ನಟ ಅಮೀರ್ ಖಾನ್ ಕಾಂಗ್ರೆಸ್ ವಿರುದ್ಧ ದೂರು ಕೊಟ್ಟಿದ್ದಾರಂತೆ ಎನ್ನುವುದೇ ದೊಡ್ಡ ಸುದ್ದಿ. ಆದರೆ.. ಇದು ನಿಜ. ಬಾಲಿವುಡ್ ನಟ ಅಮೀರ್ ಖಾನ್ ಕಾಂಗ್ರೆಸ್ ವಿರುದ್ಧ ದೂರು ಕೊಟ್ಟಿದ್ಧಾರೆ. ಕಾರಣವೇನೆಂದು ನೋಡಿದರೆ.. ಅಮೀರ್ ಖಾನ್ ಹೆಸರು ಬಳಸಿಕೊಂಡು ಪ್ರಧಾನಿ ನರೇಂದ್ರ ಮೋದಿಗೆ ಕೆಸರು ಎರಚುವ ಪ್ರಯತ್ನ ನಡೆಯುತ್ತಿದೆ ಎನ್ನುವುದು ಅಮೀರ್ ಖಾನ್ ಕೊಟ್ಟಿರುವ ಕಂಪ್ಲೇಂಟ್ ಸಾರಾಂಶ. ಇಷ್ಟಕ್ಕೂ ಅಮೀರ್ ಖಾನ್ ದೂರು ಕೊಡುವಂತೆ ಮಾಡಿದ್ದು ಒಂದು ಡೀಪ್ ಫೇಕ್ ವಿಡಿಯೋ. ಆ ವಿಡಿಯೋ ನೋಡಿದವರು.. ಮೋದಿ ಸುಳ್ಳು ಹೇಳುತ್ತಿದ್ಧಾರೆ ಎಂದು ನಂಬಿಕೊಳ್ಳಬೇಕು. ಸತ್ಯಮೇವಜಯತೆ ಕಾರ್ಯಕ್ರಮದ ವಿಡಿಯೋ ಇಟ್ಟುಕೊಂಡು ಸುಳ್ಳು ಸುದ್ದಿ ಸೃಷ್ಟಿಸಲಾಗಿತ್ತು.
ಪ್ರಕರಣ ಏನು?
ನರೇಂದ್ರ ಮೋದಿ 2014ರಲ್ಲಿ ಚುನಾವಣೆ ಪ್ರಚಾರದ ವೇಳೆ, ದೇಶದ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಕೊಡುತ್ತೇನೆ ಎಂದು ಹೇಳಿದ್ದರು ಎನ್ನುವುದು ಕಾಂಗ್ರೆಸ್ಸಿಗರ ಆರೋಪ. ಅದನ್ನು ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನ ಪ್ರತಿಯೊಬ್ಬ ನಾಯಕ ಹಾಗೂ ಕಾರ್ಯಕರ್ತರೂ ಹೇಳುತ್ತಾರೆ. ಆದರೆ.. ವಾಸ್ತವದಲ್ಲಿ ಮೋದಿ ಹಾಗೆ ಹೇಳಿಲ್ಲ. ಬಿಜೆಪಿಯವರು ಹೇಳಿದ್ದರೂ.. ಕಾಂಗ್ರೆಸ್ಸಿಗರು ಬಿಟ್ಟಿಲ್ಲ. ಹೇಳುತ್ತಲೇ ಇದ್ದಾರೆ.
ಆದರೆ.. ರಾಜಕೀಯ ಆರೋಪ ಪ್ರತ್ಯಾರೋಪವಾಗಿದ್ದ ಈ ಪ್ರಕರಣದಲ್ಲೇ ಅಮೀರ್ ಖಾನ್ ಕಾಂಗ್ರೆಸ್ ವಿರುದ್ಧ ಸಿಟ್ಟಾಗಿರುವುದು. ಏಕೆಂದರೆ. ನಟ ಆಮಿರ್ ಖಾನ್ ಅವರು ಈ ಹಿಂದೆ ‘ಸತ್ಯಮೇವ ಜಯತೇ’ ಎಂಬ ಕಾರ್ಯಕ್ರಮವೊಂದನ್ನು ಮಾಡುತ್ತಿದ್ದರು. ಆ ಕಾರ್ಯಕ್ರಮದ ದೃಶ್ಯವನ್ನು ಇಟ್ಟುಕೊಂಡು ಕಾಂಗ್ರೆಸ್ ಆಡಳಿತಾರೂಢ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಡೀಪ್ ಫೇಕ್ ತಂತ್ರಜ್ಞಾನದ ಮೂಲಕ ವಿಡಿಯೋ ಮಾಡಿ ಸೋಶಿಯಲ್ ಮಿಡಿಯಾದಲ್ಲಿ ಹರಿಬಿಡಲಾಗಿದೆ. ಡೀಪ್ ಫೇಕ್ ಮೂಲಕ ಸೃಷ್ಟಿಸಿರುವ ಕಾಂಗ್ರೆಸ್ ಜಾಹೀರಾತಿನಲ್ಲಿ, ನಾಗರಿಕರ ಬ್ಯಾಂಕ್ ಖಾತೆಗಳಿಗೆ 15 ಲಕ್ಷ ರೂ. ಜಮಾ ಮಾಡುವ ಬಿಜೆಪಿಯ ಭರವಸೆಯನ್ನು ನಟ ಆಮಿರ್ ಖಾನ್ ಟೀಕಿಸುತ್ತಾರೆ. ಆದರೆ ಇದೂ ಸುಳ್ಳು.
