ಶಿವಣ್ಣ ಬಗ್ಗೆ ಯಾರನ್ನೇ ಕೇಳಿದರೂ ಒಳ್ಳೆಯ ಮಾತುಗಳನ್ನೇ ಆಡ್ತಾರೆ. ಅದರಲ್ಲೂ ಒಂದ್ಸಲ ಅವರನ್ನು ಭೇಟಿ ಮಾಡಿದವರೂ ಕೂಡಾ ಶಿವಣ್ಣ ವ್ಯಕ್ತಿತ್ವಕ್ಕೆ ಮಾರು ಹೋಗುತ್ತಾರೆ. ಇನ್ನು ದರ್ಶನ್ ಅವರ ಬಗ್ಗೆ, ಅವರ ಸಿಟ್ಟಿನ ಬಗ್ಗೆ ಟೀಕೆಗಳಿರಬಹುದು. ಆದರೆ ಸಿನಿಮಾ ಪ್ರೀತಿಯ ಬಗ್ಗೆ ದೂಸರಾ ಮಾತಿಲ್ಲ. ಹೊಸಬರ ಚಿತ್ರಗಳು ಇಷ್ಟವಾದರೆ ತಾವೇ ನಿಂತು ಪ್ರಮೋಟ್ ಮಾಡುವ ವ್ಯಕ್ತಿತ್ವ ದರ್ಶನ್ ಅವರದ್ದು. ಅತ್ತ ಧ್ರುವ ಸರ್ಜಾ ಅವರೂ ಅಷ್ಟೇ, ಚೆನ್ನಾಗಿ ಮಾತನಾಡುವ ಎಲ್ಲರನ್ನೂ ನಂಬುವವರು. ಅದಕ್ಕೆ ಅವರು ಬೆಲೆಯನ್ನೂ ತೆತ್ತಿದ್ದಾರೆ. ದುಷ್ಟ ಮನಸ್ಸಿನವರಲ್ಲ. ಅರ್ಜುನ್ ಸರ್ಜಾ ಅವರಿಂದ ಕಲಿತ ಪಾಠವನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬರುತ್ತಿದ್ದಾರೆ.
ಇದನ್ನೆಲ್ಲ ಬರೆಯೋದಕ್ಕೆ ಕಾರಣವಾಗಿದ್ದು ಮಡೇನೂರು ಮನು ಎಂಬ ಉದಯೋನ್ಮುಖ ನಟ. ಈಗಷ್ಟೇ ಬೆಳಕಿಗೆ ಬರುತ್ತಿರುವ ಈ ನಟನ ಒಂದು ಸಿನಿಮಾ ಈ ವಾರವಷ್ಟೇ ರಿಲೀಸ್ ಆಗಿ ದಬ್ಬಾಕ್ಕೊಂಡಿದೆ. ಈ ಮಧ್ಯೆ ಆತನ ವಿರುದ್ಧ ಸಹನಟಿಯೊಬ್ಬರು ಅತ್ಯಾಚಾರದ ಕೇಸನ್ನೂ ಹಾಕಿ, ಜೈಲು ಸೇರಿದ್ದೂ ಆಗಿದೆ. ಅದು ಅತ್ಯಾಚಾರವೋ.. ಸಮ್ಮತಿಯ ಕ್ರಿಯೆಯೋ.. ಅದರ ಬಗ್ಗೆಯೇ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಮಡೇನೂರು ಮನು ಪರ ಆತನ ಪತ್ನಿ ವಿದ್ಯಾ ನಿಂತಿದ್ದಾರೆ. ನನ್ನ ಗಂಡ ಒಳ್ಳೆಯವನು ಎನ್ನುತ್ತಿದ್ದಾರೆ. ಈ ನಡುವೆಯೇ ಮಡೇನೂರು ಮನುವಿನದ್ದು ಎನ್ನಲಾದ ಆಡಿಯೋ ಒಂದು ವೈರಲ್ ಆಗಿದೆ.
