಿರುದ್ಧ ಅಪರಾಧ ಸಂಚು ಹಾಗೂ ವೈರತ್ವ ಬಿತ್ತುವ ಆರೋಪಗಳಿಗೆ ಸಂಬಂಧಿಸಿದಂತೆ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಐದು ಸೆಕ್ಷನ್‌ಗಳು ಹಾಗೂ ಭಾರತೀಯ ದಂಡ ಸಂಹಿತೆಯ ಕಾನೂನುಗಳ ಅಡಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ಹೇಗೆ ನಡೆಯಿತು ಪ್ಲಾನ್?
ಜಾರಿ ನಿರ್ದೇಶನಾಲಯದಿಂದ ಬಂದ ಮಾಹಿತಿ ಆಧಾರದಲ್ಲಿ ದಿಲ್ಲಿ ಪೊಲೀಸರು ಬೆಳಿಗ್ಗೆ 6 ಗಂಟೆಗೆ ದಿಲ್ಲಿ, ನೋಯ್ಡಾ, ಗಾಜಿಯಾಬಾದ್, ಗುರುಗ್ರಾಮ ಮತ್ತು ಮುಂಬಯಿಯ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ಆರಂಭಿಸಿದ್ದರು. ಸುಮಾರು 500 ಪೊಲೀಸರು ಸೇರಿದಂತೆ ದಿಲ್ಲಿ ಪೊಲೀಸ್ ವಿಶೇಷ ಘಟಕದ ತಂಡಗಳು ದಾಳಿಯಲ್ಲಿ ಭಾಗಿಯಾಗಿದ್ದರು. ಯಾರ ಮೇಲೆ ದಾಳಿ ನಡೆಸಬೇಕು ಎಂದು ಪತ್ರಕರ್ತರ ಪಟ್ಟಿಯನ್ನು ಪೊಲೀಸರು ಸಿದ್ಧಪಡಿಸಿದ್ದರು. ಅವರನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗಿತ್ತು. ಎ ವರ್ಗದಲ್ಲಿ ಇರುವ ಜನರನ್ನು ವಶಕ್ಕೆ ಪಡೆಯಲಾಗಿದೆ.
ಮೂರು ಕೃಷಿ ಕಾಯ್ದೆಗಳ ವಿಚಾರವಾಗಿ ನರೇಂದ್ರ ಮೋದಿ ಸರ್ಕಾರದ ವಿರುದ್ಧದ ರೈತರ ಪ್ರತಿಭಟನೆಗಳು ಮತ್ತು ದಿಲ್ಲಿಯ ಶಹೀನ್ ಬಾಗ್‌ನಲ್ಲಿ ಪೌರತ್ವ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆಗಳ ಕುರಿತು ಪೊಲೀಸರು 20- 25 ಪ್ರಶ್ನೆಗಳನ್ನು ಸಿದ್ಧಪಡಿಸಿದ್ದರು. ಈ ಕುರಿತು ಅಮೆರಿಕದ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ವರದಿಯಾಗಿತ್ತು. ಭಾರತದಲ್ಲಿ ನಡೆದ ಪ್ರತಿಭಟನೆಗಳ ಹಿಂದೆ ಚೀನಾದ ನಂಟಿದೆ ಎಂದು ಆರೋಪಿಸಲಾಗಿತ್ತು. ಅದಾದ ಮೇಲೆಯೇ ಈ ದಾಳಿಗಳು ನಡೆದಿವೆ.
ನ್ಯೂಸ್‌ಕ್ಲಿಕ್ ವಿರುದ್ಧದ ತನ್ನ ಕ್ರಿಮಿನಲ್ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವು, ಕಂಪನಿಗೆ (PPK Newsclick Studio Pvt. Ltd.) ಸಿಂಘಮ್‌ಗೆ ಸಂಬಂಧಿಸಿರುವ ಘಟಕಗಳಿಂದ 86 ಕೋಟಿ ರೂಪಾಯಿಗೂ ಹೆಚ್ಚು ವಿದೇಶಿ ನಿಧಿಯ ವಂಚನೆಯನ್ನು ತನಿಖೆ ನಡೆಸುತ್ತಿದೆ ಮತ್ತು ಶೀಘ್ರದಲ್ಲೇ ಈ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಸುವ ನಿರೀಕ್ಷೆಯಿದೆ.



