ಅಜ್ಜಿಯಾಗುತ್ತಿದ್ದಾರೆ ಸುಮಲತಾ ಅಂಬರೀಷ್. ಹೌದು, ಅಂಬರೀಶ್ ಮನೆಯಲ್ಲೀಗ ಸಂಭ್ರಮ ತುಂಬಿ ತುಳುಕುತ್ತಿದೆ. ಸುಮಲತಾ ಅಂಬರೀಷ್ ಅಜ್ಜಿಯಾಗುತ್ತಿದ್ದಾರೆ. ಅರ್ಥಾತ್.. ಅವಿವಾ ಬಿದ್ದಪ್ಪ ತಾಯಿಯಾಗುತ್ತಿದ್ದಾರೆ. ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಪ್ಪ ಆಗ್ತಿದ್ದಾರೆ. ಸಮಲತಾ ಅಂಬರೀಶ್ ಕುಟುಂಬಸ್ಥರು ಹೊಸ ಅತಿಥಿಯ ಸ್ವಾಗತಕ್ಕೆ ಸಿದ್ಧರಾಗುತ್ತಿದ್ದಾರೆ.
ಅಭಿಷೇಕ್ ಅವಿವಾ ಬಿದ್ದಪ್ಪ ಅವರ ಮದುವೆ ಕಳೆದ ವರ್ಷ ಜೂನ್ 5ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆದಿತ್ತು. ವಿವಾಹ ವಾರ್ಷಿಕೋತ್ಸವ ಒಂದು ವರ್ಷ ಪೂರೈಸುವ ಹೊತ್ತಿನಲ್ಲೇ ಗುಡ್ ನ್ಯೂಸ್ ಕೊಟ್ಟಿದ್ದಾರೆ ಅಭಿ-ಅವಿವಾ.
ಶೀಘ್ರದಲ್ಲೇ ಅವಿವಾ ಬಿದ್ದಪ್ಪ ಅವರ ಸೀಮಂತ ಶಾಸ್ತ್ರಕ್ಕೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಬಿಷೇಕ್ ಅವರ ಮನೆಯಲ್ಲಿಯೇ ಸೀಮಂತ ಶಾಸ್ತ್ರ ನಡೆಯಲಿದೆ. ಹಾಗಂತ ಇದು ಸಾರ್ವಜನಿಕ ಸಮಾರಂಭ ಅಲ್ಲ. ಕೇವಲ ಎರಡೂ ಕುಟುಂಬದ ಆತ್ಮೀಯರು, ಪರಮಾಪ್ತರಿಗಷ್ಟೇ ಸೀಮಂತ ಶಾಸ್ತ್ರ ಇರಲಿದೆ.
ಅಭಿಷೇಕ್ ಕೂಡಾ ಬ್ಯಾಡ್ ಮ್ಯಾನರ್ಸ್ ಚಿತ್ರದ ನಂತರ ಯಾವುದೇ ಚಿತ್ರದಲ್ಲಿ ನಟಿಸಿಲ್ಲ. ಟೇಕಾಫ್ ಆಗಿದ್ದ ಚಿತ್ರಗಳು ನಿಂತಲ್ಲಿಯೇ ನಿಂತಿವೆ. ಈ ನಡುವೆಯೇ ಮನೆಗೆ ಹೊಸ ಸದಸ್ಯ ಬರುತ್ತಿರುವುದು ಅಭಿಷೇಕ್-ಅವಿವಾ ಅವರ ಸಂಭ್ರಮ ಸಡಗರ ಹೆಚ್ಚಿಸಿದೆ. ಏಕೆಂದರೆ.. ಅಂಬರೀಷ್-ಸುಮಲತಾ ದಂಪತಿಗೆ ಅಭಿಷೇಕ್ ಒಬ್ಬನೇ ಮಗ. ಅಭಿಷೇಕ್ ಜನಿಸಿದ ನಂತರ ಆ ಮನೆಗೆ ಬರುತ್ತಿರುವ ಮೊದಲ ಪುಟಾಣಿ ಮೆಂಬರ್ ಅವಿವಾ ಅವರ ಕೂಸು. ಹೀಗಾಗಿ ಸಂಭ್ರಮ ಹೆಚ್ಚಾಗಿಯೇ ಇದೆ.



