ಒಂದ್ ಮದ್ವೆ ಮಾಡ್ಬಿಡು.. ಹುಡ್ಗ ನೆಟ್ಟಗಾಗ್ತಾನೆ ಅನ್ನೋ ಮಾತನ್ನ ಕೇಳಿಯೇ ಇರ್ತೀವಿ. ಮದುವೆ ಆದ ಮೇಲೆ ಎಲ್ಲರೂ ಬದಲಾಗುತ್ತಾರೆ. ಗಂಡು ಅಥವಾ ಹೆಣ್ಣು ಅನ್ನೋ ವ್ಯತ್ಯಾಸವೇನಿಲ್ಲ. ಅದೇನಾಗುತ್ತೋ ಏನೋ.. ಗೂಳಿಯಂತೆ ಇರುವ ಹುಡುಗನೂ ಕೋಲೆ ಬಸವನಾಗಿ ಬಿಡುತ್ತಾನೆ.
ಮದುವೆಯಾದ ಮೇಲೆ ಅಭಿಷೇಕ್ ಅಂಬರೀಷ್ ಕೂಡಾ ಬದಲಾಗಿದ್ದಾರೆ. ಮೊದಲಿದ್ದ ಅಭಿಷೇಕ್ ಅಂಬರೀಷ್ ಸ್ವಲ್ಪ ಚೇಂಜ್ ಆಗಿದ್ಧಾರೆ. ಈಗ ಶಿಸ್ತು ಹೆಚ್ಚಿದೆ. ಸಮಯಕ್ಕೆ ಸರಿಯಾಗಿ ಮನೆಗೆ ಬರುತ್ತೇನೆ. ತಡರಾತ್ರಿ ಪಾರ್ಟಿ, ಓಡಾಟ, ಕಾರ್ ಡ್ರೈವ್ ಅಂತೆಲ್ಲ ಹೊರಗೆ ಓಡಾಡುವುದಿಲ್ಲ. ಜತೆಗೆ ಬೆಳಗ್ಗೆ ಬೇಗ ಏಳುತ್ತೇನೆ’ ಎಂದು ಹೇಳಿಕೊಳ್ಳುವ ಅಭಿಷೇಕ್ ಕೆಲವು ಬ್ಯಾಡ್ ಮ್ಯಾನರ್ಸ್ ಬಿಟ್ಟಿದ್ಧಾರಂತೆ. ಜೂನ್‌ನಲ್ಲಿ ಅವೀವಾ ಬಿದ್ದಪ್ಪ ಜತೆ ಹಸೆಮಣೆ ಏರಿದ್ದ ಅಭಿ ಜೀವನ ಸ್ವಲ್ಪ ಬದಲಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ತಾರೆ.
ಈ ವಾರ ಬ್ಯಾಡ್ ಮ್ಯಾನರ್ಸ್ ಮೂಲಕ ತೆರೆಗೆ ಬರುತ್ತಿರುವ ಅಭಿಷೇಕ್ ಅವರಿಗೆ ಚಿತ್ರದ ಮೇಲೆ ಭಾರಿ ನಿರೀಕ್ಷೆಯಂತೂ ಇದೆ. ದುನಿಯಾ ಅವರಿಗೆ ನನ್ನಲ್ಲಿ ಅದೇನು ಇಷ್ಟವಾಯಿತೋ ಗೊತ್ತಿಲ್ಲ. ದೊಡ್ಡ ದೊಡ್ಡ ಸ್ಟಾರ್ ಚಿತ್ರಗಳನ್ನೆಲ್ಲ ಬಿಟ್ಟು ನನ್ನನ್ನು ಹಾಕಿಕೊಂಡು ಸಿನಿಮಾ ಮಾಡಿದ್ದಾರೆ. ಅವರು ಕಥೆ, ಪಾತ್ರವನ್ನು ಹಂತ ಹಂತವಾಗಿ ಕಲಾವಿದರ ತಲೆಗೆ ತುಂಬುತ್ತಾ ಹೋಗುತ್ತಾರೆ. ಹೀಗಾಗಿ ನಾವು ಆ ಪಾತ್ರವನ್ನು ಆವರಿಸಿಕೊಳ್ಳಲು ಹೆಚ್ಚು ಕಷ್ಟವಾಗಲಿಲ್ಲ. ಅಂತಹ ನಿರ್ದೇಶಕರ ಜತೆ ಕೆಲಸ ಮಾಡುವುದೇ ಖುಷಿ. ನಾನಿಲ್ಲಿ ರುದ್ರ ಎಂಬ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದೇನೆ ಎಂದು ಮಾಹಿತಿ ನೀಡುವ ಅಭಿಷೇಕ್ ಅಂಬರೀಷ್ ಸೂರಿಯವರ ವರ್ಕಿಂಗ್ ಸ್ಟೈಲ್‌ನ್ನು ಹೊಗಳುತ್ತಾರೆ. ಏಕೆಂದರೆ ಈಗಾಗಲೇ ಬ್ಯಾಡ್ ಮ್ಯಾನರ್ಸ್ ಸಿನಿಮಾಗೆ ಸುಮಲತಾ, ದರ್ಶನ್, ಅವಿವಾರ ಶಹಬ್ಬಾಸ್ ಸಿಕ್ಕಿದೆ.