ಆ ಆಡಿಯೋದಲ್ಲಿ ಶಿವರಾಜ್ ಕುಮಾರ್ ಬಗ್ಗೆ ಮಾತನಾಡಿರುವ ಮಡೆನೂರು ಮನು ʻʻಶಿವಣ್ಣ ಇನ್ನು ಐದಾರು ವರ್ಷ ಬದುಕಿದ್ದರೆ ಹೆಚ್ಚು ಆಮೇಲೆ ಸತ್ತು ಹೋಗುತ್ತಾನೆ. ಧ್ರುವ ಸರ್ಜಾ ಇನ್ನೆಂಟು ವರ್ಷ ಮಾರ್ಕೆಟ್ನಲ್ಲಿ ಇರುತ್ತಾನೆ. ದರ್ಶನ್ ಈಗಾಗಲೇ ಸತ್ತು ಹೋಗಿದ್ದಾನೆ. ಇನ್ನು ನಾಲ್ಕು ವರ್ಷ ಕ್ರೇಜ್ ಇದ್ದರೆ ಹೆಚ್ಚು, ಇವರು ಮೂವರ ಮಧ್ಯೆ ಕಾಂಪಿಟೇಶನ್ ಕೊಡೋಕೆ ನಿಂತಿರೋ ಗಂಡು ಗಲಿ ಕಣ್ರಿ ನಾನುʼʼ ಎಂದು ಬಲು ಅಹಂಕಾರದಿಂದ ಮಾತನಾಡಿದ್ದಾನೆ.
ಆಡಿಯೋ ನಲ್ಲಿ ಇರುವುದು ಮಡೆನೂರು ಮನುನದ್ದೇ ಧ್ವನಿ ಎನ್ನಲಾಗುತ್ತಿದೆ. ಎಲ್ಲೋ ಮದ್ಯ ಸೇವಿಸುವಾಗ ಗೆಳೆಯರ ಮುಂದೆ ಹೇಳಿರುವ ಮಾತುಗಳನ್ನು ಯಾರೋ ರೆಕಾರ್ಡ್ ಮಾಡಿಕೊಂಡು ಈಗ ವೈರಲ್ ಮಾಡಿದ್ದಾರೆ. ಈವರೆಗೆ ಮಡೆನೂರು ಮನುಗೆ ಚಿತ್ರರಂಗದಿಂದ ಅಷ್ಟೋ ಇಷ್ಟೊ ಬೆಂಬಲ ಸಿಗುತ್ತಿತ್ತು, ಈಗ ಈ ಆಡಿಯೋ ವೈರಲ್ ಆದ ಬಳಿಕ ಆ ಬೆಂಬಲವೂ ನಿಂತು ಹೋಗುವ ಸಾಧ್ಯತೆ ಇದೆ.
ಎಲ್ಲ ಓಕೆ. ಆದರೆ ಚಿತ್ರರಂಗದ ಈಗಿನ ನಟರಿಗೆ ಏನಾಗಿದೆ. ಹೊಟ್ಟೆಗೆ ದ್ರವ ಬಿದ್ದ ಕೂಡಲೇ ನಾನೇ ಗ್ರೇಟ್ ಎಂಬ ಅಹಂಕಾರ ಬರುವುದು ಹೇಗೆ..? ಏಕೆ..? ಅದೇ ಅವರ ವ್ಯಕ್ತಿತ್ವವಾ.. ಕುಡಿದ ಮೇಲೆ ಅದು ಹೊರಗೆ ಬರುತ್ತಾ.. ಏಕೆಂದರೆ ಹೊರಗೆ ಕ್ಯಾಮೆರಾಗಳ ಎದುರು ಕಾಲಿಗೆ ಬೀಳುವವರೇ.. ಅವರವರ ಗೆಳೆಯರ ಕ್ಯಾಂಪಿನಲ್ಲಿ ಹೊಟ್ಟೆಗೆ ದ್ರವ ಬಿದ್ದ ಮೇಲೆ ಗಂಡಸರಾಗುವ ಸಾಹಸಕ್ಕೆ ಕೈ ಹಾಕುತ್ತಾರೆ. ನಿಜ ಹೊರಬರುವುದೇ ಆವಾಗ..