ಅಮೀರ್ ಖಾನ್ ದೂರು ಏನು?
ಮುಂಬೈ ಪೊಲೀಸರು, ಸೈಬರ್ ಕ್ರೈಂ ಸೆಲ್ ಸೇರಿದಂತೆ ಕಾನೂನು ಅಧಿಕಾರಿಗಳವರೆಗೂ ಆಮಿರ್ ಖಾನ್ ದೂರು ತಲುಪಿದೆ. ಇದೊಂದು ನಕಲಿ ವಿಡಿಯೋ ಮತ್ತು ಸುಳ್ಳು ಮಾಹಿತಿ ಎಂಬ ಹಿನ್ನೆಲೆಯಲ್ಲಿ ಸೈಬರ್ ಕ್ರೈಂ ಸೆಲ್‌ನಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಅಮೀರ್ ಖಾನ್ ವಾದವೇನು?
ವೈಯಕ್ತಿಕವಾಗಿ ನಟ ಅಮೀರ್ ಖಾನ್ ಎಲ್ಲಿಯೂ ಮಾತನಾಡಿಲ್ಲ. ಆದರೆ.. ಅವರ ವಕ್ತಾರರು ದೂರು ಕೊಟ್ಟಿದ್ದಷ್ಟೇ ಅಲ್ಲದೆ, ಸ್ಪಷ್ಟನೆಯನ್ನೂ ಕೊಟ್ಟಿದ್ಧಾರೆ. ಮಿರ್ ಖಾನ್ ಅವರು ತಮ್ಮ 35 ವರ್ಷಗಳ ವೃತ್ತಿಜೀವನದುದ್ದಕ್ಕೂ ಯಾವುದೇ ರಾಜಕೀಯ ಪಕ್ಷವನ್ನು ಅವರು ಟೀಕೆ ಮಾಡಿಲ್ಲ. ಈ ಹಿಂದಿನ ಹಲವು ಚುನಾವಣೆಗಳಲ್ಲಿ ಜಾಗೃತಿ ಅಭಿಯಾನಗಳ ಮೂಲಕ ಸಾರ್ವಜನಿಕ ಜಾಗೃತಿ ಮೂಡಿಸುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದಾರೆ. ಇದೀಗ ಡೀಪ್‌ಫೇಕ್ ವಿಡಿಯೋ ಮೂಲಕ ಸುಳ್ಳು ಮತ್ತು ದಾರಿತಪ್ಪಿಸುವ ಕೆಲಸವಾಗುತ್ತಿದೆ ಎನ್ನುವುದು ಅಮೀರ್ ಖಾನ್ ವಕ್ತಾರರ ವಾದ.
ನಟ ಅಮೀರ್ ಖಾನ್ ಅವರನ್ನು ಹಿಂದೂವಾದಿಗಳು ಕಾಂಗ್ರೆಸ್ಸಿಗ ಅಥವಾ ಎಡ ಪಂಥೀಯ ಎಂದೇ ಟೀಕಿಸ್ತಾರೆ. ಮುಸ್ಲಿಂ ಎನ್ನುವುದು ಒಂದು ಕಾರಣವಾದರೆ.. ಹಿಂದೊಮ್ಮೆ ಭಾರತದಲ್ಲಿ ಇರುವುದಕ್ಕೆ ಭಯವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದುದು ಕೂಡಾ ಒಂದು ಕಾರಣವಾಗಿತ್ತು. ಅಲ್ಲದೆ ಪಿಕೆ ಸಿನಿಮಾದಲ್ಲಿ ಹಿಂದೂ ಧರ್ಮದ ಆಚರಣೆಗಳನ್ನು ಉದ್ದೇಶ ಪೂರ್ವಕವಾಗಿ ಲೇವಡಿ ಮಾಡಿದ್ದಾರೆ ಎಂಬುದು ಹಿಂದೂ ಸಂಘಟನೆಗಳ ವಾದ. ಇದರ ಬಿಸಿ ಅಮೀರ್ ಖಾನ್ ಅವರಿಗೂ ತಟ್ಟಿದೆ. ಇಂತಹ ಘಟನೆಗಳ ನಡುವೆಯೇ ಅಮೀರ್ ಖಾನ್ ಕಾಂಗ್ರೆಸ್ ವಿರುದ್ಧ ದೂರು ಕೊಟ್ಟಿದ್ಧಾರೆ.