ಸಿನಿಮಾ 175+ ಥಿಯೇಟರುಗಳಲ್ಲಿ ರಿಲೀಸ್ ಆಗುತ್ತಿದ್ದು, ನಿರ್ಮಾಪಕ ಸುಧೀರ್, ವಿತರಕ ಜಯಣ್ಣ ಇಬ್ಬರೂ ರಿಲ್ಯಾಕ್ಸ್ ಆಗಿದ್ಧಾರೆ. ಗೆದ್ದೇ ಗೆಲ್ತೇವೆ ಅನ್ನೋ ವಿಶ್ವಾಸದಲ್ಲಿದ್ಧಾರೆ. ಏಕೆಂದರೆ ಬಂದೂಕುಗಳ ಜಗತ್ತಿನಲ್ಲಿ ರುದ್ರನ ಜರ್ನಿ ಸಾಗಲಿದೆ.
ಸೂರಿ. ಪ್ರತಿ ಸಿನಿಮಾ ಬಂದಾಗಲೂ ಆ ಸಿನಿಮಾ ಹೆಸರಿನಿಂದಲೇ ಫೇಮಸ್ ಆಗುವ ನಿರ್ದೇಶಕ. ರೌಡಿಸಂ, ವಿಕ್ಷಿಪ್ತ ಪಾತ್ರಗಳು, ರಿವರ್ಸ್ ಸ್ಕ್ರೀನ್ ಪ್ಲೇ, ಬೆಚ್ಚಿ ಬೀಳಿಸುವ ದೃಶ್ಯಗಳು, ಹಸಿ ಹಸಿ ಸಂಭಾಷಣೆ, ಕ್ರೌರ್ಯ.. ಹೀಗೆ ಪ್ರತಿಯೊಂದನ್ನೂ ವಿಭಿನ್ನವಾಗಿಯೇ ತೋರಿಸುವ ಸೂರಿ, ಬ್ಯಾಡ್ ಮ್ಯಾನರ್ಸ್ ಸೂರಿಯಾಗುವ ಸಮಯ ಇದು. ಈ ಬಾರಿ ಬ್ಯಾಡ್ ಮ್ಯಾನರ್ಸ್ ಕಥೆಯಲ್ಲಿ ಬಂದೂಕುಗಳ ಕಥೆ ಹೇಳುತ್ತಿದ್ಧಾರೆ. . ಬ್ಯಾಡ್ ಮ್ಯಾನರ್ಸ್‌ಗಾಗಿ, ಬಂದೂಕುಗಳ ವಿಷಯದ ಮೇಲೆ ಗಮನ ಕೇಂದ್ರೀಕರಿಸಿದ ಸೂರಿ, ಬಂದೂಕು ಸಂಗ್ರಹಣೆ ಮತ್ತು ವಿತರಣೆಯ ಸುತ್ತ ನಡೆಯುವ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಕಥೆ ಹೇಳೋಕೆ ಆಯ್ಕೆ ಮಾಡಿಕೊಂಡಿರೋ ಅಭಿಷೇಕ್ ಅಂಬರೀಷ್ ಅವರನ್ನ. ಅಭಿಗೆ ಇದು 2ನೇ ಸಿನಿಮಾ.
ಈಗಾಗಲೇ ಚಿತ್ರದ ಟ್ರೇಲರ್ ಕುತೂಹಲ ಹುಟ್ಟಿಸಿದೆ. ಯಾವುದೇ ಕ್ಲೂ ಕೊಡದೆ ವಿಭಿನ್ನವಾಗಿಯೇ ಟ್ರೇಲರ್ ಮುಂದಿಟ್ಟಿರುವ ಸೂರಿ, ಚಿತ್ರದಲ್ಲೊಂದು ಚೆಂದದ ಪ್ರೇಮ ಕಥೆಯನ್ನೂ ಇಟ್ಟುಕೊಂಡಿದ್ಧಾರೆ. ರಚಿತಾ ರಾಮ್, ಪ್ರಿಯಾಂಕ ಕುಮಾರ್ ನಾಯಕಿಯಾಗಿರುವ ಸಿನಿಮಾ ಬ್ಯಾಡ್ ಮ್ಯಾನರ್ಸ್..



