ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಳ ಮತ್ತು ಬೆಲೆ ಏರಿಕೆ ಒಂದಕ್ಕೊಂದು ಲಿಂಕ್ ಆಗಿಯೇ ಇರುತ್ತವೆ. ಜನಸಾಮಾನ್ಯರಿಗೆ ಮತ್ತಷ್ಟು ಹೊರೆ ಎನ್ನುವ ವಿಷಯದಲ್ಲಿ ಅನುಮಾನವೇನೂ ಇಲ್ಲ. ಆದರೆ, ಕೊರೊನಾ ಸಮಯದಲ್ಲಿಯೂ ಬೆಲೆ ಇಳಿಕೆ ಆದರೂ, ಅದರ ಲಾಭ ಜನರಿಗೆ ಸಿಕ್ಕಲಿಲ್ಲ. ಈಗ ಮತ್ತೊಮ್ಮೆ ಬೆಲೆ ಇಳಿಯುತ್ತಿದೆ. ಡಿಸೆಂಬರ್ 2021ರ ಬಳಿಕ ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ಕಚ್ಚಾ ತೈಲಬೆಲೆಗಳು ಪ್ರತಿ ಬ್ಯಾರಲ್‌ಗೆ 70 ಡಾಲರ್ ಗಿಂತ ಕೆಳಗಿಳಿದಿವೆ. ಆದರೆ ಬೆಲೆ ಇಳಿಯುತ್ತಿಲ್ಲ. ಕಚ್ಚಾತೈಲ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಕಳೆದ 3 ವರ್ಷದಲ್ಲಿ ದಾಖಲಾದ ಕಡಿಮೆ ದರ ಇದಾಗಿದೆ. ಹೀಗಾಗಿ ಹೊಸ ಪ್ರಸ್ತಾವನೆಯನ್ನು ಹಣಕಾಸು ಸಚಿವಾಲಯದ ಮುಂದೆ ಇಡಲಾಗಿದೆ.
ಕೇಂದ್ರ ಹಣಕಾಸು ಸಚಿವಾಲಯದ ಜೊತೆ ಪೆಟ್ರೋಲಿಯಂ ಕಾರ್ಯದರ್ಶಿ ಪಂಕಜ್ ಜೈನ್ ಪ್ರಕಾರ ವಿಂಡ್‌ಫಾಲ್ ತೆರಿಗೆಯನ್ನು ನಿರ್ಮೂಲನೆ ಮಾಡುವುದರಿಂದ ಪೆಟ್ರೋಲ್ ಹಾಗೂ ಡೀಸೆಲ್ ದರ ಇಳಿಕೆಯಾಗಲಿದೆ. ಆದರೆ ತಜ್ಞರ ಪ್ರಕಾರ ಇವು ಹೇಳಿಕೆಗಳೇ ಹೊರತು ಜಾರಿಗೆ ಬರುವುದಿಲ್ಲ.
ವಿಂಡ್ ಫಾಲ್ ತೆರಿಗೆ ಎಂದರೆ.. ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆ ಆಧರಿಸಿ ಪ್ರತಿ 15 ದಿನಕ್ಕೊಮ್ಮೆ ವಿಂಡ್‌ಫಾಲ್ ತೆರಿಗೆ ನಿರ್ಧಾರವಾಗುತ್ತದೆ. 2022ರ ಜುಲೈ 1ರಂದು ವಿಂಡ್‌ಫಾಲ್ ತೆರಿಗೆಯನ್ನು ಭಾರತದಲ್ಲಿ ಜಾರಿಗೆ ತರಲಾಗಿತ್ತು. ಪ್ರಮುಖವಾಗಿ ಆಯಿಲ್ ಕಂಪನಿಗಳ ಮೇಲೆ ಹಾಕಲಾಗಿದ್ದ ತೆರಿಗೆಯಾಗಿದೆ. ಈ ತೆರಿಗೆಯನ್ನು ಆಯಿಲ್ ಕಂಪನಿಗಳು ಪ್ರತಿ ಲೀಟರ್ ಇಂಧನದ ಮೇಲೆ ಹಾಕಿ ಜನಸಾಮಾನ್ಯರಿಗೆ ನೀಡುತ್ತಿತ್ತು. ಇದೀಗ ಈ ವಿಂಡ್‌ಫಾಲ್ ತೆರಿಗೆ ತೆಗೆದು ಹಾಕುವ ಮೂಲಕ ಮಹತ್ವದ ಹೆಜ್ಜೆಯನ್ನು ಕೇಂದ್ರ ಸರ್ಕಾರ ಇಡುತ್ತದೆ ಎನ್ನಲಾಗಿದೆ. ಆದರೆ ಬಹುದೊಡ್ಡ ಆದಾಯವನ್ನು ಕಳೆದುಕೊಳ್ಳಲು ಸರ್ಕಾರ ಸಿದ್ಧವಾಗಿದೆಯೇ ಎಂಬ ಪ್ರಶ್ನೆಗೆ ಹೌದು ಎಂದು ಉತ್ತರ ನೀಡಬಲ್ಲ ಭೂಪ ಕಾಣುತ್ತಿಲ್ಲ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಂದರೆ ಮಾರ್ಚ್ 14ರಂದು ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಪ್ರತಿ ಲೀಟರ್ ಮೇಲೆ 2 ರೂಪಾಯಿ ಕಡಿತಗೊಳಿಸಿತ್ತು. ಇದಾದ ಬಳಿಕ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚೂ ಕಡಿಮೆ ಸ್ಥಿರವಾಗಿದೆ. ಆದರೂ ಪೆಟ್ರೋಲ್ ಬೆಲೆ 100 ರೂಪಾಯಿ ಗಡಿ ದಾಟಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯನ್ನು ಪರಿಶೀಲಿಸಿದ ನಂತರ ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ನಿರ್ಧರಿಸುತ್ತವೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ: ಲೀಟರ್‌ಗೆ 102.86 ರೂ, ಡೀಸೆಲ್ ಬೆಲೆ: 88.94 ರೂ. ಇದೆ. ಇತ್ತೀಚೆಗೆ ಗ್ಯಾರಂಟಿಗಳಿಗಾಗಿ ರಾಜ್ಯ ಸರ್ಕಾರವೂ ತೆರಿಗೆ ಹೆಚ್ಚಿಸಿದೆ. ಒಟ್ಟಿನಲ್ಲಿ ಜನರ ಹಣದಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಎರಡೂ ರಾಜ್ಯಭಾರ ಮಾಡುತ್ತಿವೆ.
ಇದು ಪ್ರತಿಪಕ್ಷಗಳ ಟೀಕೆಗೂ ಗುರಿಯಾಗಿದೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಸಂಬಂಧ ಪೋಸ್ಟ್ ಹಂಚಿಕೊಂಡಿರುವ ಮಲ್ಲಿಕಾರ್ಜುನ ಖರ್ಗೆ ಕಚ್ಚಾ ತೈಲ ದರ ಇಳಿಕೆಯಾಗಿದ್ದರೂ ಕೇಂದ್ರ ಸರ್ಕಾರ ಇಂಧನದ ಮೇಲೆ ತೆರಿಗೆ ಹೆಚ್ಚಿಸಿ ಜನರ ಹಣವನ್ನು ಲೂಟಿ ಮಾಡುವಲ್ಲಿ ನಿರತವಾಗಿದೆ. ಮೋದಿ ನೇತೃತ್ವದ ಸರ್ಕಾರದ ಇಂಧನ ಸೇರಿದಂತೆ ಇತರೆ ವಸ್ತುಗಳ ಮೇಲಿನ ದರ ಏರಿಕೆಯಿಂದ ಬೇಸತ್ತಿರುವ ಜನರು ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಮೂಲಕ ಅವರ ಆಡಳಿತವನ್ನು ತಿರಸ್ಕರಿಸಲಿದ್ದಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಶೇ 32.5ರಷ್ಟು ಕಡಿಮೆಯಾಗಿದೆ. ಪ್ರಸ್ತುತ ಕಚ್ಚಾ ತೈಲ ದರದ ಪ್ರಕಾರ ಪೆಟ್ರೋಲ್ ₹48, ಡೀಸೆಲ್ ಬೆಲೆ ₹69 ಆಗಬೇಕು ಖರ್ಗೆ ವಾದಿಸಿದ್ದಾರೆ.
ಅಂದಹಾಗೆ ಇಡೀ ದೇಶದಲ್ಲಿ ಅಂಡಮಾನ್ ನಿಕೋಬಾರ್ ನಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ ಕೇವಲ 82.42 ರೂ. ಆದರೆ, ಡೀಸೆಲ್ ಪ್ರತಿ ಲೀಟರ್‌ಗೆ 78.01 ರೂ. ಲೈವ್ ಮಿಂಟ್ ಪ್ರಕಾರ, ಭಾರತದಲ್ಲಿನ ಅತ್ಯಂತ ದುಬಾರಿ ಪೆಟ್ರೋಲ್ ಅದಿಲಾಬಾದ್‌ನಲ್ಲಿ ಪ್ರತಿ ಲೀಟರ್‌ಗೆ 109.41 ರೂ.ಗೆ ಮಾರಾಟವಾಗುತ್ತಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ 94.72 ರೂ ಮತ್ತು ಡೀಸೆಲ್ 87.62 ರೂ. ಪೋರ್ಟ್ ಬ್ಲೇರ್‌ನಲ್ಲಿ ಒಂದು ಲೀಟರ್ ಪೆಟ್ರೋಲ್ 82.42 ರೂ.ಗೆ ಮತ್ತು ಡೀಸೆಲ್ 78.01 ರೂ.ಗೆ ಲಭ್ಯವಿದೆ. ಲಕ್ನೋದಲ್ಲಿ ಇಂದು ಪೆಟ್ರೋಲ್ ಬೆಲೆ 94.65 ರೂ. ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 87.76 ರೂ.ಗೆ ಲಭ್ಯವಿದೆ.



